ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಕಚೇರಿಯ ಪ್ರವೇಶದ್ವಾರದಲ್ಲಿ ಬುದ್ಧನ ಪ್ರತಿಮೆಯನ್ನು ಸೋಮವಾರ ಪ್ರತಿಷ್ಠಾಪಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ದ್ವಾರದಲ್ಲಿ ಈ ಮೊದಲು ಸರಸ್ವತಿಯ ಪ್ರತಿಮೆ ಇತ್ತು. ಆ ಪ್ರತಿಮೆಯು ಸ್ವಲ್ಪ ಭಗ್ನಗೊಂಡಿತ್ತು. ಅದರ ಜಾಗದಲ್ಲಿ ಸರಸ್ವತಿಯ ಹೊಸ ಪ್ರತಿಮೆ ಪ್ರತಿಷ್ಠಾಪಿಸಲು ಹಳೆಯದನ್ನು ಕೆಲವು ದಿನಗಳ ಹಿಂದೆ ತೆಗೆಯಲಾಗಿತ್ತು. ವಿಶ್ವವಿದ್ಯಾಲಯದ ಕೆಲವು ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಮೆರವಣಿಗೆ ಮೂಲಕ ಬುದ್ಧನ ಪ್ರತಿಮೆಯನ್ನು ತಂದು ಅದೇ ಜಾಗದಲ್ಲಿ ಪ್ರತಿಷ್ಠಾಪನೆ ಮಾಡಿದರು. ಇದರಿಂದ ಅಸಮಾಧಾನಗೊಂಡ ಕೆಲವು ವಿದ್ಯಾರ್ಥಿಗಳು ಬುದ್ಧನ ಪ್ರತಿಮೆಯನ್ನು ತೆರವುಗೊಳಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
‘ಪ್ರವೇಶ ದ್ವಾರದ ಬಳಿ 1973ರಿಂದಲೇ ಸರಸ್ವತಿ ಪ್ರತಿಮೆ ಇದೆ. ಆಗ ಕುಲಪತಿಯಾಗಿದ್ದ ಎಚ್.ನರಸಿಂಹಯ್ಯ ಅವರೇ ಅದನ್ನು ಪ್ರತಿಷ್ಠಾಪಿಸಿದ್ದರು. ಹೊಸ ಪ್ರತಿಮೆ ಸ್ಥಾಪಿಸಲೆಂದು ಹಳೆಯದನ್ನು ಕೆಲವು ದಿನಗಳ ಹಿಂದೆ ತೆಗೆಯಲಾಗಿತ್ತು. ಹೊಸ ಮೂರ್ತಿ ₹ 2.50 ಲಕ್ಷ ವೆಚ್ಚದಲ್ಲಿ ಸಿದ್ಧಗೊಂಡಿದೆ. ಅದನ್ನು ತಂದು ಕುಲಪತಿಯ ಕಚೇರಿಯಲ್ಲಿ ಇಡಲಾಗಿದೆ. ಈ ಮಧ್ಯೆ ಬುದ್ಧನ ಪ್ರತಿಮೆ ತಂದು ಕೂರಿಸಿದ್ದು ಸರಿಯಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.
‘ಬುದ್ಧನ ಪ್ರತಿಮೆಯನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ, ಸರಸ್ವತಿಯ ಪ್ರತಿಮೆ ಇದ್ದ ಜಾಗದಲ್ಲೆ ತಂದು ಕೂರಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.
ಕುಲಪತಿಯ ಕಚೇರಿವರೆಗೂ ಸಾಗಿದ ಪ್ರತಿಭಟನಾಕಾರರು, ‘ಪ್ರತಿಮೆ ವಿವಾದ ವಿದ್ಯಾರ್ಥಿಗಳ ಗುಂಪುಗಾರಿಕೆಗೆ ಕಾರಣವಾಗಲಿದೆ. ಇದಕ್ಕೆ ಅವಕಾಶ ಕಲ್ಪಿಸಬಾರದು. ಬುದ್ಧನ ಪ್ರತಿಮೆಯನ್ನು ತಕ್ಷಣ ತೆರವು ಮಾಡಬೇಕು’ ಎಂದು ಒತ್ತಾಯಿಸಿದರು. ಅಲ್ಲಿಂದ ಮರಳಿ ಬುದ್ಧನ ಪ್ರತಿಮೆಯ ಎದುರು ಮೌನ ಧರಣಿ ನಡೆಸಿದರು. ಅಷ್ಟರಲ್ಲಿ ಬುದ್ಧನ ಪ್ರತಿಮೆ ಸ್ಥಾಪಿಸಿದ ವಿದ್ಯಾರ್ಥಿಗಳು ಹಾಗೂ ವಿ.ವಿ.ಯ ಸಿಬ್ಬಂದಿಯೂ ಅಲ್ಲಿಗೆ ಬಂದರು. ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಈ ವಿವಾದವನ್ನು ಬಗೆಹರಿಸುವ ಕುರಿತು ಸಮಾಲೋಚನೆ ನಡೆಸಲು ಕುಲಪತಿ ಕೆ.ಆರ್.ವೇಣುಗೋಪಾಲ್ ಅವರು ಸಿಂಡಿಕೇಟ್ ಸದಸ್ಯರ ತುರ್ತು ಸಭೆ ಕರೆದರು. ತಡೆರಾತ್ರಿವರೆಗೆ ಸಭೆ ನಡೆದರೂ ವಿವಾದ ಇತ್ಯರ್ಥವಾಗಿರಲಿಲ್ಲ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕುಲಪತಿ, ‘ಬುದ್ಧನ ಪ್ರತಿಮೆ ಸ್ಥಾಪಿಸಲು ಅನುಮತಿ ನೀಡಿರಲಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.