ADVERTISEMENT

ಜನರಿಗೆ ದೊರಕದ ‘ಸಕಾಲ’ ಭಾಗ್ಯ

ಬಿಬಿಎಂಪಿ ಒಂದರಲ್ಲೇ ಹತ್ತು ಸಾವಿರಕ್ಕೂ ಹೆಚ್ಚು ಅವಧಿ ಮೀರಿದ ಅರ್ಜಿಗಳು ಬಾಕಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2022, 21:26 IST
Last Updated 20 ಫೆಬ್ರುವರಿ 2022, 21:26 IST
ಸಕಾಲ
ಸಕಾಲ   

ಬೆಂಗಳೂರು: ಸಕಾಲದಲ್ಲಿ ಸರ್ಕಾರಿ ಸೇವೆಯನ್ನು ಒದಗಿಸಲು ಜಾರಿಗೆ ತಂದ ‘ಸಕಾಲ’ ಯೋಜನೆಯ ಲಾಭ ನಗರದ ಜನರಿಗೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ವಿವಿಧ ಸೇವೆ ಪಡೆಯಲು ಸಲ್ಲಿಕೆಯಾಗಿರುವ ಅರ್ಜಿಗಳಲ್ಲಿ ಬೆಂಗಳೂರು ನಗರದಲ್ಲೇ ಅತೀ ಹೆಚ್ಚು 11,256 ಅರ್ಜಿಗಳು ವಿಲೇವಾರಿಯಾಗದೆ ಅವಧಿ ಮೀರಿ ಬಾಕಿ ಉಳಿದುಕೊಂಡಿವೆ.

2011ರಲ್ಲಿ ಸಕಾಲ ಕಾಯ್ದೆ ಜಾರಿಗೆ ಬಂದಿದ್ದು, 99 ಇಲಾಖೆಯ 1,115 ಸೇವೆಗಳು ಇದರ ವ್ಯಾಪ್ತಿಯಲ್ಲಿವೆ. ಜನನ–ಮರಣ ಪ್ರಮಾಣ ಪತ್ರವನ್ನು 3ರಿಂದ 7 ದಿನಗಳಲ್ಲಿ, ಪರೀಕ್ಷೆ ಅಂಕಗಳ ಮರುಎಣಿಕೆ 15 ದಿನಗಳಲ್ಲಿ, ಜಾತಿ ಪ್ರಮಾಣ ಪತ್ರ 21 ದಿನಗಳ ಒಳಗೆ, ವಾಹನ ಚಾಲನಾ ಪರವಾನಗಿ 30 ದಿನಗಳಲ್ಲಿ ಕೊಡಬೇಕು. ಹೀಗೆ ಬೇರೆ ಬೇರೆ ಸೇವೆಗಳಿಗೆ ಬೇರೆ ಬೇರೆ ಅವಧಿ ನಿಗದಿ ಮಾಡಲಾಗಿದೆ.

ನಿಗದಿತ ಅವಧಿ ಮೀರಿದರೆ ಸಂಬಂಧಪಟ್ಟ ಅಧಿಕಾರಿ ಅರ್ಜಿದಾರನಿಗೆ ದಿನಕ್ಕೆ ₹ 20ರಂತೆ ಪರಿಹಾರ ಪಾವತಿಸಬೇಕು. ದಂಡ ಪಡೆಯಬೇಕೆಂದರೆ ಅರ್ಜಿದಾರ ಮೇಲಧಿಕಾರಿಗೆ ಮತ್ತೊಂದು ಅರ್ಜಿ ಸಲ್ಲಿಸಬೇಕು.

ADVERTISEMENT

ಸಕಾಲ ಯೋಜನೆಯಡಿ ಈವರೆಗೆ ರಾಜ್ಯದಲ್ಲಿ 21,53,46,382 ಅರ್ಜಿಗಳು ಸಲ್ಲಿಕೆಯಾಗಿದ್ದು, ಆ ಪೈಕಿ 21,49,29,359 ಅರ್ಜಿಗಳು ವಿಲೇವಾರಿಗೊಂಡಿವೆ. 4,17,023 ಅರ್ಜಿಗಳು ಅವಧಿ ಮೀರಿ ಬಾಕಿ ಉಳಿದಿವೆ.

ಬಾಕಿ ಉಳಿದ ಅರ್ಜಿಗಳಲ್ಲಿ ನಗರಾಭಿವೃದ್ಧಿ ಇಲಾಖೆ ಒಂದರಲ್ಲೇ 11,335 ಅರ್ಜಿಗಳು ಸಕಾಲದಲ್ಲಿ ವಿಲೇವಾರಿಯಾಗಿಲ್ಲ. ಈ ಪೈಕಿ ಬೆಂಗಳೂರು ನಗರ ಜಿಲ್ಲೆಯಲ್ಲೇ ಅತೀ ಹೆಚ್ಚು ಅರ್ಜಿಗಳು ಬಾಕಿ ಇವೆ. ಬೆಂಗಳೂರು ಹೊರತುಪಡಿಸಿದರೆ ಶಿವಮೊಗ್ಗ ಜಿಲ್ಲೆಯಲ್ಲಿ 50, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 12, ಕಲಬುರ್ಗಿ ಜಿಲ್ಲೆಯಲ್ಲಿ 4, ಬೆಳಗಾವಿ ಜಿಲ್ಲೆಯಲ್ಲಿ 3, ಧಾರವಾಡ, ಹಾಸನ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ 1 ಅರ್ಜಿ ಮಾತ್ರ ಬಾಕಿ ಉಳಿದುಕೊಂಡಿವೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಬಿಬಿಎಂಪಿಯಲ್ಲೇ 10,947 ಅರ್ಜಿಗಳು ಹಲವು ದಿನಗಳಿಂದ ಅವಧಿ ಮೀರಿ ಬಾಕಿ ಉಳಿದುಕೊಂಡಿವೆ. ನಂತರದ ಸ್ಥಾನದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇದ್ದು, 275 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಜಲಮಂಡಳಿಯಲ್ಲಿ 72, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಲ್ಲಿ 53, ಬಿಎಂಆರ್‌ಡಿಎನಲ್ಲಿ 32 ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 13 ಅರ್ಜಿಗಳು ಬಾಕಿ ಇವೆ ಎಂದು ಸಕಾಲ ಯೋಜನೆಯ ಅಂಕಿ– ಅಂಶಗಳು ಹೇಳುತ್ತಿವೆ.

‘ಅವಧಿ ಮೀರಿ ವಿಲೇವಾರಿ ಆಗುತ್ತಿರುವ ಅರ್ಜಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ವಿಳಂಬ ಮಾಡಿದ ಅಧಿಕಾರಿಯಿಂದ ದಂಡ ವಸೂಲಿ ಮಾಡಿದ್ದರೆ ಈ ಸಂಖ್ಯೆ ಕಡಿಮೆ ಆಗುತ್ತಿತ್ತು. ದಿನದ ದಂಡದ ಮೊತ್ತ ಹೆಚ್ಚಾಗಬೇಕು. ಅಲ್ಲದೆ, ಸಕಾಲ ಅವಧಿ ಮೀರಿದ ತಕ್ಷಣ ಅಧಿಕಾರಿಯ ವೇತನದಿಂದ ದಂಡದ ಮೊತ್ತ ಕಡಿತ ಮಾಡಿ ಅರ್ಜಿದಾರನ ಖಾತೆಗೆ ಜಮೆ ಮಾಡಬೇಕು. ಆಗ ಮಾತ್ರ ಸಕಾಲ ಕಾಯ್ದೆ ಸಮರ್ಪಕ ಜಾರಿ ಸಾಧ್ಯ’ ಎಂಬುದು ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸಿ ಜನನ ಪ್ರಮಾಣ ಪತ್ರಕ್ಕೆ ಕಾಯುತ್ತಿರುವ ಬಿಟಿಎಂ ಲೇಔಟ್‌ನ ಅನಿಲ್‌ ಅವರ ಅಭಿಪ್ರಾಯ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ವಿಳಂಬ

ಸಹಾಯಕ ಕಂದಾಯ ಅಧಿಕಾರಿ(ಎಆರ್‌ಒ) ಕಚೇರಿ; ಬಾಕಿ ಇರುವ ಅರ್ಜಿಗಳ ಸಂಖ್ಯೆ

ವೈಟ್‌ಫೀಲ್ಡ್‌; 1,270

ಕೆಂಗೇರಿ; 1,172

ಹೂಡಿ; 856

ಮಾರತಹಳ್ಳಿ; 766

ಬೇಗೂರು; 440

ಬ್ಯಾಟರಾಯಪುರ; 412

ಹೊರಮಾವು; 322

ಕೊಡಿಗೇಹಳ್ಳಿ; 299

ಕೆ.ಆರ್.ಪುರ; 258

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.