ADVERTISEMENT

ಪತ್ನಿ ಮಲಗುವ ಕೋಣೆಯಲ್ಲಿ ಕ್ಯಾಮೆರಾ; ದೂರು

​ಪ್ರಜಾವಾಣಿ ವಾರ್ತೆ
Published 29 ಮೇ 2019, 20:09 IST
Last Updated 29 ಮೇ 2019, 20:09 IST
   

ಬೆಂಗಳೂರು: ‘ನಾನು ಮಲಗುವ ಕೋಣೆಯಲ್ಲೇ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿರುವ ಪತಿ ರಿತ್ವಿಕ್ ಹೆಗಡೆ, ನನ್ನ ಮಾನಕ್ಕೆ ಕುಂದು ಉಂಟು ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಮಹಿಳೆಯೊಬ್ಬರು ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ.

ಅದನ್ನು ಆಧರಿಸಿ ಪೊಲೀಸರು, ರಿತ್ವಿಕ್ ಹಾಗೂ ಅವರ ತಾಯಿ–ಸಹೋದರಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ಮುಂಬೈನ ರಿತ್ವಿಕ್ ಹಾಗೂ ಮಹಿಳೆಗೂ 2013ರಲ್ಲಿ ಮದುವೆಯಾಗಿದೆ. ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕಾಗಿ ದಂಪತಿ ನಡುವೆ ಜಗಳ ಶುರುವಾಗಿದ್ದು, ಮಹಿಳೆ ಮೇಲೆ ಪತಿ ಹಲ್ಲೆ ಸಹ ಮಾಡಿದ್ದಾರೆ. ಆ ಬಗ್ಗೆ ಸಂತ್ರಸ್ತೆಯೇ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

‘ಇತ್ತೀಚೆಗೆ ಮನೆಯ ಮಲಗುವ ಕೋಣೆಯಲ್ಲೇ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ.ಪತ್ನಿಯ ಚಲನವಲನದ ಮೇಲೆ ನಿಗಾ ಇಟ್ಟು, ಅವರು ಬಟ್ಟೆ ಬದಲಿಸುವ ಹಾಗೂ ಮಲಗುವ ದೃಶ್ಯಗಳನ್ನು ಆರೋಪಿ ಕ್ಯಾಮೆರಾದಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ ಎನ್ನಲಾಗಿದೆ. ತನಿಖೆಯಿಂದಲೇ ನಿಜಾಂಶ ಗೊತ್ತಾಗಬೇಕಿದೆ’ ಎಂದರು.

ಕೆಲಸಗಾರರ ಮೇಲೆ ನಿಗಾ: ‘ಮನೆಗೆ ನಿತ್ಯವೂ ಕೆಲಸಗಾರರು ಬಂದು ಹೋಗುತ್ತಾರೆ. ಅವರ ಮೇಲೆ ನಿಗಾ ಇಡುವ ಉದ್ದೇಶದಿಂದ ಮನೆಯ ಪ್ರತಿಯೊಂದು ಕೋಣೆಗೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಆರೋಪಿ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

‘ಆರೋಪಿಗಳ ಹೇಳಿಕೆ ಪಡೆದು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.