ADVERTISEMENT

ಬೆಂಗಳೂರು: ರೌಡಿಶೀಟರ್‌ ಪವನ್‌ ಕಾಲಿಗೆ ಗುಂಡಿಕ್ಕಿ ಸೆರೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 4:26 IST
Last Updated 18 ಸೆಪ್ಟೆಂಬರ್ 2024, 4:26 IST
   

ಬೆಂಗಳೂರು: ಬಂಧನ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ ರೌಡಿಶೀಟರ್‌ ಕಾಲಿಗೆ ಗುಂಡು ಹಾರಿಸಿ ಬ್ರಹ್ಮದೇವರ ಗುಡ್ಡದ ಬಳಿ ಮಂಗಳವಾರ ಮುಂಜಾನೆ ಬಂಧಿಸಲಾಗಿದೆ.

ಶ್ರೀನಿವಾಸನಗರದ ಒಂದನೇ ಮುಖ್ಯರಸ್ತೆಯ ಐದನೇ ಕ್ರಾಸ್ ನಿವಾಸಿ, ರಾಜಗೋಪಾಲ ನಗರ ಪೊಲೀಸ್‌ ಠಾಣೆಯ ರೌಡಿಶೀಟರ್‌ ಪವನ್‌ ಅಲಿಯಾಸ್ ಕಡುಬು ಬಂಧಿತ ಆರೋಪಿ.

ಕಾರ್ಯಾಚರಣೆ ವೇಳೆ ಪೊಲೀಸರು ಆತ್ಮರಕ್ಷಣೆ ಗಾಗಿ ಪವನ್‌ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿಯು ಹೆಡ್‌ ಕಾನ್‌ಸ್ಟೆಬಲ್‌ ವೆಂಕಟೇಶ್ ಅವರ ಮೇಲೂ ಹಲ್ಲೆ ನಡೆಸಿದ್ದಾನೆ. ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ರಘು ಹಾಗೂ ಪವನ್‌ ಮಧ್ಯೆ ಗಲಾಟೆ ನಡೆದಿತ್ತು. ಹಳೇ ದ್ವೇಷದ ಕಾರಣಕ್ಕೆ ಸೆಪ್ಟೆಂಬರ್‌ 15ರಂದು ರಘುನನ್ನು ಹುಡುಕಿಕೊಂಡು ಆರೋಪಿಯು ಸುಂಕದಕಟ್ಟೆಗೆ ಬಂದಿದ್ದ. ಅಲ್ಲಿ ರಘು ಅವರ ಸ್ನೇಹಿತ ವಿಶ್ವಾಸ್‌ ಸಿಕ್ಕಿದ್ದ. ರಘು ಬಗ್ಗೆ ವಿಚಾರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಆರೋಪಿ, ತನ್ನ ಬಳಿಯಿದ್ದ ಮಚ್ಚಿನಿಂದ ವಿಶ್ವಾಸ್‌ ಮೇಲೆ ನಡೆಸಿದ್ದ. ರಘುನನ್ನು ಮುಗಿಸುವುದಾಗಿ ಬೆದರಿಕೆಯೊಡ್ಡಿದ್ದ. ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ವಿಶ್ವಾಸ್‌ನನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ’ ಎಂದು ಪೊಲೀಸರು ಹೇಳಿದರು.

‘ಇದಕ್ಕೂ ಮೊದಲು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ವಿದ್ಯಾನಿಕೇತನ ಶಾಲೆಯ ಬಳಿ ಕ್ರಿಕೆಟ್‌ ಆಡುತ್ತಿದ್ದ ಸ್ಥಳಕ್ಕೆ ತೆರಳಿದ್ದ ರೌಡಿಶೀಟರ್‌, ವ್ಯಕ್ತಿಯೊಬ್ಬರ ಜೊತೆಗೆ ಗಲಾಟೆ ನಡೆಸಿದ್ದ. ಗಲಾಟೆ ನಡೆಸಿ ಬೆದರಿಕೆ ಹಾಕಿದ್ದ ಬಗ್ಗೆ ಆ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಸಿಟ್ಟಿಗೆದಿದ್ದ ಆರೋಪಿ, ದೂರು ನೀಡಿದ ಯುವಕನ ಮೇಲೆ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ್ದ. ಅದನ್ನು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದ’ ಎಂದು ಪೊಲೀಸರು ಹೇಳಿದರು.

ಆರೋಪಿ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣ ಸಂಬಂಧ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಉಲ್ಲಾಳ ಉಪನಗರದ ಬಳಿಯಿರುವ ಬ್ರಹ್ಮದೇವರ ಗುಡ್ಡೆಯ ನಿರ್ಜನ ಪ್ರದೇಶದಲ್ಲಿ ಪವನ್ ಇರುವುದರ ಬಗ್ಗೆ ಮಾಹಿತಿ ಪಡೆದಿದ್ದ ಇನ್‌ಸ್ಪೆಕ್ಟರ್‌ ಕೆ.ಸುಬ್ರಮಣಿ ನೇತೃತ್ವದ ಪೊಲೀಸರ ತಂಡವು ಮಂಗಳವಾರ ಮುಂಜಾನೆಯೇ ಸ್ಥಳಕ್ಕೆ ತೆರಳಿತ್ತು. ಆರೋಪಿಯನ್ನು ಹಿಡಿಯಲು ಮುಂದಾದ ವೇಳೆ ಹೆಡ್‌ ಕಾನ್‌ಸ್ಟೆಬಲ್‌ ವೆಂಕಟೇಶ್‌ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾದ. ಆಗ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಲಾಯಿತು. ಆಗ ಆರೋಪಿಯು ಹೆಡ್ ಕಾನ್‌ಸ್ಟೆಬಲ್‌ ಮೇಲೆ ಮಾರಕಾಸ್ತ್ರದಿಂದ ಮತ್ತೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ.‌ ತಕ್ಷಣ ಇನ್‌ಸ್ಪೆಕ್ಟರ್‌ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದುಕೊಂಡರು ಎಂದು ಮೂಲಗಳು ತಿಳಿಸಿವೆ. 

ಆರೋಪಿ ವಿರುದ್ಧ ಡಕಾಯಿತಿ, ಗಾಂಜಾ ಮತ್ತಿನಲ್ಲಿ ಹಲ್ಲೆ ಸೇರಿದಂತೆ ಸುಮಾರು 11ಕ್ಕೂ ಅಧಿಕ ಪ್ರಕರಣಗಳಿವೆ ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.