ADVERTISEMENT

ನವೀಕರಣಕ್ಕೆ ಕಾದಿದೆ ರಸೆಲ್ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 1:27 IST
Last Updated 13 ಜುಲೈ 2022, 1:27 IST
ಶಿವಾಜಿನಗರದ ರಸೆಲ್ ಮಾರುಕಟ್ಟೆ –ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್
ಶಿವಾಜಿನಗರದ ರಸೆಲ್ ಮಾರುಕಟ್ಟೆ –ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್   

ಬೆಂಗಳೂರು: ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾದ ಶಿವಾಜಿನಗರದ ರಸೆಲ್ ಮಾರುಕಟ್ಟೆ ನವೀಕರಣಕ್ಕಾಗಿ ಕಾದು ನಿಂತಿದೆ.

ಅತ್ಯಂತ ಜನನಿಬಿಡ ಪ್ರದೇಶ ಆಗಿರುವ ಶಿವಾಜಿನಗರದಲ್ಲಿ ರಸೆಲ್ ಮಾರುಕಟ್ಟೆ ತನ್ನದೇ ಆದ ವಿಶೇಷ ಆಕರ್ಷಣೆಯನ್ನು ಇಂದಿಗೂ ಉಳಿಸಿಕೊಂಡಿದೆ. ಹೂವು, ಹಣ್ಣು, ತರಕಾರಿ, ಮಾಂಸ ಮತ್ತು ಮೀನಿನ ಅಂಗಡಿಗಳನ್ನು ಒಳಗೊಂಡಿದೆ. ಪ್ರವೇಶದ್ವಾರದ ಬಳಿ ಹೂವಿನ ಅಂಗಡಿಗಳಿದ್ದರೆ, ಕೊನೆಯಲ್ಲಿ ಮೀನಿನ ಅಂಗಡಿಗಳಿವೆ. ಒಟ್ಟಾರೆ 484 ಅಂಗಡಿಗಳು ಮಾರುಕಟ್ಟೆಯೊಳಗೆ ವ್ಯಾಪಾರ ವಹಿವಾಟು ನಡೆಸುತ್ತಿವೆ.

1857ರಲ್ಲಿ ನಿರ್ಮಾಣವಾದ ಶಿವಾಜಿನಗರ ಮಾರುಕಟ್ಟೆ 1927ರಲ್ಲಿ ವಿಸ್ತರಣೆಗೊಂಡಿತು. ಮೊದಲಿಗೆ ಅರ್ಧದಷ್ಟು ಮಾತ್ರ ಇದ್ದ ಮಾರುಕಟ್ಟೆ ಕಟ್ಟಡ 1927ರಲ್ಲಿ ಮುಂಭಾಗದ ಕಟ್ಟಡ ನಿರ್ಮಾಣವಾಯಿತು. ಕಟ್ಟಡದಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿ ಕಾಲಕಾಲಕ್ಕೆ ನಡೆದಿದ್ದರೂ, ಕಳೆದ 10 ವರ್ಷಗಳಿಂದ ಯಾವುದೇ ಕಾಮಗಾರಿ ನಡೆದಿಲ್ಲ.

ADVERTISEMENT

‘ಈ ಮಾರುಕಟ್ಟೆ ನವೀಕರಣಕ್ಕೆ ಜೆಡಿಎಸ್–ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ₹16 ಕೋಟಿ ಅನುದಾನವನ್ನು ಸರ್ಕಾರ ನೀಡಿತ್ತು. ಸರ್ಕಾರ ಬದಲಾಗಿ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಆ ಅನುದಾನ ವಾಪಸ್ ಪಡೆದುಕೊಂಡಿದ್ದರಿಂದ ಮಾರುಕಟ್ಟೆ ನವೀಕರಣ ಪ್ರಸ್ತಾವ ಅಲ್ಲೇ ಉಳಿದುಕೊಂಡಿದೆ’ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು.

‘ಮಾರುಕಟ್ಟೆ ಸುತ್ತಲೂ ಸ್ಮಾರ್ಟ್‌ ಸಿಟಿ ಯೋಜನೆಯಡಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗಳು ಮುಗಿದ ಬಳಿಕ ರಸೆಲ್ ಮಾರುಕಟ್ಟೆ ನವೀಕರಣ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ರಿಜ್ವಾನ್ ಅರ್ಷದ್ ಅವರು ಭರವಸೆ ನೀಡಿದ್ದಾರೆ. ತಾತ್ಕಾಲಿಕವಾಗಿ ಬೇಕಿರುವ ರಸ್ತೆ ಸೌಕರ್ಯ ಕಲ್ಪಿಸಲು ಪ್ರಯತ್ನಿಸಿದ್ದಾರೆ’ ಎಂದು ರಸೆಲ್ ಮಾರುಕಟ್ಟೆ ತರಕಾರಿ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮೊಹಮದ್ ಪರ್ವೇಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅವರು ಶಾಸಕರಾದ ಬಳಿಕ ಶಿವಾಜಿನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಚುರುಕುಗೊಂಡಿವೆ. ಹಲವು ವರ್ಷಗಳಿಂದ ಇರುವ ಸಮಸ್ಯೆಗಳನ್ನು ಸರಿಪಡಿಸಲು ಇನ್ನಷ್ಟು ಕಾಲಾವಕಾಶ ಬೇಕಾಗುತ್ತದೆ’ ಎಂದರು.

‘ರಸೆಲ್ ಮಾರುಕಟ್ಟೆಗೆ ಸದ್ಯ ವಾಹನಗಳು ಬಂದು ಹೋಗಲು ರಸ್ತೆ ಸಮಸ್ಯೆ ಇದೆ. ಕೋವಿಡ್‌ ಬಳಿಕ ವ್ಯಾಪಾರ–ವಹಿವಾಟು ಹಿಂದಿಗಿಂತ ಕಡಿಮೆಯೇ ಇದೆ. ರಸ್ತೆ ಬದಿಯಲ್ಲಿ ವ್ಯಾಪಾರ–ವಹಿವಾಟು ನಡೆಸಲು ಅವಕಾಶ ನೀಡಿರುವುದರಿಂದ ಜನ ಇಲ್ಲಿಗೆ ಬರುವುದು ಕಡಿಮೆಯಾಗಿದೆ’ ಎಂದು ತಿಳಿಸಿದರು.

ಶಿವಾಜಿನಗರ: ‘ಜನಸ್ಪಂದನ’ ಶನಿವಾರ

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜನರ ಅಹವಾಲು ಆಲಿಸುವ ಸಲುವಾಗಿ ‘ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಸಮೂಹವು ಶನಿವಾರ (ಇದೇ 16) ವಸಂತ ನಗರದ ತಿಮ್ಮಯ್ಯ ರಸ್ತೆಯ ಕಾವೇರಪ್ಪ ಬಡಾವಣೆಯ ಬಂಜಾರ ಭವನದಲ್ಲಿ ‘ಜನಸ್ಪಂದನ’ ಕಾರ್ಯಕ್ರಮ ಏರ್ಪಡಿಸಿದೆ.

ಈ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಹಾಗೂ ಬಿಬಿಎಂಪಿ, ಜಲಮಂಡಳಿ, ಬಿಡಿಎ, ಬೆಸ್ಕಾಂ, ಪೊಲೀಸ್‌ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಅಹವಾಲು ಆಲಿಸಲಿದ್ದಾರೆ.

ಆಸಕ್ತರು ಬೆಳಿಗ್ಗೆ 9ರಿಂದ ಸ್ಥಳದಲ್ಲೇ ಹೆಸರು ನೋಂದಾಯಿಸಬಹುದು. ಮೊದಲು ನೋಂದಣಿ ಮಾಡಿಸಿದವರಿಗೆ ಆದ್ಯತೆ. ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.