ಬೆಂಗಳೂರು: ಪ್ಲಾಸ್ಟಿಕ್ ತ್ಯಾಜ್ಯದಿಂದ ಬೋರ್ಡ್ ತಯಾರಿಸಿ, ಅವುಗಳಿಂದ ಟೇಬಲ್, ಬೆಂಚ್‌ಗಳನ್ನು ತಯಾರಿಸಲಾಗುತ್ತಿದೆ. ಮೆಂಡೆಲೀಜ್ ಇಂಟರ್‌ನ್ಯಾಷನಲ್‌ನ ‘ಡಬ್ಲ್ಯುಒಡಬ್ಲ್ಯು (ವೇಸ್ಟ್ ಔಟ್ ಆಫ್ ವೇಸ್ಟ್) ಬೋರ್ಡ್’ಗಳು ಪರಿಸರದ ಮೇಲಿನ ಹಾನಿಯನ್ನು ಕಡಿತಮಾಡುತ್ತಿವೆ.
‘ಬಹು–ಪದರಗಳ ‘ಡಬ್ಲ್ಯುಒಡಬ್ಲ್ಯು ಬೋರ್ಡ್’ಗಳು ಸಾಂಪ್ರದಾಯಿಕ ಪ್ಲೇವುಡ್‌ಗೆ ಪರ್ಯಾಯವಾಗಿದ್ದು, ಸುಸ್ಥಿರ ಮತ್ತು ದೀರ್ಘ ಬಾಳಿಕೆ ಬರಲಿವೆ. ಹಸಿರು ದಳ ಮತ್ತು ಟ್ರಾಶ್‌ಕಾನ್ ಸಹಯೋಗ ಹಾಗೂ ಪರಿಣತಿಯೊಂದಿಗೆ ಇವುಗಳನ್ನು ತಯಾರಿಸಲಾಗುತ್ತಿದೆ. ಶಾಲೆಗಳಲ್ಲಿ ಅಳವಡಿಸಲಾಗುತ್ತಿದೆ’ ಎಂದು ಮೆಂಡಲೀಜ್ ಇಂಟರ್‌ನ್ಯಾಷನಲ್‌ನ ಭಾರತದ ಹಿರಿಯ ನಿರ್ದೇಶಕ ಒಫಿರಾ ಭಾಟಿಯಾ ಹೇಳಿದರು.
‘ಮೆಂಡಲೀಜ್ ವತಿಯಿಂದ ಈಗಾಗಲೇ 600 ಎಂಎಲ್‌ಟಿ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೋರ್ಡ್‌ಗಳಾಗಿ ಪರಿವರ್ತಿಸಲಾಗಿದೆ. ಸಿದ್ಧಾರ್ಥನಗರ, ಎಂ.ಎಸ್. ಪಾಳ್ಯದ ಸರ್ಕಾರಿ ಶಾಲೆ, ಆರ್.ಕೆ. ಸ್ಕೂಲ್, ಜೊಲಿ ಮೊಹಲ್ಲಾ ಮತ್ತು ಸಾರಕ್ಕಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಟೇಬಲ್, ಕುರ್ಚಿಗಳನ್ನು ‘ಡಬ್ಲ್ಯುಒಡಬ್ಲ್ಯು ಬೋರ್ಡ್’ಗಳಲ್ಲಿ ತಯಾರಿಸಿ ನೀಡಲಾಗಿದೆ. ಸ್ವಚ್ಛ ಕಲಿಕಾ ಕೇಂದ್ರದಲ್ಲಿ ಇದೇ ಬೋರ್ಡ್‌ಗಳಿಂದ ಚಾವಣಿಯನ್ನೂ ನಿರ್ಮಿಸಲಾಗಿದೆ. ಆಡುಗೋಡಿಯಲ್ಲಿರುವ ನಗರ ಮೀಸಲು ಶಸ್ತ್ರಾಸ್ತ್ರ ಕೇಂದ್ರದ ಆವರಣದಲ್ಲಿ ಕಾರ್ಮಿಕರಿಗೆ ಕೊಠಡಿಯನ್ನೂ ನಿರ್ಮಿಸಿಕೊಡಲಾಗಿದೆ’ ಎಂದರು.
‘ಡಬ್ಲ್ಯುಒಡಬ್ಲ್ಯು ಬೋರ್ಡ್’ಗಳ ಮೂಲಕ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಪರಿವರ್ತಿಸಿ, ಸುಸ್ಥಿರ ಅಭಿವೃದ್ಧಿಯ ಸವಾಲುಗಳನ್ನು ನಿರ್ವಹಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.