ADVERTISEMENT

ವಾಹನ ದಟ್ಟಣೆ ನಿವಾರಿಸಲು ಯೋಜನೆ; 11 ಮೇಲ್ಸೇತುವೆ ನಿರ್ಮಾಣಕ್ಕೆ ₹ 3 ಸಾವಿರ ಕೋಟಿ

ಆರ್. ಮಂಜುನಾಥ್
Published 1 ಜುಲೈ 2024, 2:00 IST
Last Updated 1 ಜುಲೈ 2024, 2:00 IST
<div class="paragraphs"><p>ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣ ಬಳಿಯ ವಾಹನ ದಟ್ಟಣೆ </p></div>

ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್‌ ನಿಲ್ದಾಣ ಬಳಿಯ ವಾಹನ ದಟ್ಟಣೆ

   

ಪ್ರಜಾವಾಣಿ ಚಿತ್ರ / ಕಿಶೋರ್ ಕುಮಾರ್ ಬೋಳಾರ್

ಬೆಂಗಳೂರು: ನಗರದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಇನ್ನೂ 11 ಮೇಲ್ಸೇತುವೆಗಳನ್ನು ನಿರ್ಮಿಸಲು ಯೋಜಿಸಲಾಗಿದ್ದು, ಇದಕ್ಕಾಗಿ ₹3 ಸಾವಿರ ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. 

ADVERTISEMENT

ಹಲವು ಪ್ರಮುಖ ಜಂಕ್ಷನ್‌ ಹಾಗೂ ಸ್ಥಳಗಳಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದ್ದು, ಮೇಲ್ಸೇತುವೆ ಅಥವಾ ಗ್ರೇಡ್‌ ಸೆಪರೇಟರ್‌ಗಳನ್ನು 28 ಕಿ.ಮೀ.ನಷ್ಟು ನಿರ್ಮಿಸುವ ಮೂಲಕ ಸಂಚಾರವನ್ನು ಸುಗಮಗೊಳಿಸಬಹುದು. ಈ ನಿಟ್ಟಿನಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೂಚಿಸಿದ್ದಾರೆ.

ಕನಕಪುರ ರಸ್ತೆ, ಮೈಸೂರು ರಸ್ತೆ, ಹಳೇ ಮದ್ರಾಸ್‌ ರಸ್ತೆ ಹಾಗೂ ಹೊಸೂರು ರಸ್ತೆಗಳಲ್ಲಿ ನಿತ್ಯವೂ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಈ ದಟ್ಟಣೆ ನಿವಾರಣೆಗೆ ಕ್ರಮ ಕೈಗೊಳ್ಳಲು ಹಲವು ಬಾರಿ ಸೂಚನೆ ನೀಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸವಾಗಿಲ್ಲ. ಹೀಗಾಗಿ, ಮೇಲ್ಸೇತುವೆ ನಿರ್ಮಾಣವೇ ಶಾಶ್ವತ ಪರಿಹಾರ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಸಂಚಾರ ಪೊಲೀಸರ ಸಲಹೆಯಂತೆ ಜಂಕ್ಷನ್‌ಗಳ ಅಭಿವೃದ್ಧಿಯಿಂದ ವಾಹನ ದಟ್ಟಣೆ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಬಾರಿಯ ಮಳೆಗಾಲದಲ್ಲೂ ರಸ್ತೆಯಲ್ಲೇ ನೀರು ನಿಂತು ಹಲವು ತೊಂದರೆಗಳಾಯಿತು. ಜಂಕ್ಷನ್‌ಗಳ ದಟ್ಟಣೆ ನಿವಾರಣೆಯಾಗಲಿಲ್ಲ. ಹೀಗಾಗಿ ಮೇಲ್ಸೇತುವೆ ಅಥವಾ ಗ್ರೇಡ್‌ ಸೆಪರೇಟರ್‌ ನಿರ್ಮಿಸಲು ಯೋಜಿಸಲಾಗಿದೆ.

ರಾಜ್ಯ ಸರ್ಕಾರ ಈಗಾಗಲೇ 9 ಹೈ ಟ್ರಾಫಿಕ್‌ ಡೆನ್ಸಿಟಿ ಕಾರಿಡಾರ್‌ಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದರ ಜೊತೆಯಲ್ಲಿ ಹೊಸದಾಗಿ 11 ಮೇಲ್ಸೇತುವೆ/ಗ್ರೇಡ್‌ ಸೆಪರೇಟರ್‌ಗಳನ್ನು ನಿರ್ಮಿಸಲು ಉಪ ಮುಖ್ಯಮಂತ್ರಿ ಒಲವು ತೋರಿದ್ದಾರೆ. ಡಿಪಿಆರ್‌ ಸಿದ್ಧವಾದ ಮೇಲೆ, ಟೆಂಡರ್‌ ಕರೆದು ಈ ವರ್ಷದಲ್ಲೇ ಕಾಮಗಾರಿ ಆರಂಭಿಸಲೂ ಸೂಚಿಸಿದ್ದಾರೆ. ಈ 11 ಮೇಲ್ಸೇತುವೆ / ಗ್ರೇಡ್‌ ಸೆಪರೇಟರ್‌ಗಳನ್ನು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಜಂಟಿ ಅನುದಾನದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಸರ್ಕಾರದ ಶೇ 60ರಷ್ಟು ವಿಶೇಷ ಅನುದಾನವಾಗಿ ಬಿಡುಗಡೆ ಮಾಡಲಿದ್ದು, ಉಳಿದದ್ದನ್ನು ಬಿಬಿಎಂಪಿ ಭರಿಸಬೇಕಿದೆ. ಕೇಂದ್ರ ಸರ್ಕಾರದಿಂದಲೂ ವಿಶೇಷ ಅನುದಾನ ಪಡೆಯಲು ಚಿಂತಿಸಲಾಗಿದೆ.

‘ನಗರದಲ್ಲಿ ಸುರಂಗ ರಸ್ತೆಯ ಮೂಲಕ ಪ್ರಮುಖ ರಸ್ತೆ ಹಾಗೂ ಹೊರವಲಯದ ರಸ್ತೆಗಳನ್ನು ಸಂಪರ್ಕಿಸಲು ಈಗಾಗಲೇ ಯೋಜಿಸಲಾಗಿದೆ. ಪ್ರತಿ ಕಿ.ಮೀ.ಗೆ ₹450 ಕೋಟಿ ವೆಚ್ಚವಾಗುವ ಈ ಯೋಜನೆ ಡಿಪಿಆರ್‌ ಇನ್ನೂ ಸಿದ್ಧವಾಗಿಲ್ಲ. ಎರಡೆರಡು ಬಾರಿ ಟೆಂಡರ್‌ಗಳನ್ನು ಕರೆಯಲಾಗಿದೆ. ಆದರೆ ಇನ್ನೂ ಅಂತಿಮವಾಗಿಲ್ಲ. ಹೀಗಾಗಿ, ತುರ್ತಾಗಿ ನಗರದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಬೇಕಿದೆ. ಬಿಬಿಎಂಪಿ ಚುನಾವಣೆ ಏನಾದರೂ ಪ‍್ರಕಟವಾದರೆ ಹೇಳಿಕೊಳ್ಳಲು ಅಭಿವೃದ್ಧಿ ಯೋಜನೆಗಳೇ ಇಲ್ಲದ ಸ್ಥಿತಿ ಇದೆ. ಒಂದು ವರ್ಷದಲ್ಲಿ ಕಣ್ಣಿಗೆ ಕಾಣುವಂತಹ ಕಾಮಗಾರಿಗಳಾಗಿಲ್ಲ. ಹೀಗಾಗಿ, 11 ಮೇಲ್ಸೇತುವೆಗಳನ್ನು ನಿರ್ಮಿಸುವ ಯೋಜನೆಗೆ ತುರ್ತಾಗಿ ಅನುಮೋದನೆ ನೀಡಲು ನಿರ್ಧರಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

9 ಕಾರಿಡಾರ್‌: ನಗರದಲ್ಲಿ 12 ಹೈ ಟ್ರಾಫಿಕ್‌ ಡೆನ್ಸಿಟಿ ಕಾರಿಡಾರ್‌ಗಳ ಅಭಿವೃದ್ಧಿಗೆ ಹಿಂದಿನ ಸರ್ಕಾರ ಸಮ್ಮತಿಸಿತ್ತು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ (ಕೆಆರ್‌ಡಿಸಿಎಲ್‌) ಮೂಲಕ ನಡೆಸಲಾಗುವ ಈ ಕಾಮಗಾರಿಗಳಿಗೆ ₹400 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿತ್ತು. ನಂತರ ಅದನ್ನು ರದ್ದುಪಡಿಸಿ, 117.2 ಕಿ.ಮೀಯ 9 ಹೈ ಟ್ರಾಫಿಕ್‌ ಡೆನ್ಸಿಟಿ ಕಾರಿಡಾರ್‌ಗಳನ್ನು ಬಿಬಿಎಂಪಿಯಿಂದಲೇ ನಿರ್ವಹಣೆ ಮಾಡಲು ₹273 ಕೋಟಿಗೆ 2022ರ ಡಿ.17ರಂದು ಅನುಮೋದಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ಎಲ್ಲ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಕಾರ್ಯಾದೇಶವನ್ನೂ ನೀಡಲಾಗಿತ್ತು. ಅದನ್ನು ಕಾಂಗ್ರೆಸ್‌ ಸರ್ಕಾರವೂ ಕಳೆದ ನವೆಂಬರ್‌ನಲ್ಲಿ ಅನುಮೋದಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.