ADVERTISEMENT

ದರೋಡೆ: ಬಿಹಾರದ ಮೂವರ ಬಂಧನ– ಸದಾಶಿವನಗರ ಠಾಣೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 15:42 IST
Last Updated 16 ಜುಲೈ 2024, 15:42 IST
ಆರೋಪಿಗಳಿಂದ ವಶಪಡಿಸಿಕೊಂಡ ₹30 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ವೀಕ್ಷಿಸಿದರು. – ಪ್ರಜಾವಾಣಿ ಚಿತ್ರ.
ಆರೋಪಿಗಳಿಂದ ವಶಪಡಿಸಿಕೊಂಡ ₹30 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ವೀಕ್ಷಿಸಿದರು. – ಪ್ರಜಾವಾಣಿ ಚಿತ್ರ.   

ಬೆಂಗಳೂರು: ಟೀ ಎಸ್ಟೇಟ್‌ ಮಾಲೀಕರೊಬ್ಬರ ಫ್ಲ್ಯಾಟ್‌ನಲ್ಲಿ ಚಿನ್ನಾಭರಣ ದರೋಡೆ ಮಾಡಿದ್ದ ಬಿಹಾರದ ಮೂವರು ಆರೋಪಿಗಳನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.‌

ಬಿಹಾರದ ಅಮೀರ್ ಅಲಿಯಾಸ್ ಅಜಿತ್‍ ಮುಖ್ಯ(24), ರಾಜ್‌ ಮುಖ್ಯ (21) ಹಾಗೂ ಶರವಣ ಮುಖ್ಯ (25) ಬಂಧಿತ ಆರೋಪಿಗಳು.

‘ಆರೋಪಿಗಳಿಂದ ₹30 ಲಕ್ಷ ಮೌಲ್ಯದ 26 ಕೆ.ಜಿ ಬೆಳ್ಳಿ ಸಾಮಗ್ರಿ, 34 ಗ್ರಾಂ ಚಿನ್ನದ ಒಡವೆಗಳು, 5 ರೇಷ್ಮೆ ಸೀರೆಗಳು, 2 ಸ್ಮಾರ್ಟ್ ಫೋನ್‌ಗಳು, ಒಂದು ಕ್ಯಾಮೆರಾ, ವಿವಿಧ ಕಂಪನಿಯ 10 ವಾಚ್‍ಗಳು, 6 ಕೆ.ಜಿ ಕಂಚಿನ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

ಟೀ ಎಸ್ಟೇಟ್ ಮಾಲೀಕ ರಾಜೇಂದ್ರ ಅವರು ಸ್ಯಾಂಕಿ ರಸ್ತೆಯ ಸ್ಯಾಂಕಿ ಅಪಾರ್ಟ್‍ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ನೆಲೆಸಿದ್ದರು. ಆರೋಪಿಗಳು ಅವರ ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ರಾಜೇಂದ್ರ ಅವರು, ಅಡುಗೆ ಕೆಲಸಕ್ಕಾಗಿ ಅಜಿತ್‍ ಮುಖ್ಯ ಮತ್ತು ಮನೆಯ ಭದ್ರತೆಗಾಗಿ ರಾಜ್‌ ಮುಖ್ಯ ಎಂಬುವವರನ್ನು ನೇಮಕ ಮಾಡಿಕೊಂಡಿದ್ದರು. ಮಾಲೀಕರು ಜುಲೈ 7ರಂದು ಊಟಕ್ಕೆ ಹೊರಕ್ಕೆ ತೆರಳಿದ್ದರು. ಆಗ ಮನೆಯ ಕೀಯನ್ನು ರಾಜ್‌ ಮುಖ್ಯ ಅವರಿಗೆ ನೀಡಿದ್ದರು. ಮತ್ತಿಬ್ಬರು ಸ್ನೇಹಿತರನ್ನು ಕರೆಸಿಕೊಂಡಿದ್ದ ರಾಜ್‌ ಮುಖ್ಯ ಚಿನ್ನದ ಒಡವೆಗಳು, ಬೆಳ್ಳಿ ಸಾಮಗ್ರಿ, ದೇವರ ವಿಗ್ರಹಗಳು ಪೂಜೆ ಸಾಮಗ್ರಿಗಳು, ರೇಷ್ಮೆ ಸೀರೆಗಳನ್ನು ಕಳ್ಳತನ ಮಾಡಿ ಪರಾರಿ ಆಗಿದ್ದರು’ ಎಂದು ಪೊಲೀಸರು ಹೇಳಿದರು.

‘ಕಳ್ಳತನ ಮಾಡಿದ ಮೇಲೆ ಆರೋಪಿಗಳು ಬಿಹಾರಕ್ಕೆ ತೆರಳಿ ತಲೆಮರೆಸಿಕೊಂಡಿದ್ದರು. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಬಿಹಾರದಲ್ಲಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆ ತರಲಾಗಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.