ಬೆಂಗಳೂರು: ನಗರದ ಯಶವಂತಪುರದಲ್ಲಿ ಮಂಗಳವಾರ ನಸುಕಿನ ವೇಳೆ ಸಂಭವಿಸಿದ ಅಪಘಾತದಲ್ಲಿ ಕಾರೊಂದು ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದು ಸಾಫ್ಟ್‌ವೇರ್ ಕಂಪನಿ ಉದ್ಯೋಗಿಯೊಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.
ತಮಿಳುನಾಡಿನ ಸೇಲಂ ನಿವಾಸಿ ಎಸ್.ಶಬರೀಶ್(29) ಮೃತಪಟ್ಟಿದ್ದು, ಮಿಥುನ್ ಚಕ್ರವರ್ತಿ (28), ಶಂಕರ್ ರಾಮ್ (29), ಅನುಶ್ರೀ (25) ಹಾಗೂ ಬೈಕ್ ಚಾಲಕ ಮಂಜುನಾಥ್ (38) ಗಾಯಗೊಂಡಿದ್ದಾರೆ. ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿಥುನ್ ಚಕ್ರವರ್ತಿ ಅವರ ಸ್ಥಿತಿ ಗಂಭೀರವಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.
ಬೈಕ್‌ಗೆ ಡಿಕ್ಕಿ ಹೊಡೆದ ಕಾರು ಮೇಲ್ಸೇತುವೆಯಿಂದ ಸುಮಾರು 30 ಅಡಿ ಕೆಳಕ್ಕೆ ಬಿದ್ದಿದ್ದು ಅನಾಹುತಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದರು.
‘ಕಾರಿನಲ್ಲಿದ್ದ ನಾಲ್ವರೂ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದು, ಅಮೆರಿಕ ಪ್ರವಾಸಕ್ಕೆ ತೆರಳುವುದಕ್ಕೆ ವೀಸಾ ಅರ್ಜಿ ಕೇಂದ್ರದಿಂದ ವೀಸಾ ಪಡೆದುಕೊಳ್ಳಲು ಬೆಂಗಳೂರಿಗೆ ಬಂದಿದ್ದರು. ವಿದೇಶ ಪ್ರವಾಸಕ್ಕೆಂದು ಒರಾಯನ್ ಮಾಲ್‌ನಲ್ಲಿ ನಾಲ್ವರೂ ಬಟ್ಟೆ ಸೇರಿದಂತೆ ಅಗತ್ಯ ಸಾಮಗ್ರಿ ಖರೀದಿಸಿದ್ದರು. ನಂತರ ರೆಸ್ಟೋರೆಂಟ್‌ವೊಂದಕ್ಕೆ ತೆರಳಿ ಪಾರ್ಟಿ ನಡೆಸಿದ್ದರು. ತಡರಾತ್ರಿ ತನಕ ಪಾರ್ಟಿ ನಡೆಸಿದ್ದ ಅವರು ಸ್ಯಾಂಕಿ ರಸ್ತೆ ಕಡೆಯಿಂದ ಯಶವಂತಪುರ ಮೇಲ್ಸೇತುವೆ ಮಾರ್ಗವಾಗಿ ತುಮಕೂರು ರಸ್ತೆ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಮಂಗಳವಾರ ನಸುಕಿನ 4ರ ಸುಮಾರಿಗೆ ಮೇಲ್ಸೇತುವೆಯಲ್ಲಿ ವೇಗವಾಗಿ ತೆರಳುತ್ತಿದ್ದ ಕಾರು ಬೈಕ್‌ಗೆ ಡಿಕ್ಕಿಯಾಗಿದೆ. ನಂತರ, ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಒಂದು ಬಾಗಿಲು ತೆರೆದುಕೊಂಡು ಅನುಶ್ರೀ ರಸ್ತೆ ಬದಿಗೆ ಬಿದ್ದಿದ್ದರು. ಚಾಲಕ ಮಿಥುನ್ ಮೇಲ್ಸೇತುವೆಯಿಂದ ಹೊರಕ್ಕೆ ಹಾರಿ ಬಿದ್ದಿದ್ದರು. ಮತ್ತಿಬ್ಬರು ಕಾರು ಸಹಿತ ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದರು. ಘಟನೆಯಲ್ಲಿ ಬೈಕ್ ಚಾಲಕ ಮಂಜುನಾಥ್‌ಗೂ ಗಾಯವಾಗಿದೆ’ ಎಂದು ಸಂಚಾರ ಪೊಲೀಸರು ಹೇಳಿದರು.
ಆಟೊ ಚಾಲಕರ ನೆರವು:
‘ನಸುಕಿನಲ್ಲಿ ರಸ್ತೆಯಲ್ಲಿ ವಾಹನ ಸಂಚಾರ ವಿರಳ ಆಗಿತ್ತು. ಅದೇ ವೇಳೆಯಲ್ಲಿ ಅಪಘಾತವಾಗಿದೆ. ಅಪಘಾತ ನಡೆದ ಬಳಿಕ ಜೋರಾದ ಶಬ್ದ ಕೇಳಿಬಂತು. ತಿರುಗಿ ನೋಡುವಷ್ಟರಲ್ಲಿ ಕಾರು ಕೆಳಕ್ಕೆ ಬಿದ್ದಿತ್ತು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದೆವು. ಪೊಲೀಸರ ನೆರವಿನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಯಿತು’ ಎಂದು ಸಂಚಾರ ಪೊಲೀಸರು ಹೇಳಿದರು.
ಘಟನೆಯಿಂದ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಬೈಕ್‌ನ ಮುಂಭಾಗಕ್ಕೆ ಹಾನಿಯಾಗಿದೆ. ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದೇಶಿ ಪ್ರವಾಸಕ್ಕೆ ತೆರಳುವ ಸಂಭ್ರಮದಲ್ಲಿ ಎಲ್ಲರೂ ತಡರಾತ್ರಿವರೆಗೂ ಪಾರ್ಟಿ ನಡೆಸಿ ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಮದ್ಯ ಸೇವನೆ ಬಳಿಕ ಎಲ್ಲರೂ ನಗರದಲ್ಲಿ ‘ಜಾಲಿ ರೈಡ್’ ಹೊರಟಿದ್ದರು. ಆಗ ಅಪಘಾತವಾಗಿದೆ ಎಂದು ಹೇಳಲಾಗಿದೆ. ‘ಕಾರನ್ನು ಪರಿಶೀಲನೆ ನಡೆಸಲಾಗಿದೆ. ಕಾರಿನಲ್ಲಿ ಮದ್ಯದ ಒಂದು ಬಾಟಲಿ ಸಿಕ್ಕಿದೆ’ ಎಂದು ಮೂಲಗಳು ಹೇಳಿವೆ. ‘ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಚೇತರಿಕೆಯಾದ ಬಳಿಕ ಮದ್ಯ ಸೇವನೆ ಮಾಡಿದ್ದರೆ ಇಲ್ಲವೆ? ಎಂಬುದುರ ಕುರಿತು ಮಾಹಿತಿ ಪಡೆದುಕೊಳ್ಳಲಾಗುವುದು’ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.