ಬೆಂಗಳೂರು: ಮಹಾನಗರದ ಹೊರವಲಯ ಪ್ರದೇಶಗಳ ವಿಧಾನಸಭಾ ಕ್ಷೇತ್ರಗಳಿಗೆ ಮೂಲಸೌಕರ್ಯ ಒದಗಿಸಲು ಪ್ರಸಕ್ತ ರಾಜ್ಯ ಬಜೆಟ್‌ನಲ್ಲಿ ₹ 5 ಸಾವಿರ ಕೋಟಿ ಅನುದಾನ ನಿಗದಿ ಮಾಡಬೇಕು ಎಂದು ದಾಸರಹಳ್ಳಿ ಶಾಸಕ ಆರ್. ಮಂಜುನಾಥ್ ಒತ್ತಾಯಿಸಿದ್ದಾರೆ.
‘ಉದ್ಯೋಗ ಅರಸಿ ನಗರಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೊಸ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ. ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಕೆ ಮಾಡಲು ಸರ್ಕಾರ ಮುಂದಾಗಿದೆ. ಏಷ್ಯಾದ ಎರಡನೇ ದೊಡ್ಡ ಕೈಗಾರಿಕಾ ಪ್ರದೇಶ ಎನಿಸಿರುವ ಪೀಣ್ಯದಲ್ಲಿ 10 ಸಾವಿರ ಉದ್ದಿಮೆಗಳು, 9 ಲಕ್ಷ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪ್ರದೇಶಗಳ ಅಭಿವೃದ್ಧಿ ಅಗತ್ಯ’ ಎಂದು ಅವರು ಹೇಳಿದ್ದಾರೆ.
‘ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿನ ಕಂಪನಿಗಳಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ ಸುಮಾರು ₹1,200 ಕೋಟಿ ವಾರ್ಷಿಕ ಜಿಎಸ್‌ಟಿ ಪಾವತಿಸಲಾಗುತ್ತಿದೆ. ಅಲ್ಲದೆ, ವರ್ಷಕ್ಕೆ ₹200 ಕೋಟಿಯಷ್ಟು ಆಸ್ತಿ ಮತ್ತು ವಾಣಿಜ್ಯ ತೆರಿಗೆ ಸಂಗ್ರಹವಾಗುತ್ತಿದೆ. ಈ ಹಣವನ್ನು ಬೇರೆ ಉದ್ದೇಶಕ್ಕೆ ಬಳಸದೆ ಹೊರವಲಯದ ಹೊಸ ಪ್ರದೇಶಗಳ ಅಭಿವೃದ್ಧಿ ಮಾತ್ರ ಬಳಕೆ ಮಾಡಬೇಕು’ ಎಂದು ಅವರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.