ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ₹ 2,000ರ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಮಾಡಿದ ಬಳಿಕ ಅದೇ ನೋಟುಗಳನ್ನು ಹಿಡಿದು ಪೆಟ್ರೋಲ್ ಬಂಕ್‌ಗಳಿಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ನಿತ್ಯವೂ ಬಂಕ್‌ಗಳಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿದೆ.
₹ 2,000ರ ನೋಟುಗಳನ್ನು ಸ್ವೀಕರಿಸಿದರೆ ತೆರಿಗೆ ಇಲಾಖೆಗಳಿಂದ ಸಮಸ್ಯೆ ಎದುರಿಸಬಹುದು ಎಂಬ ಆತಂಕ ಪೆಟ್ರೋಲ್ ಬಂಕ್ ಮಾಲೀಕರನ್ನು ಕಾಡುತ್ತಿದೆ. ಪೆಟ್ರೋಲ್ ಬಂಕ್ ಮಾಲೀಕರ ಸಂಘವು ಈ ಕುರಿತು ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.
‘ನಾನು ಪೆಟ್ರೋಲ್ ಬಂಕ್‌ಗೆ ಹೋದಾಗ ಯಾವ ವಿಧಾನದಲ್ಲಿ ಪಾವತಿಸುತ್ತೀರಿ ಎಂದು ಅಲ್ಲಿನ ಕ್ಯಾಷಿಯರ್ ಪ್ರಶ್ನಿಸಿದರು. ಡಿಜಿಟಲ್ ಪಾವತಿ ಮೂಲಕ ಎಂದು ಉತ್ತರಿಸಿದೆ. ಅಷ್ಟರಲ್ಲಾಗಲೇ ₹ 2,000 ಕರೆನ್ಸಿ ನೋಟು ನೀಡಿದ ಗ್ರಾಹಕರೊಬ್ಬರ ಜತೆ ಕ್ಯಾಷಿಯರ್ ವಾಗ್ವಾದಕ್ಕೆ ಇಳಿದಿರುವುದು ಕಂಡು ಬಂತು’ ಎಂದು ಮನೋಹರ್ ಜಿ. ಎಂಬ ಗ್ರಾಹಕ ವಿವರಿಸಿದರು.
‘ಪ್ರಜಾವಾಣಿ’ಯು ನಗರದ ಮೂರು ಪೆಟ್ರೋಲ್ ಬಂಕ್ ಮಾಲೀಕರನ್ನು ಸಂಪರ್ಕಿಸಿತು. ‘₹ 2,000ರ ನೋಟಿನ ಮೂಲಕ ಪಾವತಿಸುವುದಿಲ್ಲ ಎಂಬುದನ್ನು ಖಾತರಿಪಡಿಸಿಕೊಂಡೇ ಪೆಟ್ರೋಲ್, ಡೀಸೆಲ್ ಪೂರೈಸುತ್ತಿದ್ದೇವೆ. ₹ 2,000ರ ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಪೆಟ್ರೋಲ್ ಬಂಕ್‌ಗಳನ್ನು ಬಳಸಿಕೊಳ್ಳುತ್ತಿರುವುದು ಕಂಡುಬಂದಿದೆ’ ಎಂದರು.
‘ಕಳೆದ ಎರಡು ವರ್ಷಗಳಲ್ಲಿ ನಾಲ್ಕರಿಂದ ಐದು ತಿಂಗಳಿಗೊಮ್ಮೆ ₹ 2,000ರ ನೋಟುಗಳನ್ನು ನೋಡುತ್ತಿದ್ದೆವು. ಈಗ ಪೆಟ್ರೋಲ್, ಡೀಸೆಲ್ ಖರೀದಿಗೆ ಬರುವ ಹೆಚ್ಚಿನವರು ₹ 2,000ರ ನೋಟು ಕೊಡುತ್ತಿದ್ದಾರೆ. ಇದರಿಂದ ಚಿಲ್ಲರೆ ಸಮಸ್ಯೆ ಎದುರಾಗಿದೆ’ ಎಂದು ರಾಜಾನುಕುಂಟೆಯ ಪೆಟ್ರೋಲ್ ಬಂಕ್ ಒಂದರ ಮಾಲೀಕ ಹರೀಶ್ ರೆಡ್ಡಿ ಹೇಳುತ್ತಾರೆ.
‘ಈಗ ₹ 2,000 ನೋಟುಗಳನ್ನು ನೀಡುವವರ ಸಂಖ್ಯೆ ಹೆಚ್ಚಾಗಿದೆ. ನಾವು ಹೆಚ್ಚಿನ ಪ್ರಮಾಣದಲ್ಲಿ ₹ 2,000ರ ನೋಟುಗಳನ್ನು ಬ್ಯಾಂಕ್‌ಗೆ ಪಾವತಿಸಿದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡುತ್ತದೆ. ಈ ಸಮಸ್ಯೆಯನ್ನು ಪರಿಹರಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ’ ಎಂದು ಅಖಿಲ ಕರ್ನಾಟಕ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ಕೆ.ಎಂ. ಬಸವೇಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.