ADVERTISEMENT

ಬೆಂಗಳೂರು ನಗರದಲ್ಲಿ ಅಡ್ಡಾದಿಡ್ಡಿ ಅಭಿವೃದ್ಧಿಗೆ ನಿರ್ಬಂಧ

ಬಿಡಿಎಯಿಂದ ವಿನ್ಯಾಸ ನಕ್ಷೆ ಅನುಮೋದನೆ ಇಲ್ಲದಿದ್ದರೆ ಬಿಬಿಎಂಪಿಯಿಂದ ಕಟ್ಟಡ ನಕ್ಷೆ ಇಲ್ಲ

ಆರ್. ಮಂಜುನಾಥ್
Published 14 ಅಕ್ಟೋಬರ್ 2024, 22:17 IST
Last Updated 14 ಅಕ್ಟೋಬರ್ 2024, 22:17 IST
building
building   

ಬೆಂಗಳೂರು: ನಗರದ ಹೊರವಲಯದಲ್ಲಿ ಅಡ್ಡಾದಿಡ್ಡಿ ಅಭಿವೃದ್ಧಿ ಚಟುವಟಿಕೆಗಳನ್ನು ನಿರ್ಬಂಧಿಸಲು ಬಿಬಿಎಂಪಿ ನಿರ್ಧರಿಸಿದೆ. ಬಿಡಿಎಯಿಂದ ‘ವಿನ್ಯಾಸ ನಕ್ಷೆ’ ಅನುಮೋದನೆ ಪಡೆಯದ ನಿವೇಶನಗಳಿಗೆ ಖಾತೆ, ಕಟ್ಟಡ ನಕ್ಷೆ ಮಂಜೂರು ಮಾಡುವುದನ್ನು ನಿಷೇಧಿಸಿದೆ.

ಕರ್ನಾಟಕ ನಗರ ಮತ್ತು ಗ್ರಾಮಾಂತರ (ಕೆಟಿಸಿಪಿ) ಕಾಯ್ದೆ 1961ರ ಕಲಂ 17ರಂತೆ  ಭೂಪರಿವರ್ತನೆಯಾದ ಜಮೀನುಗಳಿಗೆ ಸ್ಥಳೀಯ ಯೋಜನಾ ಪ್ರಾಧಿಕಾರದಿಂದ ‘ವಿನ್ಯಾಸ ನಕ್ಷೆ’ ಅನುಮೋದನೆ ಪಡೆದುಕೊಂಡಿರಬೇಕು. ಅಂತಹ ಏಕ ನಿವೇಶನ ಹಾಗೂ ಬಡಾವಣೆಗಳಿಗೆ ಮಾತ್ರ ಬಿಬಿಎಂಪಿ ಖಾತೆ ನೀಡಿ, ಕಟ್ಟಡ ನಕ್ಷೆ ಮಂಜೂರು ಮಾಡಬಹುದು.

ಈ ಕಾಯ್ದೆಯನ್ನು ಉಲ್ಲಂಘಿಸಿ ಬಿಬಿಎಂಪಿಯಿಂದ 20 ಸಾವಿರ ಚದರ ಮೀಟರ್‌ಗಿಂತ ಕಡಿಮೆ ವಿಸ್ತೀರ್ಣದ ಪ್ರದೇಶಗಳಿಗೆ ನೇರವಾಗಿ ಖಾತೆ ಮಾಡಿ, ನಕ್ಷೆ ಅನುಮೋದನೆ ನೀಡಲಾಗುತ್ತಿತ್ತು. ಇದಕ್ಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತಕರಾರು ತೆಗೆದಿದೆ. ‘ಈ ಅನುಮೋದನೆ ಕೆಟಿಸಿಪಿ ಕಾಯ್ದೆಗೆ ವ್ಯತಿರಿಕ್ತವಾದದ್ದು’ ಎಂದು 2024ರ ಸೆಪ್ಟೆಂಬರ್‌ 4ರಂದು ಪತ್ರ ಬರೆದು ಬಿಬಿಎಂಪಿಯ ಗಮನ ಸೆಳೆದಿತ್ತು.

ADVERTISEMENT

ಬಿಬಿಎಂಪಿ ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿ, ಕಾನೂನು ತಜ್ಞರ ಸಲಹೆ ಪಡೆದಿದೆ. ಅದರಂತೆ ಆರು ವರ್ಗೀಕರಣದಲ್ಲಿ ಏಕ ನಿವೇಶನ, ಬಹು ನಿವೇಶನ ಅಥವಾ ಬಡಾವಣೆಯಲ್ಲಿ ಮಾತ್ರ ಕಟ್ಟಡ ನಿರ್ಮಾಣ ನಕ್ಷೆ ಮಂಜೂರು ಮಾಡಲು ಮುಖ್ಯ ಆಯುಕ್ತರು ಅಕ್ಟೋಬರ್‌ 3ರಂದು ಆದೇಶ ಹೊರಡಿಸಿದ್ದಾರೆ.

‘ಕೆಟಿಸಿಪಿ ಕಾಯ್ದೆಯಂತೆ ಬಿಡಿಎ ‘ವಿನ್ಯಾಸ ನಕ್ಷೆ’ ಅನುಮೋದಿಸದಿದ್ದರೆ ಆ ಪ್ರದೇಶಗಳಲ್ಲಿ ಅಡ್ಡಾದಿಡ್ಡಿ ಬೆಳವಣಿಗೆಯಾಗುವ ಸಂಭವವಿರುತ್ತದೆ. ಮಾಸ್ಟರ್‌ ಪ್ಲಾನ್‌ನಂತೆ ಯೋಜಿತ ಬೆಳವಣಿಗೆಯನ್ಜು ಆಧರಿಸಿ ವಿನ್ಯಾಸ ನಕ್ಷೆಯನ್ನು ಅನುಮೋದಿಸಲಾಗುತ್ತದೆ. ಇದರಿಂದ ಕೆರೆ, ಕಾಲುವೆ ಸೇರಿದಂತೆ ಸರ್ಕಾರಿ ಜಮೀನುಗಳ ಒತ್ತುವರಿಗಳನ್ನು ಈ ಸಂದರ್ಭದಲ್ಲೇ ತಡೆಯಬಹುದು. ಅಲ್ಲದೆ, ಮಾಸ್ಟರ್‌ ಪ್ಲಾನ್‌ನಂತೆ ವಾಣಿಜ್ಯ, ವಸತಿ ಪ್ರದೇಶಗಳ ವರ್ಗೀಕರಣ ಸೇರಿದಂತೆ ರಸ್ತೆ, ಚರಂಡಿಯಂತಹ ಮೂಲಸೌಕರ್ಯಗಳು ಹೇಗಿರಬೇಕು ಎಂಬುದೂ ‘ವಿನ್ಯಾಸ ನಕ್ಷೆ’ಯಲ್ಲಿ ನಮೂದಾಗಿರುತ್ತದೆ. ಇದರಿಂದ ಯೋಜಿತ ಪ್ರದೇಶ ನಿರ್ಮಾಣವಾಗಲು ಸಾಧ್ಯವಾಗುತ್ತದೆ’ ಎಂದು ಬಿಬಿಎಂಪಿ ನಗರ ಯೋಜನೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.

ಅರ್ಕಾವತಿ ಬಡಾವಣೆಯಲ್ಲಿ ನಿರ್ಬಂಧ

ಬಿಡಿಎ ಅರ್ಕಾವತಿ ಬಡಾವಣೆಯಲ್ಲಿ ನ್ಯಾಯಮೂರ್ತಿ ಕೇಶವ ನಾರಾಯಣ ಸಮಿತಿ ವ್ಯಾಪ್ತಿಯಲ್ಲಿರುವ ಜಮೀನುಗಳಲ್ಲಿ ಏಕ ನಿವೇಶನ ಅಥವಾ ಬಹು ನಿವೇಶನಗಳಿಗೆ ಕಟ್ಟಡ ನಕ್ಷೆ ಮಂಜೂರು ಮಾಡುವುದನ್ನೂ ಬಿಬಿಎಂಪಿ ನಿರ್ಬಂಧಿಸಿದೆ. ಅರ್ಕಾವತಿ ಬಡಾವಣೆಗೆ ಪ್ರಾಥಮಿಕವಾಗಿ 3329 ಎಕರೆ ಜಮೀನು ಸ್ವಾಧೀನಕ್ಕೆ ಅಧಿಸೂಚಿಸಲಾಗಿತ್ತು. ಅಂತಿಮ ಪರಿಷ್ಕೃತ ಅಧಿಸೂಚನೆಯಲ್ಲಿ 1766 ಎಕರೆ ಮಾತ್ರ ಇದೆ. ಅಧಿಸೂಚಿಸಿರುವ ಜಮೀನುಗಳು ಸಮಿತಿಯ ಪರಿಶೀಲನೆಗೆ ಒಳಪಟ್ಟಿವೆ. ಹೀಗಾಗಿ ಈ ಜಮೀನುಗಳಿಗೆ ಯಾವುದೇ ಖಾತೆ ನೀಡಲು ಅಭಿವೃದ್ಧಿಗೆ ಅನುಮತಿಸಲು ಅವಕಾಶ ಇರುವುದಿಲ್ಲ ಎಂದು ಬಿಡಿಎ ತಿಳಿಸಿತ್ತು. ನಾಡಪ್ರಭು ಕೆಂಪೇಗೌಡ ಬಡಾವಣೆ ಡಾ. ಶಿವರಾಮಕಾರಂತ ಬಡಾವಣೆ ಪೆರಿಫೆರಲ್‌ ವರ್ತುಲ ರಸ್ತೆ ಹಾಗೂ ಇತರೆ ಬಡಾಣೆಗಳಿಗೆ ಬಿಡಿಎ ಭೂಸ್ವಾಧೀನ ಅಧಿಸೂಚನೆ ಹೊರಡಿಸಿದೆ. ಈ ಜಮೀನುಗಳು ಬಿಡಿಎ ಕಾಯ್ದೆ 1976ರ ಕಲಂ–20ರಲ್ಲಿ ಪುರೋಭಿವೃದ್ಧಿ ತೆರಿಗೆ ವ್ಯಾಪ್ತಿಯಲ್ಲಿ ಇವೆ. ಇಂತಹ ಜಮೀನುಗಳಲ್ಲಿ ಬಿಡಿಎ ಏಕ ನಿವೇಶನ ಅಥವಾ ಬಹು ನಿವೇಶನ ವಿನ್ಯಾಸ ನಕ್ಷೆ ಅನುಮೋದನೆ ನೀಡಿರುವುದಿಲ್ಲ. ಅಂತಹ ನಿವೇಶನಗಳಿಗೆ ಬಿಬಿಎಂಪಿ ಖಾತೆ ನೀಡಿ ಕಟ್ಟಡ ನಕ್ಷೆ ನೀಡಿದರೆ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ಬಿಡಿಎ ಪತ್ರ ಮೂಲಕ ತಿಳಿಸಿತ್ತು. ಇದನ್ನೆಲ್ಲ ಪರಿಗಣಿಸಿ ಬಿಬಿಎಂಪಿ ಆಯುಕ್ತರು ಅ.3ರಂದು ನಿರ್ಬಂಧದ ಆದೇಶ ಹೊರಡಿಸಿದ್ದಾರೆ.

ಯಾವ ವರ್ಗೀಕರಣದಲ್ಲಿರುವ ನಿವೇಶನಗಳಿಗೆ ಕಟ್ಟಡ ನಕ್ಷೆ?

* ನಗರ ಟೈಟಲ್‌ ಸರ್ವೆ (ಸಿಟಿಎಸ್‌) ಸಂಖ್ಯೆ ಹೊಂದಿರುವ ನಿವೇಶನಗಳು

* ನಗರಸಭೆ ಪುರಸಭೆ ಗ್ರಾಮ ಪಂಚಾಯಿತಿಗಳಿಂದ ಬಿಬಿಎಂಪಿ ವ್ಯಾಪ್ತಿಗೆ ಬಂದಾಗ ‘ಎ’ ರಿಜಿಸ್ಟರ್‌ನಲ್ಲಿ ನಮೂದಾಗಿರುವ ಖಾತಾ ಹೊಂದಿರುವ ನಿವೇಶನಗಳು

* ಬಿಡಿಎಯಿಂದ ನಿರ್ಮಾಣವಾದ ಅನುಮೋದನೆಯಾದ ನಿವೇಶನಗಳು ಅಭಿವೃದ್ಧಿ ಯೋಜನಾ ನಕ್ಷೆ ಮಂಜೂರು ಪಡೆದ ನಿವೇಶನಗಳು.

* ಬಿಬಿಎಂಪಿಯಿಂದ ಈಗಾಗಲೇ ಕಟ್ಟಡ ನಕ್ಷೆ ಪಡೆದಿದ್ದು ಪರಿಷ್ಕೃತ ಅಥವಾ ಹೆಚ್ಚುವರಿ ಕಟ್ಟಡ ನಿರ್ಮಾಣದ ಪ್ರಸ್ತಾವಗಳು

* ಸರ್ಕಾರ ಹಾಗೂ ಎಚ್‌ಎಚ್‌ಬಿ ಕೆಐಎಡಿಬಿ ಕೆಎಸ್‌ಎಸ್‌ಐಡಿಸಿ ಕೆಎಸ್‌ಡಿಬಿಗಳಿಂದ ಫಲಾನುಭವಿಗಳಿಗೆ ಮಂಜೂರಾದ ನಿವೇಶನಗಳು

* ಬಿಡಿಎ ಬಿಎಂಐಸಿಎಪಿ ಸೇರಿದಂತೆ ಕೆಟಿಸಿಪಿ ತಿದ್ದುಪಡಿ ಕಾಯ್ದೆ ಕಲಂ 17ರಡಿ ಅನುಮೋದನೆಯಾದ ಏಕ ನಿವೇಶನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.