ADVERTISEMENT

‘ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ಕಾರ್ಯಕ್ರಮ ರೂಪಿಸಿ’

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 5:15 IST
Last Updated 13 ನವೆಂಬರ್ 2019, 5:15 IST
ಎಸ್. ಸುರೇಶ್ ಕುಮಾರ್
ಎಸ್. ಸುರೇಶ್ ಕುಮಾರ್   

ಬೆಂಗಳೂರು: ‘ಯಾವ ಮಕ್ಕಳು ಯಾವ ವಿಷಯದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವುದನ್ನು ಪತ್ತೆ ಮಾಡಿ, ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಸಲುವಿಶೇಷ ಕಾರ್ಯಕ್ರಮ ರೂಪಿಸಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಂಗಳವಾರ ನಡೆದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‍ಇಆರ್‌ಟಿ) ಹಾಗೂ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ (ಡಯಟ್) ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘1 ಮತ್ತು 2ನೇ ತರಗತಿಯಲ್ಲಿ ನಲಿ-ಕಲಿಯಲ್ಲಿ ಕಲಿತ ವಿದ್ಯಾರ್ಥಿಗಳು 3ನೇ ತರಗತಿಯಿಂದ ಹಿಂದುಳಿಯುತ್ತಿದ್ದಾರೆ. ಅದರಲ್ಲೂ ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಹಿಂದುಳಿಯುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 3ನೇ ತರಗತಿ ನಂತರ ಕಲಿಕೆಯಲ್ಲಿ ಹಿಂದುಳಿಯುತ್ತಿರುವ ಮಕ್ಕಳನ್ನು ಗುರುತಿಸಿ,ಕಲಿಕಾ ಆಸಕ್ತಿ ಹಾಗೂ ಸಾಮರ್ಥ್ಯವನ್ನು ವೃದ್ಧಿಸಬೇಕು’ ಎಂದರು.

‘ಮೂರು, ಐದು ಹಾಗೂ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಸಾಮರ್ಥ್ಯ ಆಧಾರಿತ ಪರೀಕ್ಷೆ ನಡೆಸಲು ಸಾಧ್ಯವೇ ಎನ್ನುವುದನ್ನು ಪರಿಶೀಲಿಸಿ, ಕ್ರಮಕೈಗೊಳ್ಳಬೇಕು.ಡಿಎಸ್‌ಇಆರ್‌ಟಿ ವತಿಯಿಂದ ಶಿಕ್ಷಕರಿಗೆ ನೀಡುವ ತರಬೇತಿಯನ್ನು ಡಿ.31ರೊಳಗೆ ಮುಗಿಸಬೇಕು. ಜನವರಿಯಿಂದ ಯಾವುದೇ ತರಬೇತಿ ನೀಡದೆ ಪರೀಕ್ಷಾ ಸಮಯದಲ್ಲಿ ಬೋಧನೆಗೆ ಒತ್ತು ನೀಡಲು ಅವಕಾಶ ನೀಡಬೇಕು’ ಎಂದು ತಿಳಿಸಿದರು.

ADVERTISEMENT

ಗೊಂದಲ ಹೆಚ್ಚಿಸಿದಪಬ್ಲಿಕ್ ಪರೀಕ್ಷೆ: 7ನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ನಡೆಸಲಾಗುವುದು ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಸಚಿವರು ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆಉತ್ತರಿಸಲು ನಿರಾಕರಿಸಿದರು.

‘ನೆರೆ ಹಾವಳಿಯಿಂದಾಗಿ ಉತ್ತರ ಕರ್ನಾಟಕದ ಭಾಗದ ವಿದ್ಯಾರ್ಥಿಗಳಿಗೆ ಕಲಿಕೆಗೆ ತೊಡಕಾಗಿತ್ತು. ಹಾಗಾಗಿ ಅಲ್ಲಿನ ಮಕ್ಕಳಿಗೆ ಶನಿವಾರ ಹಾಗೂ ಭಾನುವಾರ ಕೂಡಾ ವಿಶೇಷ ತರಗತಿಗಳನ್ನು ನಡೆಸಲಾಗಿದೆ.11ಲಕ್ಷ ಪಠ್ಯ ಪುಸ್ತಕಗಳನ್ನು ಮರು ಮುದ್ರಣ ಮಾಡಿ, ಪೂರೈಸಲಾಗಿದೆ’ ಎಂದು ಮಾಹಿತಿ ನೀಡಿದರು.

ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಆಯುಕ್ತ ಡಾ.ಕೆ.ಜಿ.ಜಗದೀಶ್, ಸಮಗ್ರ ಶಿಕ್ಷಣ ಅಭಿಯಾನದ ನಿರ್ದೇಶಕ ಡಾ.ಎಂ.ಟಿ.ರೇಜು, ಡಿಎಸ್‍ಇಆರ್‌ಟಿ ನಿರ್ದೇಶಕ ಗೋಪಾಲಕೃಷ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.