ಪ್ರಜಾವಾಣಿ ವಾರ್ತೆ
ಬೆಂಗಳೂರು: ಹೆದ್ದಾರಿಯಲ್ಲಿ ದರೋಡೆಗೆ ಯತ್ನಿಸುತ್ತಿದ್ದ ವೇಳೆ ದಾಬಸ್‌ಪೇಟೆ ಠಾಣೆ ಪೊಲೀಸರು ಬಂಧಿಸಿರುವ ರೌಡಿಶೀಟರ್ ಜಯಂತ್ ವಿರುದ್ಧ ವಿವಿಧ ಠಾಣೆಗಳಲ್ಲಿ 56 ಪ್ರಕರಣಗಳು ದಾಖಲಾಗಿವೆ.
ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಜಯಂತ್ ಕಾಲಿಗೆ ಗುಂಡು ಹಾರಿಸಲಾಗಿತ್ತು. ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ. ಘಟನೆಯಲ್ಲಿ ಹೆಡ್ ಕಾನ್ಸ್ಟೆಬಲ್ ಇಮ್ರಾನ್ ಖಾನ್ ಅವರು ಗಾಯಗೊಂಡಿದ್ದು, ದಾಬಸ್‌ಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಬಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಜಯಂತ್ ವಿರುದ್ಧ ಕೊಲೆ, ಕೊಲೆ ಯತ್ನ, ಕಳ್ಳತನ, ದರೋಡೆ ಸೇರಿದಂತೆ ಹಲವು ಪ್ರಕರಣಗಳಿವೆ. ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದ. ಕಳ್ಳತನ ಪ್ರಕರಣದಲ್ಲಿ 2019ರಲ್ಲಿ ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ, ವೀರನಂಜೀಪುರ ಅರಣ್ಯ ಪ್ರದೇಶದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ. ಆಗ ಕೂಡ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.
‘ಮಾಗಡಿ ತಾಲ್ಲೂಕಿನ ಆಲೂರು ಗ್ರಾಮದ ಜಯಂತ್ ಅಲಿಯಾಸ್ ಬ್ಯಾಟರಿ ಜಯಂತ್ ಕೆಲ ವರ್ಷಗಳಿಂದ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡಿದ್ದ. ಜೈಲು ಸೇರಿದ ಬಳಿಕ ರೌಡಿಗಳ ಪರಿಚಯವಾಯಿತು. ಬಳಿಕ ದರೋಡೆ, ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.