ADVERTISEMENT

ಕೊಲೆ, ಸುಲಿಗೆ: ರೌಡಿ ಚಿಕ್ಕ ಚೇತು ಬಂಧನ

ಬಾಗಲಕುಂಟೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 13:39 IST
Last Updated 20 ಜುಲೈ 2022, 13:39 IST
ರೌಡಿ ಚಿಕ್ಕ ಚೇತು
ರೌಡಿ ಚಿಕ್ಕ ಚೇತು   

ಬೆಂಗಳೂರು: ರಾಜಧಾನಿಯ ಎಂಟು ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ರೌಡಿ ಚಟುವಟಿಕೆಯಲ್ಲಿ ನಿರತನಾಗಿದ್ದ ನಾಗರಬಾವಿಯ ಐಟಿಐ ಬಡಾವಣೆಯ ದೀಪಾ ಕಾಂಪ್ಲೆಕ್ಸ್‌ನ ನಿವಾಸಿ, ರೌಡಿ ಚಿಕ್ಕ ಚೇತು ಅಲಿಯಾಸ್‌ ಚೇತನ್‌ಕುಮಾರ್‌ನನ್ನು(28) ಬಾಗಲಕುಂಟೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಈತನ ವಿರುದ್ಧ ಕೊಲೆ, ಸುಲಿಗೆ, ಡಕಾಯಿತಿ, ದರೋಡೆ, ಸಂಚು, ಕೊಲೆ ಪ್ರಯತ್ನ, ಜೀವ ಬೆದರಿಕೆ, ಹಲ್ಲೆ ಪ್ರಕರಣಗಳು ದಾಖಲಾಗಿದ್ದವು.

‘ಶ್ರೀರಾಮಪುರ, ಮಾಗಡಿ, ಪೀಣ್ಯ, ವಿಜಯನಗರ, ಚಂದ್ರಾ ಲೇಔಟ್‌, ಅನ್ನಪೂರ್ಣೇಶ್ವರಿ ನಗರ, ಮಾದನಾಯಕನಹಳ್ಳಿ, ಬಾಗಲಕುಂಟೆ, ಸೋಲದೇವನಹಳ್ಳಿ ಜನರು ಹಾಗೂ ವ್ಯಾಪಾರಸ್ಥರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

‘2012ರಿಂದ 2022ರ ಹತ್ತು ವರ್ಷಗಳ ಅವಧಿಯಲ್ಲಿ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಒಟ್ಟು 10 ಪ್ರಕರಣಗಳು ದಾಖಲಾಗಿದ್ದವು. ಕಳೆದ ವರ್ಷ ಸೋಲದೇವನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ. ಜಾಮೀನನ ಮೇಲೆ ಬಿಡುಗಡೆಯಾಗಿ, ಮತ್ತೆ ಅಪರಾಧ ಕೃತ್ಯದಲ್ಲಿ ತೊಡಗಿದ್ದ. ಜಾಮೀನು ಷರತ್ತು ಉಲ್ಲಂಘಿಸಿದ್ದ. ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೂ ಗೈರಾಗಿ ತಲೆಮರೆಸಿಕೊಳ್ಳುತ್ತಿದ್ದ. ಸಾರ್ವಜನಿಕರಲ್ಲಿ ಭಯ ಉಂಟು ಮಾಡುತ್ತಿದ್ದ ಈತನನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ವಿನಾಯಕ್‌ ಪಾಟೀಲ್‌ ತಿಳಿಸಿದ್ಧಾರೆ.

ಆರೋ‍ಪಿ ರೌಡಿಯನ್ನು ಒಂದು ವರ್ಷ ಬಂಧನದಲ್ಲಿ ಇರಿಸಲು ಸರ್ಕಾರವು ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.