ADVERTISEMENT

ದೇಶದ ವೈವಿಧ್ಯತೆ ಕಾಪಾಡುವುದೇ ಸವಾಲು: ನಿವೃತ್ತ ಐಎಎಸ್ ಅಧಿಕಾರಿ ಎ. ರವೀಂದ್ರ

ನಿವೃತ್ತ ಐಎಎಸ್ ಅಧಿಕಾರಿ ಎ. ರವೀಂದ್ರ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2022, 19:33 IST
Last Updated 17 ಸೆಪ್ಟೆಂಬರ್ 2022, 19:33 IST
‘ಡಿಸ್ಕವರಿಂಗ್ ನ್ಯೂ ಇಂಡಿಯಾ’ ಪುಸ್ತಕವನ್ನು ನ್ಯಾ.ಎಂ.ಎನ್. ವೆಂಕಟಾಚಲಯ್ಯ (ಎಡದಿಂದ ಮೂರನೆಯವರು) ಬಿಡುಗಡೆ ಮಾಡಿದರು. ಪ್ರಿಯಾಂಕಾ ಮಾಥುರ್, ರಾಜ್ ಸಿಂಗ್, ಚಿರಂಜೀವಿ ಸಿಂಗ್, ಎ. ರವೀಂದ್ರ ಮತ್ತು ಜೈನ್ ವಿಶ್ವವಿದ್ಯಾಲಯದ ಪ್ರೊ.ಆರ್.ಎನ್. ಅಯ್ಯಂಗಾರ್ ಇದ್ದಾರೆ –ಪ್ರಜಾವಾಣಿ ಚಿತ್ರ
‘ಡಿಸ್ಕವರಿಂಗ್ ನ್ಯೂ ಇಂಡಿಯಾ’ ಪುಸ್ತಕವನ್ನು ನ್ಯಾ.ಎಂ.ಎನ್. ವೆಂಕಟಾಚಲಯ್ಯ (ಎಡದಿಂದ ಮೂರನೆಯವರು) ಬಿಡುಗಡೆ ಮಾಡಿದರು. ಪ್ರಿಯಾಂಕಾ ಮಾಥುರ್, ರಾಜ್ ಸಿಂಗ್, ಚಿರಂಜೀವಿ ಸಿಂಗ್, ಎ. ರವೀಂದ್ರ ಮತ್ತು ಜೈನ್ ವಿಶ್ವವಿದ್ಯಾಲಯದ ಪ್ರೊ.ಆರ್.ಎನ್. ಅಯ್ಯಂಗಾರ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಮ್ಮ ದೇಶವು ವಿವಿಧತೆಯಲ್ಲಿ ಏಕತೆ ಹೊಂದಿದೆ. ಇದನ್ನು ಕಾಪಾಡಿಕೊಳ್ಳುವ ಜತೆಗೆ ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಭ್ರಾತೃತ್ವ ಭಾವದಲ್ಲಿ ಸಾಗಬೇಕು’ ಎಂದು ನಿವೃತ್ತ ಐಎಎಸ್ ಅಧಿಕಾರಿ ಎ. ರವೀಂದ್ರ ತಿಳಿಸಿದರು.

ಜೈನ್ ಯೂನಿವರ್ಸಿಟಿ ಪ್ರೆಸ್ ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರ ಹಾಗೂ
ಪ್ರಿಯಾಂಕಾ ಮಾಥುರ್ ಸಂಪಾದಕತ್ವದ ‘ಡಿಸ್ಕವರಿಂಗ್ ನ್ಯೂ ಇಂಡಿಯಾ’ ಪುಸ್ತಕ ಬಿಡುಗಡೆಯಾಯಿತು.

‘ನೆಹರೂ ಅವರ ‘ದಿ ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕ 1946ರಲ್ಲಿ ಪ್ರಕಟಗೊಂಡಿತ್ತು. ಅದರಲ್ಲಿ ಅವರು ತಮ್ಮ ಕಲ್ಪನೆಯ ಭಾರತದ ಬಗ್ಗೆ ವಿವರಿಸಿದ್ದರು. 75 ವರ್ಷಗಳಲ್ಲಿ ದೇಶ ಸಾಕಷ್ಟು ಪ್ರಗತಿ ಹೊಂದಿದೆ. ವಿವಿಧ ಭಾಷೆಗಳನ್ನು ಮಾತನಾಡುವ, ವಿಭಿನ್ನ ನಂಬಿಕೆಗಳನ್ನು ಪ್ರತಿಪಾದಿಸುವ, ವಿವಿಧ ಜಾತಿಗಳ ಹಾಗೂ ವೈವಿಧ್ಯಮಯ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಜನರು ಈ ದೇಶದಲ್ಲಿ ಮಾತ್ರ ಕಾಣಲು ಸಾಧ್ಯ. ಅಮೆರಿಕ, ಯುರೋಪ್ ದೇಶಗಳಿಗಿಂತ ಈ ದೇಶ ಹೆಚ್ಚು ವೈವಿಧ್ಯತೆ ಹೊಂದಿದೆ. ನಮ್ಮ ಧರ್ಮ, ತತ್ವಶಾಸ್ತ್ರ, ಕಲೆ, ಸಾಹಿತ್ಯವು ಉನ್ನತ ಜ್ಞಾನ, ಆಧ್ಯಾತ್ಮಿಕ ಮೌಲ್ಯಗಳ ಅನ್ವೇಷಣೆಯಾಗಿದೆ’ ಎಂದು
ಹೇಳಿದರು.

ADVERTISEMENT

‘ಈ ಪುಸ್ತಕದಲ್ಲಿ ನಾಲ್ಕು ವಿಭಾಗಗಳಿದ್ದು, ಮೊದಲನೆ ವಿಭಾಗದಲ್ಲಿ ಧರ್ಮದ ಬಗ್ಗೆ ಹೇಳಲಾಗಿದೆ.ಎರಡನೇ ವಿಭಾಗದಲ್ಲಿ ಶೈಕ್ಷಣಿಕ ಸವಾಲುಗಳು, ರಾಷ್ಟ್ರೀಯ ಶಿಕ್ಷಣ ನೀತಿ, ಮೂರನೇ ವಿಭಾಗದಲ್ಲಿ ಲಿಂಗ ಅಸಮಾನತೆ, ನಾಲ್ಕನೇ ವಿಭಾಗದಲ್ಲಿ ಯುವ ಜನರು ರಾಷ್ಟ್ರಕ್ಕೆ ನೀಡಬೇಕಾದ ಕೊಡುಗೆಗಳ
ಬಗ್ಗೆ ಹೇಳಲಾಗಿದೆ’ ಎಂದರು.

ವಿಜ್ಞಾನದ ಕೊಡುಗೆ:ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, ‘17ನೇ ಶತಮಾನದಲ್ಲಿ ನಡೆದ ಘಟನೆ ಹಾಗೂ ಆವಿಷ್ಕಾರಗಳು ಹೊಸತನಕ್ಕೆ ಅವಕಾಶ ಕಲ್ಪಿಸಿದವು. ಇಂದಿನ ಆಧುನಿಕ ಮನಸ್ಥಿತಿಯೂ 17ನೇ ಶತಮಾನದ ವಿಜ್ಞಾನದ ಕೊಡುಗೆ. ದೇಶದಲ್ಲಿ ಬೇರೆ ಬೇರೆ ಧರ್ಮಗಳಿದ್ದರೂ ಅವುಗಳು ಸಾರಿದ ತತ್ವ ಸಂದೇಶಗಳು ಮಾತ್ರ ಒಂದೇ ಆಗಿವೆ’ ಎಂದರು.

ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ‘ಬಸವಣ್ಣ ಅವರು ‘ದಯವೇ ಧರ್ಮದ ಮೂಲವಯ್ಯ’ ಎಂದು ಹೇಳಿದ್ದರು. ಇದನ್ನೇ ವಿವಿಧ ಧರ್ಮದ ಮಹಾತ್ಮರು ಹೇಳಿದ್ದಾರೆ’ ಎಂದರು

ಜೈನ್ ವಿಶ್ವವಿದ್ಯಾಲಯದ ಕುಲಪತಿ ರಾಜ್ ಸಿಂಗ್, ‘ಸ್ವಾತಂತ್ರ್ಯ ದೊರೆತ 75 ವರ್ಷಗಳಲ್ಲಿ ದೇಶ ಸಾಕಷ್ಟು ಬದಲಾಗಿದೆ. ಅಭಿವೃದ್ದಿ ಹೊಂದಿದ ಭಾರತವನ್ನು ನೋಡುತ್ತಿದ್ದೇವೆ. ಜಗತ್ತಿಗೆನಾಯಕತ್ವದ ಸ್ಥಾನದಲ್ಲಿ ಭಾರತ ನಿಂತಿದೆ. ಈ ದೇಶದಲ್ಲಿ ಎಲ್ಲ ಕಡೆ ಎಲ್ಲ ವಿಷಯಗಳ ಬಗ್ಗೆ ಮಾತನಾಡುವ ಸ್ವಾತಂತ್ರ್ಯ ಇದೆ. ಈ ಅವಕಾಶ ಬೇರೆ ದೇಶಗಳಲ್ಲಿ ಸಿಗುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.