ಬೆಂಗಳೂರು: ಶಾಸಕ ಎಚ್.ಡಿ.ರೇವಣ್ಣ ಹಾಗೂ ಅವರ ಮಗ ಪ್ರಜ್ವಲ್ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಆರಂಭಿಸಿರುವ ಎಸ್‌ಐಟಿ (ವಿಶೇಷ ತನಿಖಾ ತಂಡ) ಅಧಿಕಾರಿಗಳು, ಸಂತ್ರಸ್ತೆಯರು ಎನ್ನಲಾದ ಇಬ್ಬರು ಮಹಿಳೆಯರಿಂದ ಸೋಮವಾರ ಮರು ಹೇಳಿಕೆ ಪಡೆದುಕೊಂಡರು.
ಸಿಐಡಿ ಎಡಿಜಿಪಿ ಬಿಜಯ್‌ಕುಮಾರ್ ಸಿಂಗ್ ನೇತೃತ್ವದಲ್ಲಿ ರಚಿಸಲಾಗಿರುವ ಎಸ್‌ಐಟಿಗೆ ಈಗಾಗಲೇ 20 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಐಪಿಎಸ್ ಅಧಿಕಾರಿಗಳಾದ ಸುಮನ್ ಡಿ. ಪೆನ್ನೇಕರ್ ಹಾಗೂ ಸೀಮಾ ಲಾಠ್ಕರ್ ಸಹ ತಂಡದಲ್ಲಿದ್ದಾರೆ. ಡಿವೈಎಸ್ಪಿ, ಇನ್‌ಸ್ಪೆಕ್ಟರ್, ಪಿಎಸ್‌ಐ ಹಾಗೂ ಹೆಡ್ ಕಾನ್‌ಸ್ಟೆಬಲ್‌ಗಳನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಕಡತಗಳನ್ನು ಈಗಾಗಲೇ ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ. ದೂರು ನೀಡಿದ್ದ ಇಬ್ಬರು ಸಂತ್ರಸ್ತೆಯರನ್ನು ಇಲ್ಲಿನ ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ಸೋಮವಾರ ಕರೆಸಿಕೊಂಡಿದ್ದ ಎಸ್‌ಐಟಿ ಅಧಿಕಾರಿಗಳು, ಅವರಿಬ್ಬರಿಂದ ಮರು ಹೇಳಿಕೆ ಪಡೆದುಕೊಂಡಿರುವುದಾಗಿ ಮೂಲಗಳು ಹೇಳಿವೆ.
‘ಮನೆ ಕೆಲಸದ ಮಹಿಳೆ ನೀಡಿರುವ ಪ್ರಾಥಮಿಕ ಮಾಹಿತಿ ಆಧರಿಸಿ ಪ್ರಕರಣ ದಾಖಲಾಗಿದೆ. ಇದೀಗ, ಎಸ್‌ಐಟಿ ತನಿಖೆ ಶುರುವಾಗಿದೆ. ಮಹಿಳೆ ಮೇಲಾಗಿರುವ ದೌರ್ಜನ್ಯದ ಸಂಪೂರ್ಣ ಮಾಹಿತಿ ತನಿಖೆಗೆ ಅಗತ್ಯವಿದೆ. ಹೀಗಾಗಿ, ಸಂತ್ರಸ್ತೆಯರಿಂದ ಮರು ಹೇಳಿಕೆ ಪಡೆಯಲಾಗಿದೆ. ಹೇಳಿಕೆ ಪರಿಶೀಲನೆ ನಡೆಸಲಾಗುತ್ತಿದೆ. ಅದಕ್ಕೆ ಸಂಬಂಧಪಟ್ಟ ಪುರಾವೆಗಳನ್ನು ಸಂಗ್ರಹಿಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ವಿಡಿಯೊ ಪರಿಶೀಲನೆಗೆ ಪ್ರತ್ಯೇಕ ತಂಡ: ‘ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತ್ರ ಎಸ್‌ಐಟಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ವಿಡಿಯೊಗಳ ಬಗ್ಗೆ ಪರಿಶೀಲನೆ ನಡೆಸಲು ಪ್ರತ್ಯೇಕ ತಂಡ ರಚಿಸಲಾಗಿದ್ದು, ಮಾಹಿತಿ ಕಲೆಹಾಕುವ ಕೆಲಸ ಪ್ರಗತಿಯಲ್ಲಿದೆ’ ಎಂದು ಮೂಲಗಳು ತಿಳಿಸಿವೆ.
‘ಮಹಿಳೆಯರ ಮೇಲೆ ದೌರ್ಜನ್ಯವಾಗಿರುವುದು ಕೆಲ ವಿಡಿಯೊಗಳಿಂದ ಗೊತ್ತಾಗುತ್ತಿದೆ. ಆದರೆ, ಅಸಲಿ ವಿಡಿಯೊ ಅಗತ್ಯವಿದೆ. ಅವು ಎಲ್ಲಿವೆ? ಎಂಬುದು ತನಿಖೆಯಿಂದ ತಿಳಿಯಬೇಕಿದೆ. ವಿಡಿಯೊದಲ್ಲಿರುವ ಮಹಿಳೆಯರ ಹೇಳಿಕೆಯೂ ಅತ್ಯಗತ್ಯ. ಮಹಿಳೆಯರ ವಿವರಗಳು ಲಭ್ಯವಾಗುತ್ತಿದ್ದಂತೆ, ಅವರಿಂದ ಹೇಳಿಕೆ ಪಡೆಯಲು ಪ್ರಯತ್ನಿಸಲಾಗುವುದು. ನಂತರ, ವಿಡಿಯೊ ಆಧರಿಸಿ ಪ್ರತ್ಯೇಕ ಪ್ರಕರಣಗಳು ದಾಖಲಾಗಲಿವೆ. ಬಳಿಕವೇ ಪ್ರಕರಣಗಳ ತನಿಖೆ ಎಸ್‌ಐಟಿಗೆ ವರ್ಗಾವಣೆ ಆಗಲಿದೆ’ ಎಂದು ಹೇಳಿವೆ.
ಪ್ರತ್ಯೇಕ ಸಭೆ: ಎಸ್‌ಐಟಿ ಅಧಿಕಾರಿಗಳು ಹೊಸ ಸಿಬ್ಬಂದಿ ನೇಮಕ ಹಾಗೂ ಪ್ರಕರಣದ ಮಾಹಿತಿ ವಿನಿಮಯಕ್ಕಾಗಿ ಸಿಐಡಿ ಕಚೇರಿಯಲ್ಲಿ ಸೋಮವಾರ ಮಧ್ಯಾಹ್ನ ಸಭೆ ನಡೆಸಿದರು. ಹಾಸನಕ್ಕೆ ಪ್ರತ್ಯೇಕ ತಂಡವೊಂದನ್ನು ಕಳುಹಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.