ರಾಜರಾಜೇಶ್ವರಿ ನಗರ: ರಾಜರಾಜೇಶ್ವರಿ ನಗರ ವಾರ್ಡ್ ಕೆರೆ ಕೋಡಿ ಪಾಳ್ಯದಿಂದ ಹೊಸಕೆರೆಹಳ್ಳಿ ಕೆರೆ ಕೋಡಿವರೆಗೆ ರಸ್ತೆಯನ್ನು ಅಗೆದು ಹಾಗೇ ಬಿಟ್ಟಿರುವುದರಿಂದ ವಾಹನ ಸಂಚಾರಕ್ಕೂ ತೊಡಕಾಗಿದೆ. ಪಾದಚಾರಿಗಳಿಗೂ ಕಷ್ಟವಾಗಿದೆ.
ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆಯನ್ನು ಅಗೆದು ಬಿಟ್ಟಿರುವುದರಿಂದ ಅಲ್ಲಲ್ಲಿ ಗುಂಡಿಗಳು ಬಿದ್ದು ಸಣ್ಣ ಮಳೆ ಬಂದರೂ ರಸ್ತೆಯಲ್ಲಿ ತಿರುಗಾಡಲು ಪರದಾಡುವಂತಾಗಿದೆ. ದ್ವಿಚಕ್ರ ವಾಹನಗಳು ಗುಂಡಿಗೆ ಬಿದ್ದು ಅಪಘಾತಗಳುಂಟಾಗುತ್ತಿವೆ. ಮಳೆ ಬಂದರೆ ರಸ್ತೆಯು ಕೆಸರು ಗದ್ದೆಯಂತಾಗುತ್ತಿದೆ. ಅಧಿಕ ಮಳೆ ಬಂದರೆ ರಸ್ತೆಯೇ ಕಾಲುವೆಯಂತಾಗುತ್ತಿದೆ. ಗುಂಡಿ ಎಲ್ಲಿದೆ ಎಂಬುದೇ ಗೊತ್ತಾಗುತ್ತಿಲ್ಲ. ವಾಹನಗಳು ಬಂದಾಗ ಪಾದಚಾರಿಗಳ ಮೇಲೆ ಕೆಸರು ನೀರು ಹಾರುತ್ತಿದೆ. ಶಾಲಾ ಮಕ್ಕಳು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ರಾಜರಾಜೇಶ್ವರಿ ನಗರ ಬಡಾವಣೆಯ ನಿವಾಸಿಗಳು ದೂರಿದ್ದಾರೆ.
ಬಿಸಿಲು ಬಂದಾಗ ರಸ್ತೆಯೆಲ್ಲ ದೂಳುಮಯ ಆಗುತ್ತಿದೆ. ಇದರಿಂದ ಸಮೀಪದ ಮನೆಗಳಿಗೆ ದೂಳು ಹಾರಿ ಉಸಿರಾಡುವುದೇ ಕಷ್ಟವಾಗಿದೆ ಎಂದು ಗಟ್ಟಿಗೆರೆಯ ಜೆ.ಆಶಾ ಅಳಲು ತೋಡಿಕೊಂಡರು.
ರಾಜರಾಜೇಶ್ವರಿ ನಗರ, ಐಡಿಯಲ್ ಹೋಮ್ಸ್, ಬಂಗಾರಪ್ಪನಗರ, ಹಲಗೆ ವಡೇರಹಳ್ಳಿ, ಕೆಂಚೇನಹಳ್ಳಿ, ಜವರೇಗೌಡನ ದೊಡ್ಡಿ ಸುತ್ತಮುತ್ತಲಿನ ಬಡಾವಣೆಯ ಜನರು ಜೆ.ಪಿ.ನಗರ, ಜಯನಗರ, ಪದ್ಮನಾಭನಗರ, ಬನಶಂಕರಿ ಮುಂತಾದ ಬಡಾವಣೆಗಳಿಗೆ ಕಿತ್ತು ಹೋಗಿರುವ ಈ ರಸ್ತೆಯಲ್ಲಿಯೇ ಸಂಚರಿಸಬೇಕಿದೆ ಎಂದು ಸ್ಥಳೀಯರಾದ ರಾಘವೇಂದ್ರ ಭಟ್, ಕಾರ್ತಿಕ್ ಗೌಡ, ಧನಂಜಯ ಅಲವತ್ತುಕೊಂಡರು.
ಹಲವು ವರ್ಷಗಳ ಹಿಂದೆ ಅಭಿವೃದ್ಧಿಗಾಗಿ ರಸ್ತೆ ಅಗೆಯಲಾಗಿತ್ತು. ಬಳಿಕ ಕಾಮಗಾರಿ ಆರಂಭವಾಗಲೇ ಇಲ್ಲ. ಈ ಬಗ್ಗೆ ಶಾಸಕ ಮುನಿರತ್ನ ಅವರ ಗಮನಕ್ಕೆ ತರಲಾಗಿತ್ತು. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಡಾ. ಸಿ.ಎನ್. ಮಂಜುನಾಥ್ ಪರವಾಗಿ ಪ್ರಚಾರಕ್ಕೆ ಬಂದವರ ಗಮನಕ್ಕೂ ತರಲಾಗಿತ್ತು. ಆದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಶಾರದಾ ಮತ್ತು ದಿವ್ಯಾ ಆಕ್ರೋಶವನ್ನು ವ್ಯಕ್ತಪಡಿಸಿದರು.
‘ಈ ಹಿಂದೆ ಈ ರಸ್ತೆಯ ಕಾಮಗಾರಿಯನ್ನು ಬಿಬಿಎಂಪಿ ಬೃಹತ್ ನೀರು ಕಾಲುವೆ ವಿಭಾಗದ ಎಂಜಿನಿಯರ್ ಆರಂಭಿಸಿ ಹಾಗೆಯೇ ನಿಲ್ಲಿಸಿದ್ದರು. ನಂತರ ಬಿಬಿಎಂಪಿ ಹಿರಿಯ ಅಧಿಕಾರಿಗಳು ಬೃಹತ್ ರಸ್ತೆ ಕಾಮಗಾರಿ ವಿಭಾಗಕ್ಕೆ ಹಸ್ತಾಂತರ ಮಾಡಿರುವುದರಿಂದ ಅನುದಾನಕ್ಕಾಗಿ ಮುಖ್ಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಅನುಮತಿ ದೊರೆತ ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು’ ಎಂದು ಬೃಹತ್ ರಸ್ತೆ ಕಾಮಗಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.