ADVERTISEMENT

ಬಯಲು ಚಿತಾಗಾರದಲ್ಲಿ ‘ಧರ್ಮ ಸಂಕಟ’

ಧಾರ್ಮಿಕ ವಿಧಿ–ವಿಧಾನ ಪಾಲಿಸಬೇಕೋ– ಕೋವಿಡ್‌ ಶವದಿಂದ ದೂರವಿರಬೇಕೋ ?

ಗುರು ಪಿ.ಎಸ್‌
Published 8 ಮೇ 2021, 20:30 IST
Last Updated 8 ಮೇ 2021, 20:30 IST
ಗಿಡ್ಡೇನಹಳ್ಳಿಯ ಬಯಲು ಚಿತಾಗಾರದಲ್ಲಿ ಮೃತರಿಗೆ ಅಂತಿಮ ನಮನ ಸಲ್ಲಿಸುತ್ತಿರುವ ಸಂಬಂಧಿಗಳು –ಪ್ರಜಾವಾಣಿ ಚಿತ್ರ/ ಅನೂಪ್ ರಾಘ್ ಟಿ.
ಗಿಡ್ಡೇನಹಳ್ಳಿಯ ಬಯಲು ಚಿತಾಗಾರದಲ್ಲಿ ಮೃತರಿಗೆ ಅಂತಿಮ ನಮನ ಸಲ್ಲಿಸುತ್ತಿರುವ ಸಂಬಂಧಿಗಳು –ಪ್ರಜಾವಾಣಿ ಚಿತ್ರ/ ಅನೂಪ್ ರಾಘ್ ಟಿ.   

ಬೆಂಗಳೂರು: ‘ಟೋಕನ್‌ ನಂಬರ್‌ 15 ಯಾರ್ರೀ... ಬೇಗ ಬೇಗ ಬಾಡಿ ತಗೊಂಡ್ ಬನ್ನಿ...’

ಇಷ್ಟು ಹೊತ್ತು ನಿರೀಕ್ಷಿಸಿದ್ದ ಸಮಯ ಬಂತು ಎಂಬ ಧಾವಂತದಲ್ಲಿ ಮುಂದಡಿ ಇಡಬೇಕೋ, ರಕ್ತ–ಮಾಂಸ, ನೋವು–ನಲಿವು ಎಲ್ಲವನ್ನೂ ಹಂಚಿಕೊಂಡವರ ದೇಹಕ್ಕೆ ಅಗ್ನಿಸ್ಪರ್ಶ ಮಾಡುವುದು ಹೇಗೆಂಬ ಸಂಕಟದಲ್ಲಿ ಹಿಂದಡಿ ಇಡಬೇಕೋ ಗೊತ್ತಾಗದೇ ಮೃತರ ಸಂಬಂಧಿಕರು ಸಂದಿಗ್ಧದಲ್ಲಿದ್ದರು. ಶವ ಸಂಸ್ಕಾರಕ್ಕೂ ಟೋಕನ್ ತೆಗೆದುಕೊಳ್ಳುವಂತಾದ ತಮ್ಮ ‘ಹಣೆಬರಹವನ್ನು’ ಶಪಿಸುತ್ತಿದ್ದರು.

ನಗರದ ತಾವರೆಕೆರೆ–ಗಿಡ್ಡೇನಹಳ್ಳಿಯಲ್ಲಿ ಕೋವಿಡ್ ಶವಗಳನ್ನು ದಹಿಸಲು ರೂಪಿಸಲಾಗಿರುವ ಬಯಲು ಚಿತಾಗಾರಗಳ ಮುಂದೆ ಒಂದೆರಡು ತಾಸು ನಿಂತರೂ ಸಾಕು, ಇಂತಹ ಅನೇಕ ದೃಶ್ಯಗಳು ಮನಸನ್ನು ನೋಯಿಸಿ, ಕಣ್ಣುಗಳನ್ನು ತೋಯಿಸುತ್ತವೆ.

ADVERTISEMENT

ಸ್ವಲ್ಪ ಜಾಗೃತಿ ವಹಿಸಿದ್ದರೆ ಕೋವಿಡ್ ಬರುತ್ತಿರಲಿಲ್ಲವೇನೋ ಎಂಬ ಬೇಸರ, ಸಕಾಲಕ್ಕೆ ಚಿಕಿತ್ಸೆ ಕೊಡಿಸಲಾಗಲಿಲ್ಲವಲ್ಲ ಎಂಬ ಅಸಹಾಯಕತೆ, ಕೊನೆಯ ಕ್ಷಣದಲ್ಲಾದರೂ ಗೌರವಯುತವಾಗಿ ಕಳಿಸಿಕೊಡಬೇಕು, ಎಲ್ಲ ‘ಸಂಸ್ಕಾರ’ಗಳನ್ನು ನೆರವೇರಿಸಬೇಕು ಎಂಬ ಅಪೇಕ್ಷೆ... ಇಂತಹ ‘ಧರ್ಮ ಸಂಕಟ’ದಲ್ಲಿ ಅನೇಕರಿದ್ದರು.

ಧಾರ್ಮಿಕ ವಿಧಿ–ವಿಧಾನಗಳನ್ವಯ ಅಂತ್ಯಸಂಸ್ಕಾರ ನಡೆಯದಿದ್ದರೆ ಮೋಕ್ಷ ಸಿಗುವುದಿಲ್ಲ, ಮೃತರ ಆತ್ಮಕ್ಕೆ ಶಾಂತಿ ಲಭಿಸುವುದಿಲ್ಲ ಎಂಬ ನಂಬಿಕೆ ಒಂದೆಡೆಯಾದರೆ, ನಮಗೂ ಸೋಂಕು ತಗುಲಿದರೆ ನಮ್ಮನ್ನು ನಂಬಿದ ಉಳಿದವರ ಕಥೆ ಏನು ಎಂಬ ಚಿಂತೆ ಮತ್ತೊಂದೆಡೆ.

ಒಂದಾದ ನಂತರ ಒಂದು ಶವಗಳು ಹೀಗೆ ಸುಡುತ್ತಲೇ ಇದ್ದರೆ, ಮುಸ್ಲಿಂ ಯುವಕರು ಅವುಗಳ ದಹನಕ್ಕೆ ಸಹಕರಿಸುವ, ಸೌದೆಗಳನ್ನು ಒಡೆದು ಜೋಡಿಸುವ ಕೆಲಸದಲ್ಲಿ ನಿರತರಾಗಿದ್ದರು.

ಶವ ಸುಟ್ಟ ಬೂದಿ ತಣ್ಣಗಾಗುವುದಕ್ಕೂ ಮೊದಲೇ ಅದನ್ನು ಹೊಸ ಮಡಿಕೆಯಲ್ಲಿ ತುಂಬಿಕೊಳ್ಳಬೇಕಾದ ಅನಿವಾರ್ಯ ಸಂಬಂಧಿಕರದ್ದು. ‘ಬೇಗ ಬೇಗ ತಗೊಳ್ರೀ’ ಎಂಬ ಒತ್ತಡ ಬೇರೆ.

ಕಳಿಸುವಾಗಲಾದರೂ ‘ಮೃತರನ್ನು’ ನೆಮ್ಮದಿಯಾಗಿ ‘ಕಳಿಸೋಣ’ ಎಂದುಕೊಂಡ ಕೆಲವರು ಚಿತಾಗಾರದ ಬಳಿಯೇ ಸಂಸ್ಕಾರ ನಡೆಸಲು ನಿರ್ಧರಿಸಿದ್ದರು. ಚಿತಾಗಾರಕ್ಕಿಂತ ಅನತಿ ದೂರದಲ್ಲಿ (ಕಾರುಗಳ ನಿಲುಗಡೆ ಸ್ಥಳದ ಪಕ್ಕ) ‘ಸಂಸ್ಕಾರ’ ಕ್ರಿಯೆ ನಡೆಯುತ್ತಿತ್ತು.

ಅಂತಿಮ ವಿಧಿ–ವಿಧಾನ ನೆರವೇರಿಸಲು ಬರಲು ಒಪ್ಪದ ಪುರೋಹಿತರನ್ನು ಕಾಡಿ–ಬೇಡಿ ಒಪ್ಪಿಸಿ, ಅವರಿಗೂ ಪಿಪಿಇ ಕಿಟ್‌ ಹಾಕಿಸಿ ಕರೆತಂದಿದ್ದರು.

ಪತಿಯನ್ನು ಕಳೆದುಕೊಂಡ ಮಹಿಳೆಯ ‘ಮುತ್ತೈದೆ’ತನವನ್ನು ತೆಗೆಯುವ ಕಾರ್ಯ ಅದು. ಅವರುಟ್ಟ ಸೀರೆಯ ಮೇಲೆಯೇ ಮತ್ತೊಂದು ಸೀರೆ ಉಡಿಸಿ, ಬಳೆ ತೊಡಿಸಿ, ಹೂವು ಮುಡಿಸಿ, ಚಿತಾಭಸ್ಮವಿರುವ ಮಡಿಕೆಗೆ ಪೂಜೆ ಮಾಡಿಸಿ, ನಂತರ ಇವೆಲ್ಲವನ್ನೂ ತೆಗೆಸಲಾಗುತ್ತಿತ್ತು.

ಗಂಡು ಮಕ್ಕಳಿದ್ದರೆ ಅವರ ಕೇಶಮುಂಡನ ಕಾರ್ಯವೂ ಇಲ್ಲಿಯೇ ನಡೆಯುತ್ತಿತ್ತು. ಆದರೆ, ಹೀಗೆ ಧಾರ್ಮಿಕ ವಿಧಿ–ವಿಧಾನಗಳನ್ನು ಸಂಪೂರ್ಣವಾಗಿ ನೆರವೇರಿಸುತ್ತಿದ್ದವರ ಸಂಖ್ಯೆ ಶೇ 10ರಷ್ಟು ಮಾತ್ರ. ಉಳಿದ ಶೇ 90ರಷ್ಟು ಜನರ ಪೈಕಿ ಕೆಲವರಿಗೆ ಈ ಕಾರ್ಯಗಳನ್ನೆಲ್ಲ ನೆರವೇರಿಸಬೇಕೆಂಬ ಮನಸಿದ್ದರೂ, ಅನಿವಾರ್ಯ ಪರಿಸ್ಥಿತಿಗಳು ಅವರಿಗೆ ಇಂತಹ ಅವಕಾಶವನ್ನು ನೀಡಿರಲಿಲ್ಲ.

ಚಿತಾಗಾರಗಳ ಬಳಿಯೇ ‘ಸಂಸ್ಕಾರ’ ಕ್ರಿಯೆ ನಡೆಸಲು ಆಗದ ಅನೇಕರು, ಚಿತಾಭಸ್ಮವನ್ನು ತುಂಬಿಕೊಳ್ಳದೇ ಇರುತ್ತಿರಲಿಲ್ಲ. ಅದನ್ನು ಕಾವೇರಿ ನದಿಯಲ್ಲಿ ಬಿಟ್ಟು ನಮಸ್ಕರಿಸಿದರಾಯಿತು ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದರು.

25 ಎಕರೆಯಷ್ಟು ವಿಶಾಲ ಜಾಗದಲ್ಲಿ ಸರ್ಕಾರ ಎಲ್ಲ ವ್ಯವಸ್ಥೆ ಮಾಡಿದೆ. ಶಾಮಿಯಾನವನ್ನು ಹಾಕಿ ವಿಶ್ರಾಂತಿಗೂ ಅವಕಾಶ ಕಲ್ಪಿಸಿದೆ. ಏನೆಲ್ಲ ವ್ಯವಸ್ಥೆಗಳಿದ್ದರೂ, ಸತ್ತವರನ್ನೂ ನೆಮ್ಮದಿಯಾಗಿ ಕಳಿಸಲು ಆಗದ ಪರಿಸ್ಥಿತಿಗೆ ಯಾರನ್ನು ಶಪಿಸಬೇಕು, ನಮ್ಮ ನಮ್ಮ ನಂಬಿಕೆಯಂತೆ, ನೆಮ್ಮದಿಯಿಂದ ಅಂತ್ಯಕ್ರಿಯೆಯನ್ನೂ ನಡೆಸಲಾಗದ ಸ್ಥಿತಿಗೆ ಯಾರನ್ನು ದೂರಬೇಕು ಎಂಬ ಸಂಧಿಗ್ಧತೆ ಅನೇಕರ ಮುಖದಲ್ಲಿ ಕಾಣುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.