ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಗಳು 2011ರಿಂದ 2014ರ ಅವಧಿಯಲ್ಲಿ ವಿಲೇವಾರಿ ಮಾಡಿದ್ದ 800 ಭೂ ವ್ಯಾಜ್ಯ ಪ್ರಕರಣಗಳ ಮರು ವಿಚಾರಣೆ ಮಾಡಲು ನಗರ ಜಿಲ್ಲಾಡಳಿತ ತೀರ್ಮಾನಿಸಿದೆ.
ಈ ಅವಧಿಯಲ್ಲಿ ವಿಶೇಷ ಜಿಲ್ಲಾಧಿಕಾರಿಗಳಾಗಿದ್ದ ರಾಧಾಕೃಷ್ಣ, ಎಸ್.ಎನ್.ಗಂಗಾಧರಯ್ಯ, ಶ್ರೀನಿವಾಸ್, ನಾಗಾ ನಾಯ್ಕ್, ಕಲಿಮುಲ್ಲಾ ಹಾಗೂ ಅನಿಲ್ ಕುಮಾರ್ ವಿರುದ್ಧ ಇಲಾಖಾ ತನಿಖಾ ಪ್ರಕ್ರಿಯೆಯೂ ಆರಂಭವಾಗಿದೆ.
2011ರ ಅ. 10ರಿಂದ 2014ರ ಅ. 10ರ ವರೆಗೆ ವಿಶೇಷ ಜಿಲ್ಲಾಧಿಕಾರಿಗಳು ಬೆಂಗಳೂರು ದಕ್ಷಿಣ ವಿಭಾಗದಲ್ಲಿ 300 ಪ್ರಕರಣಗಳ (ಅಂದಾಜು 550 ಎಕರೆ ಭೂಮಿ) ಇತ್ಯರ್ಥ ಮಾಡಿದ್ದರು. ಬೆಂಗಳೂರು ಉತ್ತರ ವಿಭಾಗದಲ್ಲಿ 500 (ಅಂದಾಜು 2,500 ಎಕರೆ) ಪ್ರಕ ರಣಗಳ ವಿಲೇವಾರಿ ಮಾಡಿದ್ದರು. ಕನಿಷ್ಠ 4 ಗುಂಟೆಯಿಂದ ಹಿಡಿದು ಗರಿಷ್ಠ 35 ಎಕರೆವರೆಗಿನ ಜಮೀನುಗಳ ಒಡೆತನ ಸಂಬಂಧ ಆದೇಶ ಹೊರಡಿಸಿದ್ದರು.
ಭೂ ಕಂದಾಯ ಕಾಯ್ದೆ 1964ರ ಕಲಂ 136 (3) ಅಡಿ ದಾಖಲಾದ ಸರ್ಕಾರಿ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳ ನೈಜತೆ ಪರಿಶೀಲನಾ ಪ್ರಕ ರಣಗಳು, ಪಿಟಿಸಿಎಲ್ ಕಾಯ್ದೆಯ ಮೇಲ್ಮನವಿ ಪ್ರಕರಣಗಳು, ಇನಾಂ ಪ್ರಕ ರಣಗಳು, ಮಧ್ಯಸ್ಥಿಕೆ ಹಾಗೂ ಇತರ ಪ್ರಕರಣಗಳು ಇದರಲ್ಲಿ ಸೇರಿವೆ.
’ಈ ಪ್ರಕರಣಗಳ ಮರುಪರಿಶೀಲನೆಗೆ ನೋಟಿಸ್ ನೀಡಲಾಗಿದ್ದು, ವಿಚಾರಣಾ ಪ್ರಕ್ರಿಯೆ ಶೀಘ್ರ ಆರಂಭಿಸಲಿದ್ದೇವೆ‘ ಎಂದು ವಿಶೇಷ ಜಿಲ್ಲಾಧಿಕಾರಿಗಳಾದ ಎಂ.ಕೆ.ಜಗದೀಶ್ ಹಾಗೂ ಬಸವರಾಜ್ ’ಪ್ರಜಾವಾಣಿ‘ಗೆ ತಿಳಿಸಿದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಪ್ರಕರಣ ಗಳ ತ್ವರಿತ ವಿಲೇವಾರಿಗಾಗಿ ಮೂವರು ವಿಶೇಷ ಜಿಲ್ಲಾಧಿಕಾರಿಗಳನ್ನು (ಕೆಎಎಸ್ ವೃಂದ) ನೇಮಿಸಿ 2010ರಲ್ಲಿ ಆದೇಶ ಹೊರಡಿಸಲಾಗಿತ್ತು. ಈ ನಡುವೆ, ಭೂ ಪ್ರಕರಣದ ವಿಲೇವಾರಿ ವಿಷಯದ ಕುರಿತು ಅರ್ಜಿದಾರರೊಬ್ಬರು 2011ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ’ಈ ವಿಶೇಷ ಜಿಲ್ಲಾಧಿಕಾರಿ ಹುದ್ದೆಗಳು ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದ ಕೇಂದ್ರಗಳಾಗಿವೆ. ಇವರಿಂದ ತೊಂದರೆಗೊಳಗಾದ ಪ್ರತಿ ವ್ಯಕ್ತಿ ಹೈಕೋರ್ಟ್ ಮೆಟ್ಟಿಲೇರುವು
ದನ್ನು ತಪ್ಪಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು‘ ಎಂದು ಹೈಕೋರ್ಟ್ ಸೂಚಿಸಿತ್ತು.
ವಿಶೇಷ ಜಿಲ್ಲಾಧಿಕಾರಿ ಗಳಿಗೆ ನೀಡಿದ್ದ ಎಲ್ಲ ಕಂದಾಯ ಅಧಿಕಾರ ಗಳನ್ನು ಹಿಂಪಡೆದು 2011ರ ಅ. 10ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು. ಆ ಬಳಿಕವೂ, ವಿಶೇಷ ಜಿಲ್ಲಾಧಿಕಾರಿ
ಗಳು ಪ್ರಕರಣಗಳ ಇತ್ಯರ್ಥ ಮಾಡಿದ್ದರು.
ಅಧಿಕಾರ ಹಂಚಿಕೆಯಲ್ಲಿ ಕಾನೂನು ಸಮಸ್ಯೆ ಉದ್ಭವಿಸಿದ ಕಾರಣ ನಗರ ಜಿಲ್ಲಾಧಿಕಾರಿ ಅವರು 2014ರ ಸೆ. 9ರಂದು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಐಎಎಸ್ ವೃಂದದ ಇಬ್ಬರು ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಿಸಬೇಕು ಎಂದು ಕೋರಿದ್ದರು. ’ಭೂ ಕಂದಾಯ ಕಾಯ್ದೆ 1964ರ ಕಲಂ 136 (3) ಅಡಿ ದಾಖಲಾದ 5,412 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಕೆಲವು ಕಕ್ಷಿದಾರರು ಹೈಕೋರ್ಟ್‌ನಲ್ಲಿ ದಾವೆ ಹೂಡಿ ಕಾಲಮಿತಿಯಲ್ಲಿ ಇತ್ಯರ್ಥ ಮಾಡುವಂತೆ ಆದೇಶಗಳನ್ನು ಪಡೆಯು ತ್ತಿದ್ದಾರೆ. ಆಡಳಿತಾತ್ಮಕ ತೊಂದರೆ, ಕೆಲಸದ ಒತ್ತಡದಿಂದ ಈ ಪ್ರಕರಣಗಳ ತ್ವರಿತ ವಿಲೇವಾರಿ ಸಾಧ್ಯವಾಗುತ್ತಿಲ್ಲ. ಇವುಗಳ ವಿಲೇವಾರಿಗಾಗಿ ಐಎಎಸ್ ವೃಂದದ ಹುದ್ದೆಯನ್ನು ಸೃಜಿಸಬೇಕು’ ಎಂದು ವಿನಂತಿಸಿದ್ದರು.
ಐಎಎಸ್ ವೃಂದದ ಇಬ್ಬರು ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಿಸಿ ರಾಜ್ಯ ಸರ್ಕಾರ 2014ರ ಅ. 10ರಂದು ಆದೇಶ ಹೊರಡಿಸಿತ್ತು. 2011ರಿಂದ ವಿಶೇಷ ಜಿಲ್ಲಾಧಿಕಾರಿಗಳು ಕಲಂ 136 (3) ಅಡಿ ಇತ್ಯರ್ಥ ಮಾಡಿರುವ ಎಲ್ಲ ಪ್ರಕರಣ
ಗಳನ್ನು ಮರು ಪರಿಶೀಲಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿತ್ತು. ಆದರೆ, ಆ ನಂತರ ಬಂದ ವಿಶೇಷ ಜಿಲ್ಲಾಧಿಕಾರಿ ಗಳು ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.