ಯಲಹಂಕ: ‘ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಸರ್ಕಾರಿ ಶಾಲೆಗಳನ್ನು ದತ್ತುಪಡೆಯುವುದೂ ಸೇರಿದಂತೆ ಸಮಾಜಮುಖಿ ಚಟುವಟಿಕೆಗಳನ್ನು ವಿಸ್ತರಿಸಲಾಗುವುದು’ ಎಂದು ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಪಿ.ಶ್ಯಾಮರಾಜು ಹೇಳಿದರು.
ರೇವಾ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣೆ ಶಾಲೆಯ ಬೆಳವಣಿಗೆ ಮತ್ತು ವಿದ್ಯಾರ್ಥಿಗಳ ಸಾಧನೆ ಪರಿಚಯಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರೇವಾ ಶಿಕ್ಷಣಸಂಸ್ಥೆ ಮತ್ತು ವಿಶ್ವವಿದ್ಯಾಲಯವು ವಿದ್ಯಾಥರ್ಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಉದ್ದೇಶವನ್ನು ಹೊಂದಿದೆ. ಇದರಡಿಯಲ್ಲಿ ಮತದಾನ ಜಾಗೃತಿ, ಪರಿಸರ ಸಂರಕ್ಷಣೆ, ಸರ್ಕಾರಿ ಶಾಲೆಗಳನ್ನು ದತ್ತುಪಡೆದು ಅಭಿವೃದ್ಧಿಪಡಿಸುವಂತಹ ಹಲವು ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಿದೆ’ ಎಂದರು.
‘ವಿದ್ಯಾರ್ಥಿಗಳು ಕೇವಲ ಉದ್ಯೋಗಿಗಳಾದರೆ ಸಾಲದು, ಇನ್ನೊಬ್ಬರಿಗೆ ಉದ್ಯೋಗಗಳನ್ನು ನೀಡುವ ಮಟ್ಟಕ್ಕೆ ಬೆಳವಣಿಗೆಯಾಗಬೇಕೆಂಬುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ಮತ್ತು ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದರು.
ಕುಲಪತಿ ಡಾ.ಎಂ.ಧನಂಜಯ, ‘ವಿದ್ಯಾರ್ಥಿಗಳು ಮಾಡಿರುವ ಪ್ರತಿಯೊಂದು ಸಾಧನೆಯೂ ವಿಶ್ವವಿದ್ಯಾಲಯ ಮತ್ತು ಪೋಷಕರಿಗೆ ಹೆಮ್ಮೆಯ ಸಂಗತಿಯಾಗಿದೆ’ ಎಂದರು.
ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕುಲಸಚಿವ ಡಾ.ಎನ್.ರಮೇಶ್, ಪರೀಕ್ಷಾ ನಿಯಂತ್ರಣ ವಿಭಾಗದ ಮುಖ್ಯಸ್ಥೆ ಡಾ.ಬೀನಾ.ಜಿ, ವಾಣಿಜ್ಯ ಮತ್ತು ನಿರ್ವಹಣೆ ಶಾಲೆಯ ನಿರ್ದೇಶಕಿ ಡಾ.ಶುಭ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.