ADVERTISEMENT

ಪೀಣ್ಯದಾಸರಹಳ್ಳಿ | 'ಕಳಪೆ ಕಾಮಗಾರಿ; ಗುತ್ತಿಗೆದಾರರ ವಿರುದ್ಧ ಕ್ರಮ'

ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 15:44 IST
Last Updated 27 ಜೂನ್ 2024, 15:44 IST
ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಮತ್ತು ಶಾಸಕ ಎಸ್. ಮುನಿರಾಜು ಅಧಿಕಾರಿಗಳೊಂದಿಗೆ ನೆಲಗದರನಹಳ್ಳಿ ಮುಖ್ಯರಸ್ತೆಯನ್ನು ಪರಿಶೀಲಿಸಿದರು.
ಬಿಬಿಎಂಪಿ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಮತ್ತು ಶಾಸಕ ಎಸ್. ಮುನಿರಾಜು ಅಧಿಕಾರಿಗಳೊಂದಿಗೆ ನೆಲಗದರನಹಳ್ಳಿ ಮುಖ್ಯರಸ್ತೆಯನ್ನು ಪರಿಶೀಲಿಸಿದರು.   

ಪೀಣ್ಯದಾಸರಹಳ್ಳಿ: ‘ಸಮಯಕ್ಕೆ‌ ಸರಿಯಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸದಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು‘ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌ ಎಚ್ಚರಿಕೆ ನೀಡಿದ್ದಾರೆ.

ನೆಲಗದರನಹಳ್ಳಿ ಮತ್ತು ಹೆಸರಘಟ್ಟ ಹಾಗೂ ವ್ಯೆಮ್ಯಾಕ್ ಸರ್ಕಲ್ ಮುಖ್ಯರಸ್ತೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಕಳಪೆಯಾಗಿವೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಶಾಸಕ ಎಸ್‌. ಮುನಿರಾಜು ಅವರೊಂದಿಗೆ ಸ್ಥಳ ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ‘ಕಳಪೆ ಕಾಮಗಾರಿ ನಡೆಯುತ್ತಿರುವುದು ಕಂಡುಬಂದಿದೆ. ಈಗಾಗಲೇ ಸಂಬಂಧಿಸಿದ ಗುತ್ತಿಗೆದಾರರಿಗೆ ನಾಲ್ಕು ನೋಟಿಸ್‌ ನೀಡಲಾಗಿದೆ. ಅವರು ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಬೇರೊಂದು ಕಂಪನಿಯಿಂದ ಗುಣಮಟ್ಟದ ಕಾಮಗಾರಿ ಮಾಡಿಸಿ, ಆಗಸ್ಟ್ ಅಂತ್ಯದೊಳಗೆ ನೆಲಗದರನಹಳ್ಳಿ ಮುಖ್ಯರಸ್ತೆ, ಡಿಸೆಂಬರ್ ಅಂತ್ಯದೊಳಗೆ ಹೆಸರಘಟ್ಟ ಮುಖ್ಯರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು‘ ಎಂದು ಭರವಸೆ ನೀಡಿದರು.

ADVERTISEMENT

ಶಾಸಕ ಎಸ್. ಮುನಿರಾಜು ಮಾತನಾಡಿ 'ಹೆಸರಘಟ್ಟದ ಮುಖ್ಯರಸ್ತೆ ಕಾಮಗಾರಿಯನ್ನು ₹15 ಕೋಟಿಗೆ ಗುತ್ತಿಗೆ ನೀಡಲಾಗಿತ್ತು. ₹3 ಕೋಟಿಯಷ್ಟು ಕಾಮಗಾರಿ ಮಾಡದೇ, ₹8 ಕೋಟಿ ಬಿಲ್ ಮಾಡಿದ್ದರು. ಅಷ್ಟು ಕಾಮಗಾರಿ ನಡೆದಿಲ್ಲ. ಬಿಲ್ ನೀಡಬೇಡಿ' ಎಂದು ಪತ್ರ ಬರೆದಿದ್ದೆ. ಈ ಹಿನ್ನಲೆಯಲ್ಲಿ ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಸ್ಥಳ ಪರಿಶೀಲನೆ ನಡೆಸಿದ್ದಾರೆ’ ಎಂದು ವಿವರಿಸಿದರು.

‘ವೈಮ್ಯಾಕ್ ಸರ್ಕಲ್‌ ರಸ್ತೆಗೆ ₹8 ಕೋಟಿ, ಹೆಸರಘಟ್ಟ ಮುಖ್ಯರಸ್ತೆಗೆ ₹15 ಕೋಟಿ, ನೆಲಗರನಹಳ್ಳಿ ಮುಖ್ಯರಸ್ತೆ ಅಭಿವೃದ್ಧಿಗೆ ₹20ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.