ಬೆಂಗಳೂರು: ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜ ಜಯಂತಿ ಮಹೋತ್ಸವ ಭಾನುವಾರ ವಿಜಯನಗರದ ಬಂಟರ ಸಂಘದ ಸಭಾಭವನದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಅಖಿಲ ಭಾರತೀಯ ಸೋಮವಂಶೀಯ ಕ್ಷತ್ರಿಯ ಸಮಾಜ(ಎಬಿಎಸ್‌ಎಸ್‌ಕೆ), ಎಸ್‌ಎಸ್‌ಕೆ ಸಂಘ ಹಾಗೂ ಎಸ್‌ಎಸ್‌ಎಸ್‌ಕೆ ಕೋ – ಆಪರೇಟಿವ್ ಸೊಸೈಟಿ ಸಹಯೋಗದಲ್ಲಿ ಈ ಮಹೋತ್ಸವವನ್ನು ಆಯೋಜಿಸಲಾಗಿತ್ತು.
ಸಭಾ ಕಾರ್ಯಕ್ರಮಕ್ಕೂ ಮುನ್ನ, ವಿಜಯನಗರದ ಟೋಲ್‌ಗೇಟ್‌ನಲ್ಲಿರುವ ಶ್ರೀ ಅಂಬಾಭವಾನಿ ಸೇವಾಕೇಂದ್ರದಿಂದ ಬಂಟರ ಸಂಘದವರೆಗೆ ರಾಜರಾಜೇಶ್ವರ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು. ಸಂಸದ ಪಿ.ಸಿ.ಮೋಹನ್, ಸಮಾಜದ ಹಿರಿಯರು, ಮಹಿಳೆಯರು ಮತ್ತು ಯುವಕರು ಸೇರಿದಂತೆ ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸಭಾ ಕಾರ್ಯಕ್ರಮದಲ್ಲಿ ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು, ‘ಸಮಾಜದ ಸಂಘಕ್ಕೆ ಒಂದು ನಿವೇಶನ ಮಂಜೂರು ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಮಹಿಳೆಯರು ಆಯೋಜಿಸಿದ್ದ ‘ಮುಕ್ತ ಮಾರುಕಟ್ಟೆ’ಯನ್ನು ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಉದ್ಘಾಟಿಸಿದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಎಸ್‌ಎಸ್‌ಕೆ ಸಂಘದ ಅಧ್ಯಕ್ಷ ಎಸ್. ಅನಂತ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಮಾಜದ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಜೊತೆಗೆ ಪ್ರತಿಭಾವಂತ ಯುವಕ–ಯುವತಿಯರು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದ ಸಾಧಕರನ್ನು ಗೌರವಿಸಲಾಯಿತು. ಇದೇ ವೇಳೆ ಬಡ ಕುಟುಂಬದವರಿಗೆ ಪಡಿತರ ಕಿಟ್ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮಹೋತ್ಸವ ಸಮಿತಿಯ ಖಜಾಂಚಿ ಎಂ.ಸಿ.ಉಮಾಶಂಕರ್, ಎಬಿಎಸ್‌ಎಸ್‌ಕೆ ಉಪಾಧ್ಯಕ್ಷ ಡಮಾಮ್ ವಿ. ಸತ್ಯನಾರಾಯಣ, ಬ್ರಿಜ್ ಮೋಹನ್ ಎಸ್. ಖೋಡೆ, ಸಹಜಾನಂದಸಾ ಕಬಾಡಿ, ಎಸ್‌ಎಸ್‌ಕೆ ಕೋ–ಆಪರೇಟಿವ್ ಸೊಸೈಟಿ ಅಧ್ಯಕ್ಷ ಸತೀಶ್ ಇ. ವಾಗ್ಲೆ, ಸಂಚಾಲಕ ಎಂ.ಎನ್.ರಾಮ್, ಸಮಿತಿಯ ಸದಸ್ಯ ಕೆ.ವಸಂತ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.