ಯಲಹಂಕ: ಅಗೆದು ಬಿಟ್ಟಿರುವ ರಸ್ತೆಗಳು, ಜಲ್ಲಿ ಹರಡಿ ಮಾಯವಾದ ಅಧಿಕಾರಿಗಳು, ಕಲ್ಲು–ಗುಂಡಿಗಳ ಹಾದಿಯಲ್ಲಿ ವಾಹನ ಸವಾರರ ಪರದಾಟ.
ಇದು ಜಕ್ಕೂರು ಬಡಾವಣೆಯಿಂದ ಚೊಕ್ಕನಹಳ್ಳಿ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಸ್ಥಿತಿ ಇದು.
ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾದ ಗ್ರಾಮಗಳಿಗೆ ಕಾವೇರಿ ನೀರು ಪೂರೈಕೆ ಮಾಡುವ ಉದ್ದೇಶದಿಂದ ಜಕ್ಕೂರು ಬಡಾವಣೆಯಿಂದ ಚೊಕ್ಕನಹಳ್ಳಿ ತನಕ ಬೆಂಗಳೂರು ಜಲಮಂಡಳಿ ವತಿಯಿಂದ 5ನೇ ಹಂತದ ಕಾವೇರಿನೀರು ಪೂರೈಕೆಗಾಗಿ (ಜೈಕಾ ಯೋಜನೆ) ದೊಡ್ಡ ಪೈಪ್‌ಗಳನ್ನು ಅಳವಡಿಸಲಾಗಿದೆ. ಅದಕ್ಕೆಂದು ತೆಗೆದಿದ್ದ ಗುಂಡಿಗಳನ್ನು ಸರಿಯಾಗಿ ಮುಚ್ಚದಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ.
‘ಜಕ್ಕೂರು, ಸಂಪಿಗೇಹಳ್ಳಿ, ಶ್ರೀರಾಮಪುರ, ಅಗ್ರಹಾರ, ಚೊಕ್ಕನಹಳ್ಳಿ ಸೇರಿದಂತೆ ಹಲವು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕಾವೇರಿ ಕೊಳವೆ ಮಾರ್ಗ ಅಳವಡಿಸಲು ಗುಂಡಿ ತೆಗೆದಿರುವಜಲಮಂಡಳಿಯು ಅದನ್ನು ಮುಚ್ಚದೆ ಹಾಗೇ ಬಿಟ್ಟಿದೆ. ಪ್ರತಿನಿತ್ಯ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪಾದಚಾರಿಗಳು ದುರಸ್ತಿ ಕಾಣದ ರಸ್ತೆಯಿಂದಾಗಿ ತೀವ್ರ ತೊಂದರೆ ಅನುಭವಿಸಬೇಕಾಗಿದೆ’ ಎಂದು ಸ್ಥಳೀಯರು ಆರೋಪಿಸುತ್ತಾರೆ.
‘ಜಕ್ಕೂರು ಬಡಾವಣೆಯ ಶನೈಶ್ಚರಸ್ವಾಮಿ ದೇವಾಲಯದಿಂದ ಜಕ್ಕೂರು ಮತ್ತು ಶಿವರಾಮಕಾರಂತನಗರ ಮಾರ್ಗವಾಗಿ ಚೊಕ್ಕನಹಳ್ಳಿಯವರೆಗೆ ಕಾವೇರಿ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿಯನ್ನು ಎರಡು ವರ್ಷಗಳ ಹಿಂದೆ ಜಲಮಂಡಳಿ ಆರಂಭಿಸಿತು. ರಸ್ತೆಯ ಅರ್ಧ ಭಾಗವನ್ನು ಜೆಸಿಬಿಯಿಂದ ಸುಮಾರು ಏಳೆಂಟು ಅಡಿಗಳಷ್ಟು ಆಳದ ತನಕ ತೆಗೆದು, ಪೈಪ್‌ಲೈನ್ ಅಳವಡಿಸಿದ ನಂತರ ಸರಿಯಾಗಿ ಮುಚ್ಚಿಲ್ಲ’ ಎಂದು ಜಕ್ಕೂರು ನಿವಾಸಿ ಎಂ.ಶ್ರೀನಿವಾಸಮೂರ್ತಿ ದೂರಿದರು.
‘ರಸ್ತೆಗೆಇತ್ತೀಚೆಗೆ ಕಾಟಾಚಾರಕ್ಕೆ ಜಲ್ಲಿ ಸುರಿದಿದ್ದರು. ವಾಹನಗಳ ಓಡಾಟದಿಂದ ಜಲ್ಲಿ ಕಲ್ಲುಗಳು ರಸ್ತೆಯೆಲ್ಲಾ ಹರಡಿಕೊಂಡಿವೆ. ವಾಹನ ಸಂಚಾರಕ್ಕೆ ಸಾಧ್ಯವೇ ಆಗದಷ್ಟು ತೊಂದರೆಯಾಗಿದೆ. ವೃದ್ಧರು ಮತ್ತು ಮಕ್ಕಳು ಪರದಾಡಬೇಕಾದ ಸ್ಥಿತಿ ಇದೆ. ಈ ರಸ್ತೆಯುದ್ದಕ್ಕೂ ಶಾಲಾ–ಕಾಲೇಜುಗಳಿದ್ದು, ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಪ್ರಯಾಸಪಡಬೇಕಾದ ಸ್ಥಿತಿ ಇದೆ’ ಎಂದು ಆರೋಪಿಸಿದರು.
ಜಲ್ಲಿ ಸುರಿದಿರುವ ರಸ್ತೆಯಲ್ಲಿ ವಾಹನ ಚಲಾಯಿಸುವುದು ಕಷ್ಟ. ವಾಹನಗಳ ಟೈರ್‌ಗಳು ರಸ್ತೆ ಮಧ್ಯದಲ್ಲೇ ಪಂಕ್ಚರ್ ಆಗಿ ನಿಲ್ಲುವಂತಾಗಿದೆ. ಟೈರ್‌ಗಳಿಗೆ ಸಿಲುಕುವ ಕಲ್ಲುಗಳು ಸಿಡಿದು ಬೇರೆ ವಾಹನ ಮತ್ತು ಪಾದಚಾರಿಗಳಿಗೆ ಬಡಿಯುತ್ತಿವೆ. ಸ್ಥಳೀಯರಿಗೆ ನರಕವೇ ಕಣ್ಮುಂದೆ ಬಂದಂತಾಗಿದೆ’ ಎಂದು ಸ್ಥಳೀಯರು ದೂರಿದರು.
ಶಾಸಕರಿಂದ ಪರಿಶೀಲನೆ
ಶಾಸಕ ಕೃಷ್ಣಬೈರೇಗೌಡ ಅವರು ಜಲಮಂಡಳಿ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ರಸ್ತೆಯ ಸ್ಥಿತಿ ಪರಿಶೀಲಿಸಿದರು.
ರಸ್ತೆಯಲ್ಲಿನ ತೊಂದರೆ ಬಗ್ಗೆ ಸ್ಥಳೀಯರು ಅಳಲು ತೋಡಿಕೊಂಡರು. ಈ ವೇಳೆ ಜಲಮಂಡಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಕೂಡಲೇ ರಸ್ತೆಯನ್ನು ಸರಿಪಡಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಸೂಚಿಸಿದರು.
***
‘ವಾರದೊಳಗೆ ಪರಿಹಾರ’
‘ರಸ್ತೆ ಅಭಿವೃದ್ಧಿಪಡಿಸುವ ಸಲುವಾಗಿ ಈಗಾಗಲೇ ವೆಟ್‌ಮಿಕ್ಸ್ ಮತ್ತು ಜಲ್ಲಿ ಹಾಕಲಾಗಿದೆ. ನಾಲ್ಕು ತಿಂಗಳಿಂದ ಮಳೆ ಪ್ರಮಾಣ ಜಾಸ್ತಿ ಇದ್ದಿದ್ದರಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಮುಂದಿನ ವಾರದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುವುದು’
-ನಾಗೇಂದ್ರಬಾಬು, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಜಲಮಂಡಳಿ
***
ಈ ರಸ್ತೆಯಲ್ಲಿ ವಾಹನಗಳು ಆಗಾಗ ಕೆಟ್ಟು ನಿಲ್ಲವುದು ಸಾಮಾನ್ಯವಾಗಿದೆ. ಗರ್ಭಿಣಿಯರು ಮತ್ತು ರೋಗಿಗಳನ್ನು ಕರೆದೊಯ್ಯಲು ತೀವ್ರ ತೊಂದರೆಯಾಗುತ್ತಿದೆ.
-ರವಿ, ಆಟೊರಿಕ್ಷಾ ಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.