ಬೆಂಗಳೂರು: 'ಮದರ್ ಥೆರೆಸಾ ಅವರು ತಮ್ಮ ಜೀವನವನ್ನೇ ಸೇವೆಗಾಗಿ ಮುಡಿಪಾಗಿಟ್ಟರು. ಕರುಣೆಗೆ ಮತ್ತೊಂದು ಹೆಸರೇ ಮದರ್ ಥೆರೆಸಾ' ಎಂದು ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್‍ನ 317-ಎಫ್ ಜಿಲ್ಲಾ ಗವರ್ನರ್ ದೀಪಕ್ ಸುಮನ್ ತಿಳಿಸಿದರು.
ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ 317 ಎಫ್ ಜಿಲ್ಲೆಯ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮದರ್ ಥೆರೆಸಾ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಸೇವೆಯನ್ನು ಥೆರೆಸಾ ಅವರು ಅಂದು ಸಣ್ಣ ಬೀಜವಾಗಿ ಬಿತ್ತಿದರು. ಇಂದು ಅವರನ್ನು ಅನುಸರಿಸುತ್ತಿರುವ ಸಹಸ್ರಾರು ಮಂದಿಯಿಂದ ಸೇವೆ ಹೆಮ್ಮರವಾಗಿ ಬೆಳೆದಿದೆ. ಸಮಾಜದ ಒಳಿತಿಗಾಗಿ ಅವರ ಸೇವೆ ಶ್ಲಾಘನೀಯ. ಮಕ್ಕಳು, ಬಡವರು, ಕುಷ್ಠ ರೋಗಿಗಳ ಆರೈಕೆಯನ್ನೇ ತಮ್ಮ ಆದ್ಯತೆಯನ್ನಾಗಿ ಮಾಡಿಕೊಂಡವರು. ಅವರ ಹಾದಿಯಲ್ಲಿ ಸೇವಾ ಕಾರ್ಯಗಳನ್ನು ನಾವೆಲ್ಲಾ ಮುಂದುವರಿಸಬೇಕು' ಎಂದರು.
'ಸಂಸ್ಥೆಯ ವತಿಯಿಂದ ವೃದ್ಧಾಶ್ರಮ, ಕುಷ್ಠರೋಗಿಗಳು, ಅನಾಥಾಶ್ರಮಗಳಿಗೆ ದಿನಸಿ, ಬೆಡ್‍ಶೀಟ್, ವೈಯಕ್ತಿಕ ಬಳಕೆ ವಸ್ತುಗಳು ಸೇರಿ ₹5 ಲಕ್ಷ ಮೌಲ್ಯದ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಕೊರೊನಾ ಕಾರಣಕ್ಕೆ ಸಂಸ್ಥೆಯ 50 ಕ್ಲಬ್‍ಗಳಿಂದ ಕಡಿಮೆ ಸಂಖ್ಯೆಯಲ್ಲಿ ಪದಾಧಿಕಾರಿಗಳು ಭಾಗವಹಿಸಿದ್ದಾರೆ' ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.