ಬೆಂಗಳೂರು: ‘ಜ್ಞಾನವಿದ್ದಲ್ಲಿ ಸಂಪತ್ತು ನೆಲೆಸಿರುತ್ತದೆ. ಜ್ಞಾನ ಯಜ್ಞದಲ್ಲಿ ಶಿಕ್ಷಕರು ವಿದ್ಯೆಯನ್ನು ದಾನ ಮಾಡುತ್ತಾರೆ’ ಎಂದು ಶಿಕ್ಷಣ ತಜ್ಞ ಗುರುರಾಜ ಕರಜಗಿ ತಿಳಿಸಿದರು.
‘ಪ್ರಜಾವಾಣಿ’, ರೋಟರಿ ಬೆಂಗಳೂರು ಜಂಕ್ಷನ್, ರೋಟರಿ ಬೆಂಗಳೂರು ಹಲಸೂರು, ರೋಟರಿ ಬೆಂಗಳೂರು ಬಸವನಗುಡಿ ಪ್ರಾಯೋಜಕತ್ವದಲ್ಲಿ ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 3190 ಭಾನುವಾರ ಆನ್‌ಲೈನ್ ಮೂಲಕ ಆಯೋಜಿಸಿದ್ದ ‘ಗುರುದಕ್ಷಿಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜ್ಞಾನವನ್ನು ಉಚಿತವಾಗಿ ಪಸರಿಸುವ ಏಕೈಕ ಕ್ಷೇತ್ರ ಶಿಕ್ಷಣ. ಕೋವಿಡ್ ಕಾಲಘಟ್ಟದಲ್ಲಿ ಶಿಕ್ಷಕರು ಅನೇಕ ಸವಾಲುಗಳನ್ನು ಎದುರಿಸಿದರು. ಭೌತಿಕ ತರಗತಿಗಳಿಗೆ ಅವಕಾಶವಿಲ್ಲವೆಂದು ಸುಮ್ಮನಾಗಲಿಲ್ಲ. ಹೋದ ವರ್ಷದ ಏಪ್ರಿಲ್‌ನಿಂದ ಆನ್‌ಲೈನ್ ತರಗತಿಗಳನ್ನು ಹಮ್ಮಿಕೊಂಡು ಮಕ್ಕಳು ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿದರು. ಇಂತಹ ಶಿಕ್ಷಕರನ್ನು ಗುರುತಿಸಿ ಗೌರವಿಸುತ್ತಿರುವ ರೋಟರಿ ಸಂಸ್ಥೆಯ ಕಾರ್ಯ ಮೆಚ್ಚುವಂತಹದ್ದು’ ಎಂದರು.
ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 3190 ಜಿಲ್ಲಾ ಗವರ್ನರ್ ಬಿ.ಎಲ್.ನಾಗೇಂದ್ರ ಪ್ರಸಾದ್ ‘ಇಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಆಯೋಜಿಸಬೇಕು. ರಾಜ್ಯದಲ್ಲಿ ಐದು ರೋಟರಿ ಡಿಸ್ಟ್ರಿಕ್ಟ್ ಇವೆ. ಎಲ್ಲಾ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕು. ತೆರೆಮರೆಯಲ್ಲಿರುವ ಶಿಕ್ಷಕರನ್ನು ಗುರುತಿಸಿ ಗೌರವಿಸಿರುವುದು ಖುಷಿಯ ವಿಚಾರ. ಆ ಕೆಲಸ ನಮ್ಮಿಂದ ಆಗಿದೆ. ಈ ಕಾರ್ಯಕ್ಕೆ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಕೂಡ ಕೈಜೋಡಿಸಿವೆ. ಈ ಪತ್ರಿಕೆಗಳು ಅಗತ್ಯ ಸಲಹೆ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿವೆ’ ಎಂದು ತಿಳಿಸಿದರು.
‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಇದ್ದರು.
ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದವರು: ಗುರುರಾಜ ಕರಜಗಿ, ಅಶೋಕ್ ಕಾಮತ್, ಮಾಯಾ ಮೆನನ್ (ಮೂವರೂ ಶಿಕ್ಷಣ), ಜಿ.ಕೆ.ವಿಶ್ವನಾಥ್ (ಕ್ರೀಡಾ ಅಕಾಡೆಮಿ), ಜೋತ್ಸ್ನಾ ಬಾಪಟ್ (ಡೀನ್, ಐಐಐಟಿ ಬೆಂಗಳೂರು).
ಪ್ರಶಸ್ತಿ ಪುರಸ್ಕೃತರ ವಿವರ
ಹೆಸರು;ವಿಭಾಗ;ಶಾಲೆ/ಸಂಸ್ಥೆ
ಅನುರಾಧ ಸಾಯಿನಾಥನ್;ಪೂರ್ವ ಪ್ರಾಥಮಿಕ ಶಾಲೆ;ಹಾರ್ವೆಸ್ಟ್ ಇಂಟರ್‌ನ್ಯಾಷನಲ್ ಸ್ಕೂಲ್, ಬೆಂಗಳೂರು.
ರೆಂಜಿಮಾ ಮನೋಜ್;ಪ್ರಾಥಮಿಕ ಶಾಲೆ;ಡೀನ್ಸ್ ಅಕಾಡೆಮಿ, ವೈಟ್‌ಫೀಲ್ಡ್
ಬಿ.ಜಿ.ರಾಮಚಂದ್ರ ಭಟ್;ಪ್ರೌಢಶಾಲೆ;ಸರ್ಕಾರಿ ಪ್ರೌಢಶಾಲೆ, ಬ್ಯಾಟರಾಯನಪುರ
ಗೀತಾ ಸಿಂಧೆ ಬೆಣಗಿ;ಕಾಲೇಜು;ಬಿಇಎಲ್ ಪದವಿಪೂರ್ವ ಕಾಲೇಜು, ಬೆಂಗಳೂರು
ಜಯಶ್ರೀ ರವಿ;ಕಲೆ ಮತ್ತು ಸಂಗೀತ;ಲಯಾಭಿನಯ ಸಾಂಸ್ಕೃತಿಕ ಪ್ರತಿಷ್ಠಾನ
ಎಚ್.ರುದ್ರೇಶ್;ಕ್ರೀಡೆ;ಶ್ರೀ ಜಯಭಾರತಿ ಕೋ–ಆಪರೇಟಿವ್ ಪ್ರೌಢಶಾಲೆ, ಅತ್ತಿಬೆಲೆ.
ರಾಧಾಕೃಷ್ಣ ಉರಾಳ;ಸಾಂಪ್ರದಾಯಿಕ ಜ್ಞಾನ ಶಿಕ್ಷಣ;ಕಲಾ ಕದಂಬ ಆರ್ಟ್ ಸೆಂಟರ್
ಸೈಯದ್ ಮನ್ಸೂರ್;ವಿಶೇಷ ಮಕ್ಕಳ ಶಿಕ್ಷಣ;ಮಿತ್ರ ಜ್ಯೋತಿ ಸ್ವಯಂ ಸೇವಾ ಸಂಘ
ಕೋಟ್..
ಈ ಪ್ರಶಸ್ತಿ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನಷ್ಟು ಉತ್ತಮ ಕೆಲಸ ಮಾಡಲು ಪ್ರೇರಣೆಯಾಗಿದೆ. ಜೊತೆಗೆ ಸಂತಸವೂ ನೀಡಿದೆ.
ರಾಮಚಂದ್ರ ಭಟ್, ಪ್ರಶಸ್ತಿ ಪುರಸ್ಕೃತರು
ಸಾಮಾಜಿಕ ಹೊಣೆಗಾರಿಕೆಯನ್ನು ಮಕ್ಕಳಿಗೆ ಹೇಳಿಕೊಟ್ಟರೆ ಅವರು ಅಡ್ಡದಾರಿ ಹಿಡಿಯುವುದಿಲ್ಲ. ಆ ಕೆಲಸವನ್ನು ನಾವೆಲ್ಲ ಮಾಡಬೇಕು.
ಗೀತಾ ಸಿಂಧೆ, ಪ್ರಶಸ್ತಿ ಪುರಸ್ಕೃತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.