ಬೆಂಗಳೂರು: ಗ್ರಾಹಕರ ವೈಯಕ್ತಿಕ ದಾಖಲೆಗಳನ್ನು ದುರುಪಯೋಗಪಡಿಸಿಕೊಂಡು ಆಕ್ಟಿವೇಟೆಡ್ ಸಿಮ್‌ಕಾರ್ಡ್‌ಗಳನ್ನು ಮಾರುತ್ತಿದ್ದ ಆರೋಪಿ ಮಲ್ಲಿಕಾರ್ಜುನ್ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ಹೊರ ಜಿಲ್ಲೆಯ ಮಲ್ಲಿಕಾರ್ಜುನ್ ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ರಸ್ತೆ ಬದಿಯಲ್ಲಿ ಕೊಡೆ ಹಾಕಿಕೊಂಡು, ಜಿಯೊ ಸಿಮ್‌ಕಾರ್ಡ್ ಮಾರಾಟ ಕೆಲಸ ಆರಂಭಿಸಿದ್ದ. ಈತನಿಂದ 109 ಸಿಮ್‌ಕಾರ್ಡ್ ಹಾಗೂ ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.
‘ಹೊಸ ಸಿಮ್ ಕಾರ್ಡ್ ಖರೀದಿಸಲು ಹಾಗೂ ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಸಿಮ್ ಬದಲಿಸಲು (ಪೋರ್ಟ್) ಆರೋಪಿ ಮಲ್ಲಿಕಾರ್ಜುನ್ ಬಳಿ ಗ್ರಾಹಕರು ಬರುತ್ತಿದ್ದರು. ಆಧಾರ್ ಹಾಗೂ ಇತರೆ ದಾಖಲೆಗಳನ್ನು ಪಡೆಯುತ್ತಿದ್ದ ಆರೋಪಿ, ಗ್ರಾಹಕರ ಭಾವಚಿತ್ರ ಸಹ ಕ್ಲಿಕ್ಕಿಸಿಕೊಳ್ಳುತ್ತಿದ್ದ. ನಂತರ, ಹೊಸ ಸಿಮ್ ಕಾರ್ಡ್ ಕೊಡುತ್ತಿದ್ದ. ಸದ್ಯದಲ್ಲೇ ಆಕ್ಟಿವೇಟ್ ಆಗುವುದಾಗಿ ಹೇಳಿ ಕಳುಹಿಸುತ್ತಿದ್ದ’ ಎಂದು ತಿಳಿಸಿವೆ.
‘ಗ್ರಾಹಕರ ದಾಖಲೆ ಹಾಗೂ ಭಾವಚಿತ್ರ ಬಳಸಿಕೊಂಡು ಬೇರೆ ಸಿಮ್‌ಕಾರ್ಡ್‌ಗಳನ್ನು ಆರೋಪಿ ಆಕ್ಟಿವೇಟ್ ಮಾಡಿಸುತ್ತಿದ್ದ. ನಂತರ, ಅದೇ ಸಿಮ್‌ಕಾರ್ಡ್‌ಗಳನ್ನು ಬೇರೆಯವರಿಗೆ ದುಪ್ಪಟ್ಟು ಬೆಲೆಗೆ ಮಾರುತ್ತಿದ್ದ. ಇದೇ ರೀತಿಯಲ್ಲಿ 200ಕ್ಕೂ ಹೆಚ್ಚು ಸಿಮ್‌ಕಾರ್ಡ್‌ಗಳನ್ನು ಆರೋಪಿ ಮಾರಾಟ ಮಾಡಿರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿವೆ.
ಗ್ರಾಹಕರ ಸೋಗಿನಲ್ಲಿ ಕಾರ್ಯಾಚರಣೆ: ‘ಎಚ್ಎಎಲ್ ಠಾಣೆ ವ್ಯಾಪ್ತಿಯ ಬಸವನಗರದ ಶಾಪಿಂಗ್ ಮಾಲ್ ಎದುರಿನ ಪಾದಚಾರಿ ಮಾರ್ಗದಲ್ಲಿ ಆರೋಪಿ ಸಿಮ್‌ಕಾರ್ಡ್ ಮಾರುತ್ತಿದ್ದ. ಈತನ ಕೃತ್ಯದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಗ್ರಾಹಕರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಲಾಯಿತು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.