ಬೆಂಗಳೂರು: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜನರನ್ನು ಬೆದರಿಸುತ್ತಿದ್ದ ರೌಡಿ ರಾಕೇಶ್ ಅಲಿಯಾಸ್ ಸೂಪರ್ ಗುಂಡನನ್ನು (25) ರಾಜಗೋಪಾಲನಗರ ಠಾಣೆ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದಾರೆ.
‘ಹೆಗ್ಗನಹಳ್ಳಿಯ ಐ.ಪಿ.ನಗರ ನಿವಾಸಿ ರಾಕೇಶ್ ಪದೇ ಪದೇ ಅಪರಾಧ ಕೃತ್ಯ ಎಸಗುತ್ತಿದ್ದ. ರಾಜಗೋಪಾಲನಗರ ಠಾಣೆ ರೌಡಿ ಪಟ್ಟಿಯಲ್ಲಿ ಈತನ ಹೆಸರಿತ್ತು. ಎಚ್ಚರಿಕೆ ನೀಡಿದರೂ ಪರಿವರ್ತನೆ ಆಗಿರಲಿಲ್ಲ. ಹೀಗಾಗಿ, ಈತನ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಮುಂದಿನ ಒಂದು ವರ್ಷ ಈತ ಜೈಲುವಾಸ ಅನುಭವಿಸಲಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘2013ರಿಂದ ಅಪರಾಧ ಕೃತ್ಯ ಎಸಗಲಾರಂಭಿಸಿದ್ದ ಈತ ಕೊಲೆ, ಸುಲಿಗೆ, ದರೋಡೆ, ಅಪಹರಣ, ಹಲ್ಲೆ, ಲೈಂಗಿಕ ದೌರ್ಜನ್ಯ, ಜೀವ ಬೆದರಿಕೆ ಸೇರಿದಂತೆ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ. ಈತನ ವಿರುದ್ಧ ವಿಜಯನಗರ, ನಂದಿನಿ ಲೇಔಟ್, ಯಲಹಂಕ, ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಕೆಲ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಪದೇ ಪದೇ ಗೈರಾಗುತ್ತಿದ್ದ’ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.