ADVERTISEMENT

ಬೆಂಗಳೂರು: 290 ರೌಡಿ ಮನೆಗಳ ಮೇಲೆ ಪೊಲೀಸರ ದಾಳಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 15:48 IST
Last Updated 27 ಮಾರ್ಚ್ 2024, 15:48 IST
ರೌಡಿ ಮನೆಯಲ್ಲಿ ಪೊಲೀಸರು ಮಂಗಳವಾರ ತಡರಾತ್ರಿ ಮಾಹಿತಿ ಪಡೆದುಕೊಂಡರು
ರೌಡಿ ಮನೆಯಲ್ಲಿ ಪೊಲೀಸರು ಮಂಗಳವಾರ ತಡರಾತ್ರಿ ಮಾಹಿತಿ ಪಡೆದುಕೊಂಡರು   

ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೆಲ ರೌಡಿಗಳು ಮತದಾರರನ್ನು ಬೆದರಿಸುತ್ತಿರುವ ಮಾಹಿತಿ ಕಲೆ ಹಾಕಿರುವ ಪೊಲೀಸರು, ನಗರದ 290 ರೌಡಿಗಳ ಮನೆಗಳ ಮೇಲೆ ಮಂಗಳವಾರ ತಡರಾತ್ರಿ ದಾಳಿ ಮಾಡಿ ಪರಿಶೀಲನೆ ನಡೆಸಿದರು.

ಉತ್ತರ ವಿಭಾಗದ ಮಲ್ಲೇಶ್ವರ, ಶ್ರೀರಾಮಪುರ, ರಾಜಾಜಿನಗರ, ಸುಬ್ರಹ್ಮಣ್ಯನಗರ, ಮಹಾಲಕ್ಷ್ಮಿ ಲೇಔಟ್, ರಾಜಗೋಪಾಲನಗರ, ನಂದಿನಿ ಲೇಔಟ್, ಯಶವಂತಪುರ, ಆರ್.ಎಂ.ಸಿ ಯಾರ್ಡ್, ಪೀಣ್ಯ, ಸೋಲದೇವನಹಳ್ಳಿ, ಗಂಗಮ್ಮನಗುಡಿ, ಜಾಲಹಳ್ಳಿ, ಬಾಗಲಗುಂಟೆ, ಜೆ.ಸಿ.ನಗರ, ಸಂಜಯನಗರ, ಹೆಬ್ಬಾಳ ಹಾಗೂ ಆರ್‌.ಟಿ. ನಗರ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ರೌಡಿಗಳ ಮನೆಗಳಗಳಲ್ಲಿ ಪೊಲೀಸರು ಶೋಧ ನಡೆಸಿದರು.

‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಗಾ ವಹಿಸಲಾಗಿದೆ. ಕೆಲ ರೌಡಿಗಳು, ಮತದಾರರನ್ನು ಬೆದರಿಸುತ್ತಿರುವ ಮಾಹಿತಿ ಇತ್ತು. ಜೊತೆಗೆ, ಕೆಲವರು ಪದೇ ಪದೇ ಅಪರಾಧಗಳಲ್ಲಿ ಭಾಗಿಯಾಗುತ್ತಿರುವುದು ಗೊತ್ತಾಗಿತ್ತು. ಇದೇ ಕಾರಣಕ್ಕೆ ಈ ದಾಳಿ ಮಾಡಲಾಯಿತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಇನ್‌ಸ್ಪೆಕ್ಟರ್ ಹಾಗೂ ಪಿಎಸ್‌ಐ ಒಳಗೊಂಡಂತೆ 50 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಮಂಗಳವಾರ ತಡರಾತ್ರಿ 1 ಗಂಟೆಗೆ ರೌಡಿಗಳ ಮನೆಗೆ ಹೋಗಿದ್ದ ಪೊಲೀಸರು, ಮನೆಯೊಳಗೆ ಶೋಧ ನಡೆಸಿದವು. ಕೆಲ ರೌಡಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು’ ಎಂದರು ತಿಳಿಸಿದರು.

‘ಯಾವುದೇ ಅಪರಾಧಗಳಲ್ಲಿ ತೊಡಗದಂತೆ ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಕೆಲವರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.