ADVERTISEMENT

ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಿ: ಹೈಕೋರ್ಟ್ ನ್ಯಾಯಮೂರ್ತಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 16:08 IST
Last Updated 8 ಜುಲೈ 2024, 16:08 IST
ಕಾರ್ಯಕ್ರಮದಲ್ಲಿ ನ್ಯಾ.ಕೃಷ್ಣ ಎಸ್. ದೀಕ್ಷಿತ್ ಮಾತನಾಡಿದರು. ಸೌಂದರ್ಯ ಕಾನೂನು ಕಾಲೇಜಿನ ಪ್ರಾಂಶುಪಾಲ ಬಿ.ಪಿ.ಮಹೇಶ್, ಸೌಂದರ್ಯ ಪಿ. ಮಂಜಪ್ಪ, ಡಿ.ಎಂ.ಹೆಗ್ಡೆ ಹಾಗೂ ಸೌಂದರ್ಯ ಎಜುಕೇಷನಲ್ ಟ್ರಸ್ಟ್‌ನ ಸಿಇಒ ಕೀರ್ತನ್ ಕುಮಾರ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ನ್ಯಾ.ಕೃಷ್ಣ ಎಸ್. ದೀಕ್ಷಿತ್ ಮಾತನಾಡಿದರು. ಸೌಂದರ್ಯ ಕಾನೂನು ಕಾಲೇಜಿನ ಪ್ರಾಂಶುಪಾಲ ಬಿ.ಪಿ.ಮಹೇಶ್, ಸೌಂದರ್ಯ ಪಿ. ಮಂಜಪ್ಪ, ಡಿ.ಎಂ.ಹೆಗ್ಡೆ ಹಾಗೂ ಸೌಂದರ್ಯ ಎಜುಕೇಷನಲ್ ಟ್ರಸ್ಟ್‌ನ ಸಿಇಒ ಕೀರ್ತನ್ ಕುಮಾರ್ ಪಾಲ್ಗೊಂಡಿದ್ದರು.   

ಬೆಂಗಳೂರು: ‘ವ್ಯಾಜ್ಯಗಳನ್ನು ಅನವಶ್ಯಕವಾಗಿ ನ್ಯಾಯಾಲಯಕ್ಕೆ ತಂದು ಸುದೀರ್ಘವಾಗಿ ಬೆಳೆಸುವ ಬದಲು, ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ತಿಳಿಸಿದರು. 

ಸೌಂದರ್ಯ ಕಾನೂನು ಕಾಲೇಜು ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾನೂನು ಸೇವೆಗಳ ಕ್ಲಿನಿಕ್‌ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು. 

‘ದೇಶದಲ್ಲಿ ಸಾಕಷ್ಟು ಪ್ರಕರಣಗಳು ಹಲವು ವರ್ಷಗಳಿಂದ ಇತ್ಯರ್ಥವಾಗದೇ ಉಳಿದಿವೆ. ಇದಕ್ಕೆ ವಕೀಲರು ಮತ್ತು ನ್ಯಾಯಾಧೀಶರು ಮಾತ್ರ ಕಾರಣವಲ್ಲ. ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಹೆಚ್ಚುತ್ತಿರುವ ವಿವಾದ, ಮನಸ್ತಾಪಗಳೂ ಕಾರಣ. ವ್ಯಾಜ್ಯದ ಮೇಲೆ ಮೇಲ್ಮನವಿಗಳನ್ನು ಸಲ್ಲಿಸಿ, ವರ್ಷಗಟ್ಟಲೆ ಕಾಲಹರಣ ಮಾಡುವುದರಿಂದ ಪ್ರಕರಣಗಳು ಇತ್ಯರ್ಥಗೊಳ್ಳುವುದು ವಿಳಂಬವಾಗುತ್ತಿವೆ. ಹೀಗಾಗಿ, ವ್ಯಾಜ್ಯವನ್ನು ಒಂದು ಚೌಕಟ್ಟಿನೊಳಗೆ ಬಗೆಹರಿಸುವ ಅಗತ್ಯವಿದೆ. ಅದಕ್ಕಾಗಿ ವಕೀಲರು ತಮ್ಮ ಬಳಿ ಬರುವ ಕಕ್ಷೀದಾರರಿಗೆ ಈ ಬಗ್ಗೆ ತಿಳಿಹೇಳಿ, ಸೌಹಾರ್ದಯುತವಾಗಿ ವ್ಯಾಜ್ಯ ಬಗೆಹರಿಸಿಕೊಳ್ಳಲು ಸಹಕರಿಸಬೇಕು’ ಎಂದು ತಿಳಿಸಿದರು.

ADVERTISEMENT

ವಕೀಲರ ವಾಹಿನಿ ಪತ್ರಿಕೆಯ ಸಂಪಾದಕ ಮತ್ತು ಪ್ರಕಾಶಕ ಡಿ.ಎಂ.ಹೆಗ್ಡೆ, ‘ನ್ಯಾಯದಾನಕ್ಕೆ ಸಂಬಂಧಿಸಿದಂತೆ ಗೆದ್ದವ ಸೋತ, ಸೋತವ ಸತ್ತ ಎಂಬ ಮಾತಿದೆ. ಯಾವುದೇ ಪ್ರಕರಣ ಇರಲಿ ಇಬ್ಬರಿಗೂ ಸಮಾಧಾನವಾಗುವಂತೆ ಬಗೆಹರಿಸುವ ವ್ಯವಸ್ಥೆ ಹೆಚ್ಚಾಗಬೇಕು. ಅದಕ್ಕಾಗಿ ಈಗ ಪರ್ಯಾಯ ವಿವಾದ ಪರಿಹಾರ ಎಂಬ ವ್ಯವಸ್ಥೆ ಜಾರಿಯಲ್ಲಿದೆ. ನ್ಯಾಯಾಲಯಗಳೂ ಅದಕ್ಕೆ ಸಹಕರಿಸುತ್ತವೆ’ ಎಂದು ತಿಳಿಸಿದರು.

ಸೌಂದರ್ಯ ಕಾಲೇಜಿನ ಅಧ್ಯಕ್ಷ ಸೌಂದರ್ಯ ಪಿ. ಮಂಜಪ್ಪ, ‘ಜಗತ್ತಿನಲ್ಲಿ ಭಾರತದ ಮಕ್ಕಳಿಗೆ ಮತ್ತು ಅವರ ಜ್ಞಾನಕ್ಕೆ ಬೇಡಿಕೆಯಿದೆ. ಹೀಗಾಗಿಯೇ ಸಾಕಷ್ಟು ಮಂದಿ ವಿದೇಶಗಳಿಗೆ ತೆರಳುತ್ತಾರೆ. ಅವರು ಇಲ್ಲಿಯೇ ಉಳಿದು, ದೇಶಕ್ಕಾಗಿ ಸೇವೆ ಸಲ್ಲಿಸುವಂತಹ ವ್ಯವಸ್ಥೆ ಸೃಷ್ಟಿಯಾಗಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.