ADVERTISEMENT

ಸಾವಯವ ಕೃಷಿಕರು–ಮಾರಾಟಗಾರರು ಒಂದೇ ವೇದಿಕೆಗೆ ಬರಲಿ: ಕೃಷ್ಣ ಬೈರೇಗೌಡ

‘ಆರ್ಗ್ಯಾನಿಕ್‌ ಸಂತೆ’

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 23:30 IST
Last Updated 24 ನವೆಂಬರ್ 2024, 23:30 IST
'50ನೇ ಆರ್ಗ್ಯಾನಿಕ್ ಸಂತೆ’ಯಲ್ಲಿ ರೈತರು ಮಾರಾಟಮಾಡಲು ತಂದಿದ್ದ ಸಾವಯವ ಸೊಪ್ಪು, ತರಕಾರಿಗಳನ್ನು ನಟಿ ಜಯಮಾಲಾ ವೀಕ್ಷಿಸಿದರು. ದಿ ಗ್ರೀನ್ ಪಾತ್ ಆರ್ಗ್ಯಾನಿಕ್‌ ರೆಸ್ಟೋರೆಂಟ್ ಸಂಸ್ಥಾಪಕ ಎಚ್.ಆರ್. ಜಯರಾಮ್ (ಬಲ ಬದಿಯಿಂದ ಮೊದಲನೆಯವರು) ಉಪಸ್ಥಿತರಿದ್ದರು
–ಪ್ರಜಾವಾಣಿ ಚಿತ್ರ 
'50ನೇ ಆರ್ಗ್ಯಾನಿಕ್ ಸಂತೆ’ಯಲ್ಲಿ ರೈತರು ಮಾರಾಟಮಾಡಲು ತಂದಿದ್ದ ಸಾವಯವ ಸೊಪ್ಪು, ತರಕಾರಿಗಳನ್ನು ನಟಿ ಜಯಮಾಲಾ ವೀಕ್ಷಿಸಿದರು. ದಿ ಗ್ರೀನ್ ಪಾತ್ ಆರ್ಗ್ಯಾನಿಕ್‌ ರೆಸ್ಟೋರೆಂಟ್ ಸಂಸ್ಥಾಪಕ ಎಚ್.ಆರ್. ಜಯರಾಮ್ (ಬಲ ಬದಿಯಿಂದ ಮೊದಲನೆಯವರು) ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ಸಾವಯವ ಕೃಷಿಕರು ಮತ್ತು ಮಾರಾಟಗಾರರನ್ನು ಒಂದೇ ವೇದಿಕೆಯಲ್ಲಿ ಸೇರಿಸಬೇಕು. ಇದು ಈ ಹೊತ್ತಿನ ಅಗತ್ಯ ಹಾಗೂ ಅನಿವಾರ್ಯವಾದ ಕಾರ್ಯ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.

ನಗರದ ಗ್ರೀನ್‌ಪಾತ್ ಆರ್ಗ್ಯಾನಿಕ್‌ ರೆಸ್ಟೋರೆಂಟ್‌ನಲ್ಲಿ ಭಾನುವಾರ ನಡೆದ ‘50ನೇ ಆರ್ಗ್ಯಾನಿಕ್‌ ಸಂತೆ’ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾವಯವ ಆಹಾರದ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ. ಇದನ್ನು ವ್ಯಾಪಾರವಾಗಿಸದೇ ಸಮರ್ಪಣಾ ದೃಷ್ಟಿಕೋನದಿಂದ ಮಾಡಬೇಕು. ಇಂತಹ ಪ್ರಯತ್ನಕ್ಕೆ ಅಗತ್ಯವಿರುವ ಬೆಂಬಲ ಕೊಡಲು ಸಿದ್ಧ’ ಎಂದು ಭರವಸೆ ನೀಡಿದರು.

ADVERTISEMENT

ಮುಖ್ಯ ಅತಿಥಿಯಾಗಿದ್ದ ನಟಿ ಜಯಮಾಲ ಮಾತನಾಡಿ, ‘ಇತ್ತೀಚೆಗೆ ಸಣ್ಣ ಪ್ರಾಯದವರಿಗೆ ಹೆಚ್ಚಾಗಿ ರೋಗಗಳು ಬಾಧಿಸುತ್ತಿವೆ. ಆದರೆ, ಹಿರಿಯ ಜೀವಗಳು ಆರೋಗ್ಯವಂತರಾಗಿರುತ್ತಾರೆ. ಆಹಾರ, ಆಲೋಚನೆ, ಜೀವನ ವಿಧಾನವೇ ಅವರು ಆರೋಗ್ಯವಂತರಾಗಿರಲು ಕಾರಣ’ ಎಂದು ಹೇಳಿದರು.

‘ಅತಿಯಾದ ರಾಸಾಯನಿಕ ಗೊಬ್ಬರಗಳನ್ನು ಬಳಸಿ, ಅನ್ನವನ್ನು ವಿಷಮಯವಾಗಿಸಲಾಗುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಚ್.ಆರ್.ಜಯರಾಮ್ ಅವರು ಇಟ್ಟಿರುವ ಹೆಜ್ಜೆ ಶ್ಲಾಘನೀಯ’ ಎಂದು ವಿಶ್ಲೇಷಿಸಿದರು.

ಗ್ರೀನ್‌ಪಾತ್ ಸಂಸ್ಥಾಪಕ, ‘ಆರ್ಗ್ಯಾನಿಕ್‌ ಸಂತೆ’ಯ ರೂವಾರಿ ಎಚ್.ಆರ್.ಜಯರಾಮ್, ‘ಶುದ್ಧವಾದ ಸಾವಯವ ಆಹಾರ ಪದಾರ್ಥಗಳು ಪ್ರತಿ ಮನೆ ಮನೆಯನ್ನೂ ತಲುಪಬೇಕು. ಆ ಕೆಲಸವನ್ನು ಸಾವಯವ ಸಂತೆ ಮೂಲಕ ಮಾಡುತ್ತಿದ್ದೇವೆ. ಐವತ್ತು ವಾರಗಳಿಂದ ನಡೆಯುತ್ತಿರುವ ಈ ಸಂತೆಗೆ ಗ್ರಾಹಕರಿಂದ ಉತ್ತಮ ಸ್ಪಂದನ ಸಿಕ್ಕಿದೆ. ಇದನ್ನು ಇನ್ನಷ್ಟು ವಿಸ್ತರಿಸುವ ಯೋಚನೆ ಇದೆ’ ಎಂದರು.

ಕಾರ್ಯಕ್ರಮದಲ್ಲಿ ಲೇಖಕಿ ಪ್ರವೀಣಾ ಕುಲಕರ್ಣಿ ಅವರ ‘ಆನ್ಸರ್‌ ದಿ ಅನ್‌ಆನ್ಸರ್ಡ್‌’ ಪುಸ್ತಕ ಬಿಡುಗಡೆಯಾಯಿತು‌. ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 

ಮೇಳದಲ್ಲಿ ಸಾವಯವ ತರಕಾರಿಗಳು, ಹಣ್ಣುಗಳು, ಸಾವಯವ ಬೆಲ್ಲ, ತುಪ್ಪದಂತಹ ಉತ್ಪನ್ನಗಳು, ಸಿರಿಧಾನ್ಯಗಳು, ಗಾಣದಿಂದ ತಯಾರಿಸಿದ ಅಡುಗೆ ಎಣ್ಣೆ, ನೈಸರ್ಗಿಕ ಉತ್ಪನ್ನಗಳಿಂದ ತಯಾರಿಸಿದ ಐಸ್‌ಕ್ರೀಂ ಸೇರಿದಂತೆ ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.