ADVERTISEMENT

ಸಿಸಿಬಿ ಬಂಧನದಲ್ಲಿ ರೋರಿಚ್ ‘ಲಲನೆಯರು’!

ವೆಂಕಟಪ್ಪ ಕಲಾ ಗ್ಯಾಲರಿಯ ಕತ್ತಲೆ ಕೋಣೆಯಲ್ಲಿವೆ 241 ಕಲಾಕೃತಿಗಳು l ಚಿತ್ರಗಳು ಹಾಳಾಗುವ ಆತಂಕ

ವರುಣ ಹೆಗಡೆ
Published 22 ಸೆಪ್ಟೆಂಬರ್ 2019, 19:49 IST
Last Updated 22 ಸೆಪ್ಟೆಂಬರ್ 2019, 19:49 IST
ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ರೋರಿಚ್‌ ಅವರು ರಚಿಸಿದ ಕಲಾಕೃತಿಗಳಿರುವ ಕೊಠಡಿಗೆ ಬೀಗ ಹಾಕಿರುವುದು. (ಎಡಚಿತ್ರ) ಸ್ಟೆಟಾಸ್ಲೋವ್ ರೋರಿಚ್‌ ರಚಿಸಿದ ದೇವಿಕಾರಾಣಿ ಕಲಾಕೃತಿ
ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ರೋರಿಚ್‌ ಅವರು ರಚಿಸಿದ ಕಲಾಕೃತಿಗಳಿರುವ ಕೊಠಡಿಗೆ ಬೀಗ ಹಾಕಿರುವುದು. (ಎಡಚಿತ್ರ) ಸ್ಟೆಟಾಸ್ಲೋವ್ ರೋರಿಚ್‌ ರಚಿಸಿದ ದೇವಿಕಾರಾಣಿ ಕಲಾಕೃತಿ   

ಬೆಂಗಳೂರು: ರಷ್ಯಾದ ಖ್ಯಾತ ಕಲಾವಿದ ಸ್ಟೆಟಾಸ್ಲೋವಾ ರೋರಿಚ್‌ ಅವರ ಕುಂಚದಲ್ಲಿ ಮೂಡಿದ್ದ ಅಪರೂಪದ 241 ಕಲಾಕೃತಿಗಳು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಕಣ್ಗಾವಲಿನಲ್ಲಿ, ನಾಲ್ಕು ಗೋಡೆಗಳ ನಡುವೆ ಹೊಳಪು ಕಳೆದುಕೊಳ್ಳುತ್ತಿವೆ.

ರೋರಿಚ್‌ ಅವರುಕನಕಪುರ ರಸ್ತೆಯ ತಾತಗುಣಿ ಸಮೀಪ 468 ಎಕರೆ 33 ಗುಂಟೆ ವಿಸ್ತಾರದ ಎಸ್ಟೇಟ್‌ ಒಡೆತನ ಹೊಂದಿದ್ದರೂ ಅವರು ರಚಿಸಿದ ಕಲಾಕೃತಿಗಳನ್ನು ಸಂರಕ್ಷಿಸಿಡಲು ಜಾಗದ ಸಮಸ್ಯೆ ಎದುರಾಗಿದೆ. ತತ್ಪರಿ ಣಾಮ ವೆಂಕಟಪ್ಪ ಕಲಾ ಗ್ಯಾಲರಿಯ ಕೊಠಡಿಗಳಲ್ಲಿ ಕಲಾಕೃತಿಗಳನ್ನು ಇರಿಸಲಾಗಿದೆ. ಈ ಕೊಠಡಿಗಳಿಗೆ ಪ್ರವೇಶ ನಿರ್ಬಂಧಿಸಿದ್ದು, ಎರಡು ದಶಕಗಳಿಂದ ಬೀಗ ಹಾಕಿಡಲಾಗಿದೆ. ಇದರಿಂದಾಗಿ ರೋರಿಚ್‌ ಅವರ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶದಿಂದ ಕಲಾ ಪ್ರೇಮಿಗಳು ವಂಚಿತರಾಗಿದ್ದಾರೆ.

1993 ಜ.30ರಂದು ರೋರಿಚ್‌ ನಿಧನರಾದರು. ಅದಾಗಿ ಒಂದೇ ವರ್ಷದಲ್ಲಿ ಅವರ ಪತ್ನಿ ದೇವಿಕಾ ರಾಣಿ (1994 ಮಾ. 9) ಅವರೂ ಕೊನೆಯುಸಿರೆಳೆದರು. ಕಲಾವಿದ ದಂಪತಿಗೆ ಮಕ್ಕಳಿಲ್ಲದ ಕಾರಣ ಅಲ್ಲಿನ ಆಸ್ತಿಯ ಮೇಲೆ ಹಲವರ ಕಣ್ಣು ಬಿದ್ದಿತ್ತು. ₹50 ಲಕ್ಷ ಮೌಲ್ಯದ ಆಭರಣ, ವರ್ಣಚಿತ್ರ ಹಾಗೂ ಕಲಾಕೃತಿಗಳು ಕಳುವಾದವು. ಇದರಿಂದಾಗಿ ಎಸ್ಟೇಟ್ ಹಾಗೂ ಕಲಾ ಕೃತಿಗಳು ಸರ್ಕಾರದ ಸುಪರ್ದಿಯಲ್ಲಿವೆ.ಆಸ್ತಿ ಒಡೆತನದ ವ್ಯಾಜ್ಯ ಇತ್ಯರ್ಥವಾಗದ ಪರಿಣಾಮ ಕಲಾಕೃತಿಗಳಿಗೆ ವೆಂಕ ಟಪ್ಪ ಕಲಾ ಗ್ಯಾಲರಿಯಿಂದ ಈವರೆಗೂ ಮುಕ್ತಿ ಸಿಕ್ಕಿಲ್ಲ.

ಗ್ಯಾಲರಿಯಲ್ಲಿ ರೋರಿಚ್‌ ಅವರ ಕಲಾಕೃತಿಗಳ ಪ್ರದರ್ಶನಕ್ಕೆ ಸ್ಥಳದ ಸಮಸ್ಯೆ ಇರುವುದರಿಂದ ಎಸ್ಟೇಟ್‌ ಮಂಡಳಿ ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶನಕ್ಕೆ ಜಾಗ ನೀಡುವಂತೆ ಈ ಹಿಂದೆ ಮನವಿ ಮಾಡಿಕೊಂಡಿತ್ತು. ಆದರೆ, ಪರಿಷತ್ತು ಶಾಶ್ವತವಾಗಿ ಕಲಾಕೃತಿಗಳನ್ನು ನೀಡುವಂತೆ ಬೇಡಿಕೆ ಇಟ್ಟಿದ್ದರಿಂದ ಎಸ್ಟೇಟ್‌ ಮಂಡಳಿ ಹಿಂದೆ ಸರಿಯಿತು. ಎಸ್ಟೇಟ್‌ನಲ್ಲಿ ಸುರಕ್ಷತೆ ಇಲ್ಲದ ಪರಿಣಾಮ ಕಲಾಕೃತಿಗಳ ಸ್ಥಳಾಂತರದ ಪ್ರಸ್ತಾವ ನನೆಗುದಿಗೆ ಬಿತ್ತು.

‘ಗಾಳಿ–ಬೆಳಕು ಇಲ್ಲದ ಕೊಠಡಿಯಲ್ಲಿ ಸಂಗ್ರಹಿಸಿಡುವುದರಿಂದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಲಾ ಕೃತಿಗಳಿಗೆ ದೂಳು, ಹಿಡಿಯಲಿದೆ. ಅವುಗಳಲ್ಲಿಶಿಲೀಂಧ್ರ ಬೆಳೆಯುವ ಅಪಾಯವಿದೆ. ಹಾಗಾಗಿ, ಎಸ್ಟೇಟ್‌ನಲ್ಲಿಯೇ ರೋರಿಚ್‌ ಹೆಸರಿನಲ್ಲಿ ಕಲಾಕೇಂದ್ರ ನಿರ್ಮಿಸಿ, ಕಲಾಕೃತಿ ಪ್ರ‌ದರ್ಶನಕ್ಕೆ ವ್ಯವಸ್ಥೆ ಮಾಡಬೇಕು’ ಎನ್ನುವುದು ಕಲಾವಿದರ ಆಗ್ರಹವಾಗಿದೆ.

ಪರಿಷತ್ತಿನಲ್ಲಿ ರೋರಿಚ್‌ ಕಲಾಕೃತಿ: ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲೂ ರೋರಿಚ್ ಅವರ ಕಲಾಕೃತಿಗಳನ್ನು ಕಾಣಬಹುದು. ಸ್ಟೆಟಾಸ್ಲೋವಾ ರೋರಿಚ್‌ ಹಾಗೂ ಅವರ ತಂದೆ ನಿಕೋಲಸ್‌ ರೋರಿಚ್‌ ರಚಿಸಿದ 124 ಕಲಾಕೃತಿಗಳನ್ನು ಎರಡು ಗ್ಯಾಲರಿಗಳಲ್ಲಿ ಪ್ರದರ್ಶನಕ್ಕಿಡಲಾಗಿದೆ.

‘ಸ್ಟೆಟಾಸ್ಲೋವಾ ರೋರಿಚ್‌ ಅವರ ತಂದೆ ನಿಕೋಲಸ್ ರೋರಿಚ್‌ ಅವ‌ರು ಹಿಮಾಲಯದ ಬಗ್ಗೆ ಅಧ್ಯಯನ ನಡೆಸಿ ದ್ದರು. ಅವರು ರಚಿಸಿದ ಬಹುತೇಕ ಕಲಾಕೃತಿಗಳಲ್ಲಿ ಹಿಮಾಲಯ ಹಾಗೂ ಸುತ್ತಮುತ್ತಲಿನ ಪರಿಸರದ ಚಿತ್ರಣವಿದೆ. ತಂದೆಯಂತೆಯೇ ಸ್ಟೆಟಾಸ್ಲೋವಾ ರೋರಿಚ್‌ ಅವರ ಕಲಾಕೃತಿಗಳೂ ನೈಸರ್ಗಿಕ ಸೌಂದರ್ಯವನ್ನು ಅನಾವರಣ ಮಾಡುತ್ತವೆ. ಸ್ಟೆಟಾಸ್ಲೋವಾ ರೋರಿಚ್‌ ಅವರು 1990ರ ಅವಧಿಯಲ್ಲಿ ಕೆಲ ಕಲಾಕೃತಿಗಳನ್ನು ಪರಿಷತ್ತಿಗೆ ದಾನವಾಗಿ ನೀಡಿದ್ದರು’ ಎಂದು ಕಲಾವಿದ
ಪ್ರೊ. ಕೆ.ಎಸ್‌. ಅಪ್ಪಾಜಯ್ಯ ತಿಳಿಸಿದರು.

ದೇವಿಕಾ ರಾಣಿಕಲಾಕೃತಿ

‘ರೋರಿಚ್ ಅವರು ಸ್ವತಃ ಬಣ್ಣಗಳನ್ನು ತಯಾರಿಸಿಕೊಳ್ಳುತ್ತಿದ್ದರು. ನಾವು ವಿದ್ಯಾರ್ಥಿಗಳಾಗಿದ್ದಾಗ ಅವರ ಕಲಾ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದೆವು. ಅವರು ನೆಲೆಸಿದ್ದ ಎಸ್ಟೇಟ್‌ ಅನ್ನು ಕಲಾ ಸ್ಟುಡಿಯೊ ಮಾಡಬೇಕು. ಇದರಿಂದ ರಾಜ್ಯದ ಹಾಗೂ ರಾಷ್ಟ್ರದ ಕಲಾವಿದರಿಗೆ ಉತ್ತಮ ಪ್ರಯೋಜನವಾಗಲಿದೆ. ಜತೆಗೆ ರೋರಿಚ್‌ ಅವರಿಗೂ ಗೌರವ ಸಲ್ಲಿಸಿದಂತಾಗುತ್ತದೆ’ ಎಂದು ಹೇಳಿದರು.

‘ರೋರಿಚ್ ಕಲಾ ಕೇಂದ್ರ ನಿರ್ಮಿಸಲಿ’

‘ರಾಜ್ಯದಲ್ಲಿ ಕಲಾವಿದರಿಗೆ ಸೂಕ್ತ ಕಲಾ ಗ್ಯಾಲರಿಯಿಲ್ಲ. ಎಸ್ಟೇಟ್‌ನಲ್ಲಿ ರೋರಿಚ್‌ ಕಲಾ ಕೇಂದ್ರ ನಿರ್ಮಿಸಿ, ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿರುವ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಬೇಕು. ಈ ವಿಚಾರವಾಗಿ ಸರ್ಕಾರ ಕಲಾವಿದರನ್ನೊಳಗೊಂಡ ಸಮಿತಿ ರಚಿಸಿ, ಚರ್ಚಿಸಬೇಕು’ ಎಂದು ಹಿರಿಯ ಕಲಾವಿದ ಎಂ.ಎಸ್. ಮೂರ್ತಿ ಆಗ್ರಹಿಸಿದರು.

‘ಎಸ್ಟೇಟ್‌ನಲ್ಲಿ ಬಯಲು ರಂಗಮಂದಿರ ನಿರ್ಮಿಸುವ ಅವಕಾಶ ಸಹ ಇದೆ. ರಾಜ್ಯದ ಕಲಾವಿದರು ಹಾಗೂ ರಾಷ್ಟ್ರದ ಕಲಾವಿದರಿಗೆ ಪ್ರತ್ಯೇಕ ಗ್ಯಾಲರಿ ನಿರ್ಮಿಸಬೇಕು. ಆಗ ಚಿತ್ರ ಸಂತೆಯಂತಹ ಕಾರ್ಯಕ್ರಮಗಳನ್ನೂ ನಡೆಸಲು ಸಹಾಯಕವಾಗಲಿದೆ. ಸರ್ಕಾರ ಈ ವಿಚಾರವಾಗಿ ಕೂಡಲೇ ಸಭೆ ಕರೆಯಬೇಕು’ ಎಂದು ಒತ್ತಾಯಿಸಿದರು.

‘ಕಲಾ ಚಟುವಟಿಕೆಗೆ ಬಳಸಬೇಕು’

‘ಸದ್ಯ ನಗರದಲ್ಲಿ ಕಲಾಕೃತಿಗಳ ಪ್ರದರ್ಶನಕ್ಕೆ ಸೂಕ್ತ ಸರ್ಕಾರಿ ಗ್ಯಾಲರಿಗಳಿಲ್ಲ. ಇಂತಹ ಸಂದರ್ಭದಲ್ಲಿಎಸ್ಟೇಟ್‌ ಜಾಗವನ್ನು ಚಿತ್ರನಗರಿಯನ್ನಾಗಿಸುವ ಸರ್ಕಾರದ ನಡೆ ಖಂಡನೀಯ. ಚಲನಚಿತ್ರ ಸ್ಟುಡಿಯೋವನ್ನು ಬೇರೆಡೆಗೆ ನಿರ್ಮಿಸಲಿ. ಕಲಾವಿದರ ಜಾಗವನ್ನು ಕಸಿದುಕೊಳ್ಳಬಾರದು’ ಎಂದು ಕಲಾ ವಿಮರ್ಶಕಚಿ.ಸು. ಕೃಷ್ಣ ಶೆಟ್ಟಿ ಒತ್ತಾಯಿಸಿದರು.

‘ಸರ್ಕಾರಿ ಕಲಾ ಗ್ಯಾಲರಿಯ ಸಮಸ್ಯೆಯಿಂದ ಕಲಾವಿದರಿಗೆ ಸೂಕ್ತ ವೇದಿಕೆ ಇಲ್ಲದಂತಾಗಿದೆ. ರೋರಿಚ್ ಅವರ ಹೆಸರಿನಲ್ಲಿಯೇ ಕೇಂದ್ರ ನಿರ್ಮಿಸಿ, ಅವರು ರಚಿಸಿದ ಕಲಾಕೃತಿಗಳ ಪ್ರದರ್ಶನಕ್ಕೆ ಸರ್ಕಾರ ಆದ್ಯತೆ ನೀಡಬೇಕು. ರೋರಿಚ್‌ ಅವರ ಹೆಸರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಗ್ಯಾಲರಿ ನಿರ್ಮಿಸುವುದಾದರೆ ರಷ್ಯಾ ಕೂಡ ಅಗತ್ಯ ಸಹಕಾರ ನೀಡುತ್ತೆ’ ಎಂದರು.

ಇನ್ನಷ್ಟು ಓದು:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.