ಬೆಂಗಳೂರು: ಗಡಿಪಾರು ಆದೇಶವಿದ್ದರೂ ನಗರದಲ್ಲಿ ಅಕ್ರಮವಾಗಿ ವಾಸವಿದ್ದ ಆರೋಪದಡಿ ರೌಡಿ ಸಯ್ಯದ್ ನಾಸೀರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘12 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಸೀರ್, ಶಿವಾಜಿನಗರ ಠಾಣೆಯ ರೌಡಿ ಪಟ್ಟಿಯಲ್ಲಿದ್ದಾನೆ. ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಈತನನ್ನು ಇದೇ ಏಪ್ರಿಲ್ 26ರಿಂದ ಒಂದು ವರ್ಷದವರೆಗೆ ನಗರದಿಂದ ಗಡಿಪಾರು ಮಾಡಲಾಗಿತ್ತು’ ಎಂದು ಸಿಸಿಬಿ ಪೊಲೀಸರು ಹೇಳಿದರು.
‘ಗಡಿಪಾರು ಆದೇಶವಿದ್ದರೂ ನಾಸೀರ್ ನಗರ ಬಿಟ್ಟು ಹೋಗಿರಲಿಲ್ಲ. ಶಿವಾಜಿನಗರದಲ್ಲಿ ಅಕ್ರಮವಾಗಿ ವಾಸವಿದ್ದ. ಈ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಈತನನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.
‘ಶಿವಾಜಿನಗರ, ಭಾರತಿನಗರ, ಅಶೋಕನಗರ, ಕಮರ್ಷಿಯಲ್ ಸ್ಟ್ರೀಟ್ ಮತ್ತು ಪುಲಕೇಶಿನಗರ ಠಾಣೆಯಲ್ಲಿ ನಾಸೀರ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.