ಬೆಂಗಳೂರು: ‘ವಾಹನ, ಜವಳಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಆರ್ಥಿಕ ಹಿಂಜರಿತ ಆವರಿಸಿಕೊಂಡಿದೆ. ನೂರಾರು ಕಟ್ಟಡ ನಿರ್ಮಾಣ ಯೋಜನೆಗಳು ಸ್ಥಗಿತಗೊಂಡಿವೆ. ಕಾಶ್ಮೀರದಲ್ಲಿ ತುರ್ತು ಪರಿಸ್ಥಿತಿ, ಬಾಲಾಕೋಟ್‌ನಲ್ಲಿ ಯುದ್ಧದ ವಾತಾವರಣ ನಿರ್ಮಿಸಿ ಜನರ ಗಮನ ಬೇರೆಡೆ ತಿರುಗಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ’ ಆರ್ಥಿಕ ತಜ್ಞ ಜಿ.ವಿ. ಸುಂದರ್ ಅಭಿಪ್ರಾಯಪಟ್ಟರು.
ಜಯಪ್ರಕಾಶ ನಾರಾಯಣ ಜನ್ಮದಿನದ ಅಂಗವಾಗಿ ಸಮಾಜವಾದಿ ಅಧ್ಯಯನ ಕೇಂದ್ರವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ದೇಶದ ಇಂದಿನ ಆರ್ಥಿಕ ಸಂಕಷ್ಟ ಮತ್ತು ಪರಿಹಾರ’ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.
‘ನೋಟು ರದ್ದತಿ ಪರಿಣಾಮವೇ ಆರ್ಥಿಕ ಹಿಂಜರಿತಕ್ಕೆ ಕಾರಣ. ಇದರಿಂದ ಅಸಂಘಟಿತ ವಲಯದ ಅಭಿವೃದ್ಧಿ ದರ ಶೇ 2ರಷ್ಟು ಕುಸಿತಗೊಂಡಿದೆ. ಜಿಎಸ್‌ಟಿ ಮತ್ತು ರೇರಾ ಕಾನೂನುಗಳು ಅರ್ಥ ವ್ಯವಸ್ಥೆಯನ್ನು ಮತ್ತಷ್ಟು ಹದಗೆಡುವಂತೆ ಮಾಡಿವೆ’ ಎಂದು ವಿಶ್ಲೇಷಿಸಿದರು.
ಹಿರಿಯ ಪತ್ರಕರ್ತ ಶೈಲೇಶ್‌ಚಂದ್ರ ಗುಪ್ತ, ‘ಆರ್ಥಿಕ ಹಿಂಜರಿತದ ಪರಿಣಾಮ ಇನ್ನೂ 3 ವರ್ಷ ಇರಲಿದೆ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗಲೂ ಆರ್ಥಿಕ ಹಿಂಜರಿತ ಆಗಿತ್ತು. ಆದರೆ, ಉದ್ಯೋಗ ನಷ್ಟ ಆಗದಂತೆ ಅವರು ಕ್ರಮ ಕೈಗೊಂಡಿದ್ದರು. ಬೇರೆ ಬೇರೆ ದೇಶಗಳು ಬಂಡವಾಳ ಹೂಡಿದ್ದರಿಂದ ಅದರ ಪರಿಣಾಮ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ’ ಎಂದರು.
‘ಈಗ ಯಾವ ದೇಶವೂ ಬಂಡವಾಳ ಹೂಡುವ ಸ್ಥಿತಿಯಲ್ಲಿ ಇಲ್ಲ. ಅವುಗಳೇ ಸಂಕಷ್ಟಕ್ಕೆ ಸಿಲುಕಿವೆ. ಆರ್ಥಿಕ ಹಿಂಜರಿತದಿಂದ ದೇಶವನ್ನು
ಮೇಲೆತ್ತುವ ಮಾರ್ಗ ಕಂಡುಕೊಳ್ಳುವ ಸಾಮರ್ಥ್ಯವೂ ಈಗಿನ ಸರ್ಕಾರಕ್ಕೆ ಇಲ್ಲ. ಮುಂದಿನ ಮೂರು ವರ್ಷ ದೇಶದಾದ್ಯಂತ ಸಮೃದ್ಧಿಯಾಗಿ ಮಳೆಯಾದರೆ ಮಾತ್ರ ಇದರಿಂದ ದೇಶ ಪಾರಾಗಬಹುದು’ ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತ ರವೀಂದ್ರ ರೇಷ್ಮೆ, ‘ಭ್ರಷ್ಟಾಚಾರ ಹೆಚ್ಚಾಗಿರುವ ಕಾರಣ ರಾಜಕೀಯ ಆರ್ಥಿಕತೆಗೂ, ನಿಜವಾದ ಆರ್ಥಿಕತೆಗೂ ಹೊಂದಾಣಿಕೆ ಆಗುತ್ತಿಲ್ಲ. ರಾಜಕಾರಣಿಗಳ ಆಸ್ತಿ ನೂರು ಪಟ್ಟು, ಸಾವಿರ ಪಟ್ಟು ಜಾಸ್ತಿ ಆಗುತ್ತಲೇ ಇದೆ. ಭ್ರಷ್ಟಾಚಾರ ತಡೆಯಲು ಕೇಂದ್ರ
ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಆರ್ಥಿಕ ಹಿಂಜರಿತವೂ ಸರಿದಾರಿಗೆ ಬರಲಿದೆ’ ಎಂದರು.
ರೈತರ ಸ್ಥಿತಿ ಸುಧಾರಿಸಬೇಕು
‘ಆರ್ಥಿಕ ನೀತಿಗಳಿಂದಾಗಿ ರೈತರು ಸದಾ ಸಂಕಷ್ಟದಲ್ಲೇ ಸಿಲುಕುತ್ತಿದ್ದು, ರೈತರ ಬ್ಯಾಂಕ್ ಸಾಲ ದೇಶದಲ್ಲಿ ₹5 ಲಕ್ಷ ಕೋಟಿ ಇದೆ’ ಎಂದು ರೈತ ಮುಖಂಡ ವೀರಸಂಗಯ್ಯ ಹೇಳಿದರು. ‘ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಔಷಧಿ ಪೂರೈಸುವ ಕಂಪನಿಗಳು ₹23 ಲಕ್ಷ ಕೋಟಿ ಆದಾಯದಲ್ಲಿವೆ. ಪ್ರತಿ 24 ನಿಮಿಷಕ್ಕೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ರೈತರ ಸಮಸ್ಯೆಗಳನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲೇ ಕೇಂದ್ರ ಸರ್ಕಾರ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.