ಬೆಂಗಳೂರು: ‘ತನ್ನದಲ್ಲದ ಜನಾಂಗವನ್ನು ನಾಶ ಮಾಡಿ ರಾಷ್ಟ್ರಕಟ್ಟಲು ಹೊರಟಿದ್ದ ಸರ್ವಾಧಿಕಾರಿ ಹಿಟ್ಲರನೇ ಆರ್‌ಎಸ್‌ಎಸ್‌ಗೆ ಪ್ರೇರಣೆ’ ಎಂದು ಚಿಂತಕ ಜಿ.ರಾಮಕೃಷ್ಣ ಹೇಳಿದರು.
ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ತಮ್ಮದೇ ಕೃತಿ ‘ಹಿಂದುತ್ವದ ಹಿಂದೆ–ಮುಂದೆ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೋಲ್ವಾಲ್ಕರ್ ಅವರು ತಮ್ಮ ‘ಬಂಚ್ ಆಫ್ ಥಾಟ್ಸ್’ನಲ್ಲಿ ‘ಜನಾಂಗ ಪ್ರಜ್ಞೆಯ ಜಾಗೃತಿಯ ಮೂಲಕ ಅದರ ಹಿರಿಮೆಯ ಅನುಭವವು ಉದಯವಾಗುವಂತೆ ಮಾಡಿ ಹಿಟ್ಲರ್ ಜರ್ಮನಿ ರಾಷ್ಟ್ರವನ್ನು ಕಟ್ಟಿದ್ದಾನೆ. ಇದರಿಂದ ಭಾರತ ದೇಶವು ಒಂದು ಪಾಠವನ್ನು ಕಲಿಯಬೇಕಾಗಿದೆ ಎನ್ನುವುದನ್ನು ಬರೆದಿದ್ದಾರೆ’ ಎಂದರು.
‘ಆರ್‌ಎಸ್‌ಎಸ್ ಸ್ಥಾಪನೆಗೆ ಹಿಟ್ಲರ್ ಪ್ರೇರಣೆಯಾಗಿದ್ದ. ಹಿಟ್ಲರ್ ತನ್ನ ಜನಾಂಗದವರನ್ನು ಬಿಟ್ಟು ಬೇರೆಯವರನ್ನು ಧ್ವಂಸ ಮಾಡುವ ಮನಸ್ಥಿತಿ ಹೊಂದಿದ್ದ. ಇಂತಹ ಮನಸ್ಥಿತಿ ಉಳ್ಳವರು ಈಗಲೂ ನಮ್ಮ ನಡುವೆ ಇದ್ದಾರೆ. ಅಂತಹ ಮನಸ್ಥಿತಿಯನ್ನು ಎಚ್ಚರಿಕೆಯಿಂದ ಬೇರು ಸಹಿತ ಕಿತ್ತೊಗೆಯಬೇಕು’ ಎಂದು ಹೇಳಿದರು.
ಕೃತಿ ಬಿಡುಗಡೆ ಮಾಡಿದ ಪತ್ರಕರ್ತ ಡಿ.ಉಮಾಪತಿ, ‘ಹಿಟ್ಲರ್ ಘೋಷಿಸಿಕೊಂಡು ಕಾರ್ಯರೂಪಕ್ಕೆ ತರುತ್ತಿದ್ದ ದಮನಕಾರಿ ನೀತಿಗಳನ್ನು ಭಾರತದಲ್ಲಿ ಈಗ ಅಘೋಷಿತವಾಗಿ ಜಾರಿಗೆ ತರಲಾಗುತ್ತಿದೆ’ ಎಂದರು.
ಸಾಮಾಜಿಕ ಹೋರಾಟಗಾರ್ತಿ ಎಸ್. ಸತ್ಯ ಮತ್ತು ನಿವೃತ್ತ ಪ್ರಾಧ್ಯಾಪಕಿ ಎನ್.ಇಂದಿರಮ್ಮ ಕೃತಿ ಪರಿಚಯ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.