ADVERTISEMENT

ರೌಡಿಶೀಟರ್‌ ಹತ್ಯೆ: ಆರು ಮಂದಿ ಬಂಧನ

ಕೃತ್ಯ ಎಸಗಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 16:12 IST
Last Updated 6 ಆಗಸ್ಟ್ 2024, 16:12 IST
ನರಸಿಂಹನ್‌ 
ನರಸಿಂಹನ್‌    

ಬೆಂಗಳೂರು: ಹಳೇ ದ್ವೇಷದ ಕಾರಣಕ್ಕೆ ರೌಡಿಶೀಟರ್‌ ಅಜಿತ್‌ ಕುಮಾರ್‌(25) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಶೇಷಾದ್ರಿಪುರ ಠಾಣೆ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ.

ಚಾಮರಾಜೇಂದ್ರ ನಗರದ ನಿವಾಸಿಗಳಾದ ಅರುಣ್‌, ಸಿಂಗಮಲೈ, ನರಸಿಂಹ, ಅಜಯ್, ದುರ್ಗಾದೇವಿ, ಕೃಪಾದೇವಿ ಬಂಧಿತರು.

‘ಕೃತ್ಯದಲ್ಲಿ 15 ಆರೋಪಿಗಳು ಭಾಗಿಯಾಗಿದ್ದರು. ಎಲ್ಲರೂ ತಮಿಳುನಾಡಿಗೆ ತೆರಳಿ ವಿವಿಧ ಸ್ಥಳಗಳಲ್ಲಿ ತಲೆಮರೆಸಿಕೊಂಡಿದ್ದರು. ಅದರಲ್ಲಿ ಆರು ಮಂದಿಯನ್ನು ಬಂಧಿಸಿದ್ದು, ಉಳಿದವರ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

ಠಾಣಾ ವ್ಯಾಪ್ತಿಯ ರಿಸಲ್ದಾರ್‌ ಸ್ಟ್ರೀಟ್‍ನಲ್ಲಿ ಆಗಸ್ಟ್ 1ರಂದು ಕೊಲೆ ನಡೆದಿತ್ತು. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು.

‘ಬಂಧಿತರು ಹಾಗೂ ಕೊಲೆಯಾದ ವ್ಯಕ್ತಿ ಒಂದೇ ಬಡಾವಣೆಯ ನಿವಾಸಿಗಳು. 2020ರಲ್ಲಿ ಹಾಲು ವಿತರಣೆಯ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಈ ಘಟನೆ ನಡೆದ ಮೇಲೆ ಎರಡು ಗುಂಪುಗಳ ಮಧ್ಯೆ ದ್ವೇಷ ಬೆಳೆದಿತ್ತು. 2022ರಲ್ಲಿ ಮತ್ತೆ ಗಲಾಟೆ ನಡೆದು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿತ್ತು. ಆ ಪ್ರಕರಣದಲ್ಲಿ ಅಜಿತ್‌ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ. ನಂತರ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ’ ಎಂದು ಮೂಲಗಳು ಹೇಳಿವೆ.

‘ಆಗಸ್ಟ್‌ 1ರಂದು ಮನೆಯಲ್ಲೇ ಇದ್ದ ಅಜಿತ್‌, ಊಟ ಮುಗಿಸಿ ಸಂಜೆ ಮನೆಯಿಂದ ಹೊರಬಂದು, ರಿಸಲ್ದಾರ್‌ ಸ್ಟ್ರೀಟ್‌ನಲ್ಲಿ ನಡೆದು ತೆರಳುತ್ತಿದ್ದ. ಆಗ ಅಡ್ಡ ಬಂದ ಆರೋಪಿಗಳು, ಹಳೇ ದ್ವೇಷದಿಂದ ಕೊಲೆ ಮಾಡಿ ಪರಾರಿಯಾಗಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸರು ಅಕ್ಕಪಕ್ಕದ ಸಿಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಲಭಿಸಿತ್ತು. ತಮಿಳುನಾಡಿಗೆ ತೆರಳಿದ್ದ ಪೊಲೀಸ್‌ ತಂಡ ಅಲ್ಲಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆ ತಂದಿದೆ’ ಎಂದು ಪೊಲೀಸರು ಹೇಳಿದರು.

ಅಜಯ್‌ 
ಅರುಣ್‌
ಪ್ರಕಾಶ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.