ಬೆಂಗಳೂರು: ‘ರಸ್ತೆ ಯೋಜನೆ, ನಿರ್ವಹಣೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳನ್ನು ಸುಧಾರಿಸಲು ಅನುಸರಿಸಬೇಕಾದ ‘ಜಾಗತಿಕ ಕ್ರಮಗಳ’ ಮಾಹಿತಿಯನ್ನು ಪಾಲಿಕೆಯ ಎಂಜಿನಿಯರ್‌ಗಳಿಗೆ ನೀಡಲಾಗುತ್ತಿದೆ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಹೇಳಿದರು.
‘ನಮ್ಮ ರಸ್ತೆ’ ಕಾರ್ಯಕ್ರಮದ ಭಾಗವಾಗಿ ಬಿಬಿಎಂಪಿಯು ಬ್ಲೂಮ್‌ಬರ್ಗ್ ಫಿಲಾಂತ್ರಪಿಸ್ ಇನಿಷಿಯೇಟಿವ್ ಫಾರ್ ಗ್ಲೋಬಲ್ ರೋಡ್ ಸೇಫ್ಟಿ (ಬಿಐಜಿಆರ್‌ಎಸ್) ಅಡಿಯಲ್ಲಿ ಡಬ್ಲ್ಯುಆರ್‌ಐ ಇಂಡಿಯಾದೊಂದಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಈ ಕಾರ್ಯಾಗಾರದಲ್ಲಿ ಎಂಜಿನಿಯರ್‌ಗಳು ಕಂಡುಕೊಳ್ಳುವ ಪರಿಹಾರಗಳನ್ನು ನಮ್ಮ ಯೋಜನೆಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.
ಬೆಂಗಳೂರಿನ ರಸ್ತೆಗಳನ್ನು ಸುರಕ್ಷಿತವಾಗಿಸುವ ಉದ್ದೇಶದಿಂದ ತಾಂತ್ರಿಕ ತರಬೇತಿಯನ್ನು ಪಾಲಿಕೆಯ 34 ಎಂಜಿನಿಯರ್‌ಗಳಿಗೆ ಶುಕ್ರವಾರ ನೀಡಲಾಯಿತು. ಗುಣಮಟ್ಟದ ವಿಸ್ತೃತ ಯೋಜನಾ ವರದಿಗಳಿಗೆ (ಡಿಪಿಆರ್) ಪ್ರಸ್ತಾವ ನೀಡಲು (ಆರ್‌ಎಫ್‌ಪಿ) ರಚಿಸುವಾಗ ಮಾನವ-ಕೇಂದ್ರಿತ ಅಂಶಗಳ ಮೇಲೆ ಕೇಂದ್ರೀಕರಿಸಿದ ಯೋಜನೆಗಳನ್ನು ಗುರುತಿಸಲು ಎಂಜಿನಿಯರ್‌ಗಳಿಗೆ ತರಬೇತಿ ನೀಡಲಾಯಿತು.
ಡಬ್ಲ್ಯುಆರ್‌ಐ ಇಂಡಿಯಾದ ಸಮಗ್ರ ಸಾರಿಗೆ ವಿಭಾಗದ ಮುಖ್ಯಸ್ಥ ಧವಲ್ ಅಶರ್ ಮಾತನಾಡಿ, ‘ನಗರ ಮುಂದಿನ ಕೆಲವು ವರ್ಷಗಳಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಅತಿಹೆಚ್ಚಿನ ಏರಿಕೆ ಕಾಣಲಿದೆ. ಅದರ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು, ಪ್ರತಿಯೊಬ್ಬರಿಗೂ ಸುರಕ್ಷಿತ ರಸ್ತೆಗಳನ್ನು ನಿರ್ಮಿಸಬೇಕಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.