ಯಲಹಂಕ: ರೇವಾ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಸೇರಿದಂತೆ ವಿವಿಧ ವಿಷಯಗಳಲ್ಲಿ ಪದವಿ ಪೂರ್ಣಗೊಳಿಸಿದ 3,830 ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಶುಕ್ರವಾರ ಪದವಿ ಪ್ರದಾನ ಮಾಡಲಾಯಿತು.
ಈ ಬಾರಿಯ ಕಾರ್ಯಕ್ರಮವನ್ನು ಕೋವಿಡ್ ಕಾರಣದಿಂದಾಗಿ ಆನ್‌ಲೈನ್ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ್ದ 45 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೇವಾ ವಿಶ್ವವಿದ್ಯಾಲಯದಕುಲಾಧಿಪತಿ ಡಾ.ಪಿ.ಶ್ಯಾಮರಾಜು,‘ಸಂಸ್ಥೆಯಿಂದ ಶಿಕ್ಷಣ ಪಡೆದು, ಹೊರ ಹೋಗಿರುವ ಸಾಕಷ್ಟು ವಿದ್ಯಾರ್ಥಿಗಳು ಸಮಾಜದ ಅತ್ಯುತ್ತಮ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಲ್ಲಿನ ಮೂಲ ಸೌಕರ್ಯಗಳು, ಅಧ್ಯಯನಕ್ಕೆ ಪೂರಕವಾದ ವಾತಾವರಣ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ, ವಿದ್ಯಾರ್ಥಿಗಳ ನಿರಂತರಪ್ರಯತ್ನ ಹಾಗೂ ಶಿಕ್ಷಕರ ಕಾಳಜಿಯೇ ಇದಕ್ಕೆ ಕಾರಣ’ ಎಂದರು.
‘ಪದವಿ ಪಡೆಯುವುದು ಮುಖ್ಯವಲ್ಲ. ಜೀವನದಲ್ಲಿ ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಸಮಾಜದಲ್ಲಿ ಸಂಕಷ್ಟದಲ್ಲಿನ ಜನರಿಗಾಗಿ ಶ್ರಮಿಸಬೇಕು. ಉದ್ಯೋಗಿಗಳಾದರೆ ಸಾಲದು, ಉದ್ಯೋಗಗಳನ್ನು ನೀಡುವ ಉದ್ಯಮಿಗಳಾಗಿ ಬೆಳೆಯಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.