ADVERTISEMENT

ಶತಮಾನ ಕಂಡ ಶಾಲೆಗಳ ಪುನರುಜ್ಜೀವನಗೊಳಿಸಿ: ಪುರುಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 15:44 IST
Last Updated 23 ಜೂನ್ 2024, 15:44 IST
ನಗರದಲ್ಲಿ ಭಾನುವಾರ ನಡೆದ ‘ಎಲ್.ಎಸ್. ಶೇಷಗಿರಿ ರಾವ್ ಶತಮಾನೋತ್ಸವ ಸಂಭ್ರಮ’ ಕಾರ್ಯಕ್ರಮದಲ್ಲಿ ಶಿವರಾಮ ಕಾರಂತ ವೇದಿಕೆ ಅಧ್ಯಕ್ಷೆ ದೀಪಾ ಫಡ್ಕೆ, ವಿಮರ್ಶಕ ಎಸ್.ಆರ್. ವಿಜಯಶಂಕರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಆದಿಚುಂಚನಗಿರಿ ವಿಶ್ವವಿದ್ಯಾಲಯ ಸಹ ಪ್ರಾಧ್ಯಾಪಕ ಟಿ.ಎನ್. ವಾಸುದೇವಮೂರ್ತಿ ಉಪಸ್ಥಿತರಿದ್ದರು. -ಪ್ರಜಾವಾಣಿ ಚಿತ್ರ
ನಗರದಲ್ಲಿ ಭಾನುವಾರ ನಡೆದ ‘ಎಲ್.ಎಸ್. ಶೇಷಗಿರಿ ರಾವ್ ಶತಮಾನೋತ್ಸವ ಸಂಭ್ರಮ’ ಕಾರ್ಯಕ್ರಮದಲ್ಲಿ ಶಿವರಾಮ ಕಾರಂತ ವೇದಿಕೆ ಅಧ್ಯಕ್ಷೆ ದೀಪಾ ಫಡ್ಕೆ, ವಿಮರ್ಶಕ ಎಸ್.ಆರ್. ವಿಜಯಶಂಕರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಆದಿಚುಂಚನಗಿರಿ ವಿಶ್ವವಿದ್ಯಾಲಯ ಸಹ ಪ್ರಾಧ್ಯಾಪಕ ಟಿ.ಎನ್. ವಾಸುದೇವಮೂರ್ತಿ ಉಪಸ್ಥಿತರಿದ್ದರು. -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯದಲ್ಲಿ ಶತಮಾನ ಕಂಡ ಸರ್ಕಾರಿ ಶಾಲೆಗಳು ಸುಮಾರು 150 ಇವೆ. ಈ ಶಾಲೆಗಳಿಗೆ ಸರ್ಕಾರದ ಪ್ರತಿನಿಧಿಗಳು ಭೇಟಿ ನೀಡಿ, ಆ ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಪೂರೈಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದರು.

ಆರ್‌.ಟಿ ನಗರದ ಶಿವರಾಮ ಕಾರಂತ ವೇದಿಕೆ ಮತ್ತು ವಿನಾಯಕ ದೇವಸ್ಥಾನ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ‘ಎಲ್‌.ಎಸ್‌. ಶೇಷಗಿರಿ ರಾವ್‌ ಶತಮಾನೋತ್ಸವ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

‘ಆ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ ಅದನ್ನು‌ ನೀಗಿಸಬೇಕು.‌ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಅವಶ್ಯಕತೆ ಇರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಅನುದಾನ ಒದಗಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕರ್ನಾಟಕದಲ್ಲಿ ಯಾವುದೇ ಊರಿನ ಹೆಸರು ವ್ಯಕ್ತಿಯ ಹೆಸರಾಗಿರಲಿಲ್ಲ. ಪ್ರಸಿದ್ಧ ರಾಜರ ಹೆಸರನ್ನು ಕೂಡ ಯಾವುದೇ ಊರಿಗೆ ಇಟ್ಟಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ವ್ಯಕ್ತಿಯ ಹೆಸರಿಡುವ ಕೆಟ್ಟ ಸಂಪ್ರದಾಯ ಆರಂಭವಾಯಿತು. ಅದಕ್ಕಾಗಿ ಊರಿನ ಹಳೇ ಹೆಸರಿನ ಫಲಕವನ್ನೇ ಅಳವಡಿಸುವ ಅಭಿಯಾನವನ್ನು ಪ್ರಾಧಿಕಾರದಿಂದ ನಡೆಸುವ ಉದ್ದೇಶವಿದೆ ಎಂದು ಹೇಳಿದರು.

‘ತಮಿಳು ಕಲಿಸುವ 250ಕ್ಕೂ ಅಧಿಕ ವೆಬ್‌ಸೈಟ್‌ಗಳಿವೆ. ಹಳೇ ಭಾಷೆ ಹೀಬ್ರೂ ಭಾಷೆ ಕಲಿಕೆಗಾಗಿಯೂ ವೆಬ್‌ಸೈಟ್‌ ಇದೆ. ಆದರೆ, ಕನ್ನಡ ಕಲಿಸುವ ವೆಬ್‌ಸೈಟ್‌ಗಳಿಲ್ಲ. ಸುಲಭದಲ್ಲಿ ಕನ್ನಡ ಕಲಿಸುವ ವೆಬ್‌ಸೈಟ್‌ಗಳನ್ನು ಅಭಿವೃದ್ಧಿಪಡಿಸಬೇಕು‘ ಎಂದರು.

‘ನಾನು ಜೆಎನ್‌ಯುಗೆ ಹೋದಾಗ ಎಲ್‌.ಎಸ್‌. ಶೇಷಗಿರಿರಾವ್ ಅವರು ಪತ್ರ ಬರೆದಿದ್ದರು. ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸುವ ಕೆಲಸದ ಜೊತೆಗೆ ಕನ್ನಡದ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಎಂದು ಆ ಪತ್ರದಲ್ಲಿ ಸೂಚಿಸಿದ್ದರು. ಇದರಿಂದ ಪ್ರೇರಣೆ ಪಡೆದು ಕವಿರಾಜ ಮಾರ್ಗ, ರನ್ನನ ಗದಾಯುದ್ಧ, ಶಿವಕೋಟಿ ಆಚಾರ್ಯರ ವಡ್ಡಾರಾಧನೆ ಮುಂತಾದ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಲು ಕ್ರಮ ಕೈಗೊಂಡೆ’ ಎಂದು ನೆನಪು ಮಾಡಿಕೊಂಡರು.

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಟಿ.ಎನ್‌. ವಾಸುದೇವಮೂರ್ತಿ, ವಿಮರ್ಶಕ ಎಸ್‌.ಆರ್‌. ವಿಜಯಶಂಕರ್‌, ಶಿವರಾಮ ಕಾರಂತ ವೇದಿಕೆಯ ದೀಪಾ ಫಡ್ಕೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.