ADVERTISEMENT

ಪಿಎಂಎಸ್‌ಎಸ್‌ವೈ: ಕೋವಿಡ್‌ ಯೋಧರಿಗಿಲ್ಲ ವೇತನ, ಸಂಕಷ್ಟಕ್ಕೆ ಸಿಲುಕಿದ ನೌಕರರು

ಎರಡು ತಿಂಗಳಿಂದ ಆಸ್ಪತ್ರೆಗೆ ಬಿಡುಗಡೆಯಾಗದ ಅನುದಾನ

ವರುಣ ಹೆಗಡೆ
Published 11 ನವೆಂಬರ್ 2021, 6:29 IST
Last Updated 11 ನವೆಂಬರ್ 2021, 6:29 IST
ಪಿಎಂಎಸ್‌ಎಸ್‌ವೈ ಆಸ್ಪತ್ರೆ – ಪ್ರಜಾವಾಣಿ ಚಿತ್ರ
ಪಿಎಂಎಸ್‌ಎಸ್‌ವೈ ಆಸ್ಪತ್ರೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಡಿ (ಪಿಎಂಎಸ್‌ಎಸ್‌ವೈ) ಕಾರ್ಯನಿರ್ವಹಿ ಸುತ್ತಿರುವ ಕೋವಿಡ್‌ ಯೋಧರಿಗೆ ಸರ್ಕಾರವು ಎರಡು ತಿಂಗಳಿಂದ ವೇತನ ಬಿಡುಗಡೆ ಮಾಡಿಲ್ಲ.ಇದರಿಂದಾಗಿ ವೈದ್ಯರು, ಶುಶ್ರೂಷಕರು ಸೇರಿದಂತೆ ಅಲ್ಲಿನ ವೈದ್ಯಕೀಯ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೋವಿಡ್ ಎರಡನೇ ಅಲೆಯ ವೇಳೆ ನಗರದಲ್ಲಿ ಅಧಿಕ ಪ್ರಕರಣ ಗಳು ಕಾಣಿಸಿಕೊಂಡಾಗ ಹಾಸಿಗೆಗಳ ಸಮಸ್ಯೆ ಉದ್ಭ ವಿಸಿತ್ತು. ವಿಕ್ಟೋರಿಯಾ ಹಾಗೂ ಟ್ರಾಮಾ ಕೇರ್‌ನಲ್ಲಿ ಹಾಸಿಗೆಗಳು ಭರ್ತಿಯಾದಾಗ 200 ಹಾಸಿಗೆಗಳ ಪಿಎಂಎಸ್‌ಎಸ್‌ವೈ ಆಸ್ಪತ್ರೆಯನ್ನೂ ಪೂರ್ಣ ಪ್ರಮಾ ಣದ ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಲಾಗಿತ್ತು. ಆಗ ಅಲ್ಲಿನ ವೈದ್ಯಕೀಯ ಸಿಬ್ಬಂದಿಯನ್ನೂ ಕೋವಿಡ್ ಸೇವೆಗೆ ನಿಯೋಜಿಸ ಲಾಗಿತ್ತು.ಆಸ್ಪತ್ರೆಯು 30 ಐಸಿಯು ಹಾಸಿಗೆ, 48 ವೈದ್ಯಕೀಯ ಆಮ್ಲಜನಕ ಸಂಪರ್ಕ ಸಹಿತ ಹಾಸಿಗೆ, 28 ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಗಳನ್ನು ಒಳಗೊಂಡಿದೆ. ಈ ಹಾಸಿಗೆಗಳು ಕೋವಿಡ್ ಚಿಕಿತ್ಸೆಗೆ ಸಹಕಾರಿಯಾಗಿದ್ದವು.

ಜುಲೈನಲ್ಲಿ ಕೋವಿಡ್‌ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿದ್ದಂತೆ ಕೋವಿಡೇತರ ಸೇವೆಗಳನ್ನು ಪ್ರಾರಂಭಿಸ ಲಾಗಿತ್ತು. ಅಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕರಾದ 50 ಮಂದಿ ಸೇರಿದಂತೆ 180 ಶುಶ್ರೂಷಕರು, 100ಕ್ಕೂ ಅಧಿಕ ವೈದ್ಯಕೀಯ ಸಿಬ್ಬಂದಿಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ವೇತನ ಈವರೆಗೂ ಸರ್ಕಾರದಿಂದ ಬಿಡುಗಡೆಯಾಗಿಲ್ಲ. ಯಾವಾಗ ಬಿಡುಗಡೆ ಆಗು ತ್ತದೆ ಎನ್ನುವುದರ ಭರವಸೆಯನ್ನೂ ವೈದ್ಯಕೀಯ ಶಿಕ್ಷಣ ಇಲಾಖೆ ನೀಡಿಲ್ಲ. ಇದರಿಂದಾಗಿ ಅವರು ಗೊಂದಲಕ್ಕೆ ಸಿಲುಕಿದ್ದಾರೆ.

ADVERTISEMENT

ಕುಟುಂಬ ನಿರ್ವಹಣೆ ಸವಾಲು: ‘ಕೋವಿಡ್‌ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಾಗ ಕೆಲ ತಿಂಗಳು ಕೋವಿಡ್ ಸೇವೆಯನ್ನು ಒದಗಿಸಿದ್ದೆವು. ಆಗ ಸರ್ಕಾರವು ನಮ್ಮನ್ನು ಕೋವಿಡ್‌ ಯೋಧರೆಂದು ಕರೆದು, ಭತ್ಯೆಗಳನ್ನು ನೀಡುವುದಾಗಿ ಘೋಷಿಸಿತ್ತು. ಆದರೆ, ಈಗ ತಿಂಗಳ ವೇತನವನ್ನೇ ನೀಡುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಸವಾಲಾಗಿದೆ. ಈ ಬಾರಿ ದೀಪಾವಳಿ ಹಬ್ಬದಲ್ಲಿ ಕೂಡ ಸಂಭ್ರಮ ಇರಲಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆಸ್ಪತ್ರೆಯಶುಶ್ರೂಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ವೇತನ ನೀಡದಿರುವುದರಿಂದ ಮನೆ ಬಾಡಿಗೆ ಕಟ್ಟುವುದೂ ಕಷ್ಟವಾಗಿದೆ. ಏನು ಮಾಡುವುದೆಂದು ತಿಳಿಯದಂತಾಗಿದೆ. ನಮ್ಮ ಆಸ್ಪತ್ರೆ
ಯಲ್ಲಿ ಮಾತ್ರ ಈ ರೀತಿ ಸಮಸ್ಯೆಯಾಗಿದೆ. ಯಾವಾಗ ವೇತನ ಆಗುತ್ತದೆ ಎಂಬುದು ತಿಳಿಯದಾಗಿದೆ’ ಎಂದು ಗುತ್ತಿಗೆ ಆಧಾರದಲ್ಲಿ ನೇಮಕಾರದ ಶುಶ್ರೂಷ ಕರು ತಿಳಿಸಿದರು.

ಹಿಂಬರಹ ನೀಡಿದ ಆಸ್ಪತ್ರೆ
ವೇತನ ಆಗದಿರುವುದಕ್ಕೆ ಕಾರಣ ಕೇಳಿದ ಆಸ್ಪತ್ರೆಯ ನೌಕರರು, ಹಿಂಬರಹ ನೀಡುವಂತೆ ಆಗ್ರಹಿಸಿದ್ದರು. ನೌಕರರ ಒತ್ತಡಕ್ಕೆ ಮಣಿದ ಆಸ್ಪತ್ರೆಯವಿಶೇಷಾಧಕಾರಿ ಹಿಂಬರಹ ನೀಡಿದ್ದು,‘ಇತರೆ ಅನುದಾನದಿಂದ ಆಗಸ್ಟ್ ತಿಂಗಳ ವೇತನವನ್ನು ನೀಡಲಾಗಿದೆ.ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ವೇತನವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಅನುದಾನವು ಆಸ್ಪತ್ರೆ ಖಾತೆಗೆಸರ್ಕಾರದಿಂದ ಬಿಡುಗಡೆಯಾದಲ್ಲಿ ಮಾತ್ರ ಆಯಾ ತಿಂಗಳ ವೇತನವನ್ನು ನೀಡಲಾಗುವುದು’ ಎಂದು ತಿಳಿಸಲಾಗಿದೆ.

‘ಈಗ ಆಸ್ಪತ್ರೆಯಲ್ಲಿ ₹ 20 ಲಕ್ಷ ಅನುದಾನ ಮಾತ್ರ ಉಳಿದಿದೆ.ಕೆಲವು ಆಸ್ಪತ್ರೆಗಳು ಉಳಿದಿದ್ದ ವಿಶೇಷ ಅನುದಾನದಲ್ಲಿ ಸೆಪ್ಟೆಂಬರ್ ತಿಂಗಳ ವೇತನವನ್ನು ಪಾವತಿಸಿವೆ. 4–5 ವರ್ಷಕೊಮ್ಮೆ ಈ ರೀತಿ ಸಮಸ್ಯೆಯಾಗುತ್ತದೆ. ಈ ಮೊದಲು ಮೂರು ತಿಂಗಳಿಗೆ ಅನುದಾನ ಬಿಡುಗಡೆಯಾಗುತ್ತಿದ್ದ ಅನುದಾನ, ಈಗ ಪ್ರತಿ ತಿಂಗಳು ಬಿಡುಗಡೆ ಮಾಡಲಾಗುತ್ತಿತ್ತು. ಶೀಘ್ರದಲ್ಲಿಯೇ ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ವೇತನಕ್ಕೆ ಅನುದಾನ ಬಿಡುಗಡೆಯಾಗುವ ವಿಶ್ವಾಸವಿದೆ’ ಎಂದುಡಾ.ಪಿ.ಜಿ. ಗಿರೀಶ್ ಹೇಳಿದರು.

*
ವೇತನಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದಾಗಿ ವೇತನ ಪಾವತಿ ವಿಳಂಬವಾಗಿದೆ.‌ ಈ ರೀತಿ ಸಮಸ್ಯೆ ಎಲ್ಲ ಕಡೆ ಆಗಿದೆ.
-ಡಾ.ಪಿ.ಜಿ. ಗಿರೀಶ್, ಪಿಎಂಎಸ್‌ಎಸ್‌ವೈ ಆಸ್ಪತ್ರೆ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.