ADVERTISEMENT

ರಜೆ ದಿನಗಳಲ್ಲೂ ರಸ್ತೆ ಗುಂಡಿ ದುರಸ್ತಿ: ತುಷಾರ್‌ ಗಿರಿನಾಥ್‌

ಡಿಸಿಎಂ ನೀಡಿರುವ ಗಡುವಿನೊಳಗೆ ಗುಂಡಿಗಳನ್ನು ಮುಚ್ಚಲಾಗುತ್ತದೆ: ತುಷಾರ್‌ ಗಿರಿನಾಥ್‌

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 13:54 IST
Last Updated 14 ಸೆಪ್ಟೆಂಬರ್ 2024, 13:54 IST
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಯಲಹಂಕ ವಲಯದ ಸಹಕಾರ ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಶನಿವಾರ ಪರಿಶೀಲಿಸಿದರು
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಯಲಹಂಕ ವಲಯದ ಸಹಕಾರ ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಶನಿವಾರ ಪರಿಶೀಲಿಸಿದರು   

ಬೆಂಗಳೂರು: ಮೂರು ದಿನ ಸರ್ಕಾರಿ ರಜೆ ಇದ್ದರೂ, ಆ ದಿನಗಳಲ್ಲೂ ಅಧಿಕಾರಿಗಳು, ಎಂಜಿನಿಯರ್‌ಗಳು ಕಾರ್ಯನಿರ್ವಹಿಸಿ, ರಸ್ತೆಗಳ ಗುಂಡಿಗಳನ್ನು ಮುಚ್ಚಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ತಿಳಿಸಿದರು.

ಯಲಹಂಕ ವಲಯದ ಸಹಕಾರ ನಗರದ 20ನೇ ಅಡ್ಡರಸ್ತೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಶನಿವಾರ ಅವರು ಮಾತನಾಡಿದರು.

ನಗರದಲ್ಲಿ ಮಳೆ ಬರುವುದು ನಿಂತಿದ್ದು, ಗುತ್ತಿಗೆದಾರರಿಂದ ಹೆಚ್ಚು ಹಾಟ್‌ಮಿಕ್ಸ್ ಪಡೆದು ಹಗಲು-ರಾತ್ರಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಾಗುವುದು. ಉಪ‍ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನೀಡಿರುವ ಗಡುವಿನಲ್ಲಿ ಬಾಕಿಯಿರುವ ರಸ್ತೆ ಗುಂಡಿಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ADVERTISEMENT

ವಲಯ ಆಯುಕ್ತ ಕರೀಗೌಡ ಮಾತನಾಡಿ, ಯಲಹಂಕ ವಲಯ ವ್ಯಾಪ್ತಿಯಲ್ಲಿ 1,567 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. 865 ಕಿ.ಮೀ ಉದ್ದದ 5,433 ರಸ್ತೆಗಳನ್ನು ಡಾಂಬರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ. ವಲಯದ 14 ಹಳ್ಳಿಗಳಲ್ಲಿ 89 ಕಿ.ಮೀ ಉದ್ದದ 499 ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕಿದೆ ಎಂದರು.

ಜಂಟಿ ಆಯುಕ್ತ ಮೊಹ್ಮದ್ ನಯೀಮ್ ಮೊಮಿನ್, ಮುಖ್ಯ ಎಂಜಿನಿಯರ್‌ ರಂಗನಾಥ್, ಕಾರ್ಯಪಾಲಕ ಎಂಜಿನಿಯರ್‌ ಪ್ರದೀಪ್, ನಾಗಪ್ಪ ಕಮತಿ ಉಪಸ್ಥಿತರಿದ್ದರು.

‘ತಿಂಗಳಾಂತ್ಯಕ್ಕೆ ಕಾಯಂ ಪೌರಕಾರ್ಮಿಕರ ಪಟ್ಟಿ’

‘ಕಾಯಂಗೊಳ್ಳಲಿರುವ ಪೌರಕಾರ್ಮಿಕ ಪಟ್ಟಿಯನ್ನು ಈ ತಿಂಗಳ ಅಂತ್ಯಕ್ಕೆ ಪ್ರಕಟಿಸಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದರು. ಪೌರಕಾರ್ಮಿಕರ ಪಿತಾಮಹ ಐ.ಪಿ.ಡಿ. ಸಾಲಪ್ಪ ಅವರ 28ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪಾಲಿಕೆ ಕೇಂದ್ರ ಕಚೇರಿಯ ಆವರಣದಲ್ಲಿರುವ ಸಾಲಪ್ಪ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ‘ಕಾಯಂಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸುವುದು ಸೇರಿದಂತೆ ಅವರಿಗೆ ತಾಂತ್ರಿಕ ಅತ್ಯುತ್ತಮ ರಕ್ಷಣಾ ಉಪಕರಣಗಳನ್ನೂ ನೀಡಲಾಗುತ್ತದೆ’ ಎಂದು ತಿಳಿಸಿದರು. ಆಡಳಿತ ವಿಭಾಗದ ವಿಶೇಷ ಆಯುಕ್ತ ಅವಿನಾಶ್ ಮೆನನ್ ರಾಜೇಂದ್ರನ್ ಪೂರ್ವ ವಲಯ ಆಯುಕ್ತೆ ಸ್ನೇಹಲ್ ಉಪ ಆಯುಕ್ತ ಮಂಜುನಾಥ್ ಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.