ADVERTISEMENT

ಮರಳ ಕಲಾಕೃತಿಗಳಿಗೆ ಮರುಳಾದ ಕಲಾರಸಿಕರು

ಚಿತ್ರಕಲಾ ಪರಿಷತ್ತಿನಲ್ಲಿ ಡಿ.27ರವರೆಗೆ ಮರಳು ಚಿತ್ರಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 20:39 IST
Last Updated 21 ಡಿಸೆಂಬರ್ 2021, 20:39 IST
ಸಂಗೀತ ಸಂಯೋಜಕ ರಿಕಿ ಕೇಜ್‌ ಹಾಗೂ ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್‌ ಅವರು ಪ್ರದರ್ಶನದಲ್ಲಿದ್ದ ಮರಳು ಕಲೆಯ ಪ್ರಾತ್ಯಕ್ಷಿಕೆಯಲ್ಲಿ ಚಿತ್ರ ಮೂಡಿಸಿದರು. ರಾಘವೇಂದ್ರ ಹೆಗಡೆ ಇದ್ದಾರೆ –ಪ್ರಜಾವಾಣಿ ಚಿತ್ರ
ಸಂಗೀತ ಸಂಯೋಜಕ ರಿಕಿ ಕೇಜ್‌ ಹಾಗೂ ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್‌ ಅವರು ಪ್ರದರ್ಶನದಲ್ಲಿದ್ದ ಮರಳು ಕಲೆಯ ಪ್ರಾತ್ಯಕ್ಷಿಕೆಯಲ್ಲಿ ಚಿತ್ರ ಮೂಡಿಸಿದರು. ರಾಘವೇಂದ್ರ ಹೆಗಡೆ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಮರಳಿನಲ್ಲೇ ಅರಳಿದ ಕಲಾಕೃತಿಗಳವು. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗ್ಯಾಲರಿ ಗೋಡೆಗಳನ್ನು ಅಲಂಕರಿಸಿದ್ದ ಈ ಕಲಾಕೃತಿಗಳ ಸೊಬಗು ಕಂಡು ಕಲಾ‍ರಸಿಕರು ಮರುಳಾಗಿ ಹೋದರು.

ಚಿಣ್ಣರು ಮರಳಿನಲ್ಲಿ ಬೆರಳಾಡಿಸಿದಾಗ ಡಿಜಿಟಲ್‌‍ಪರದೆಯಲ್ಲಿ ಚಿತ್ತಾರಗಳು ಮೂಡುತ್ತಿದ್ದವು. ಇದರ ಹಿಂದಿನ ಮರ್ಮ ಅರಿಯದ ಎಳೆಯರು ಮರಳಿನಲ್ಲಿ ಆಟವಾಡುತ್ತಿದ್ದೇವೆ ಎಂದೇ ಭಾವಿಸಿದ್ದರು. ಕಲಾವಿದ ರಾಘವೇಂದ್ರ ಹೆಗಡೆ ಅವರು ರಚಿಸಿರುವ ಮರಳು ಚಿತ್ರಗಳ ಪ್ರದರ್ಶನ ‘ಸ್ಯಾಂಡ್ ಆಫ್ ಟೈಮ್’ ಉದ್ಘಾಟನಾ ಕಾರ್ಯಕ್ರಮ ಚಿಣ್ಣರ ಪಾಲಿಗೆ ಮುಂದೆ ಸೋಜಿಗದ ಲೋಕವನ್ನು ತೆರೆದಿಟ್ಟಿತು.

ಮರಳು ಕಲಾಕೃತಿಗಳ ಪ್ರದರ್ಶನವನ್ನು ಸೋಮವಾರ ಉದ್ಘಾಟಿಸಿದ ಸಂಗೀತ ಸಂಯೋಜಕ ಹಾಗೂ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್‌, ‘ಮರಳಿನಲ್ಲಿ ವೈವಿಧ್ಯಮಯ ಕಲಾಕೃತಿಗಳನ್ನುರಾಘವೇಂದ್ರ ಅದ್ಭುತವಾಗಿ ಮೂಡಿಸಿದ್ದಾರೆ. ಮರಳಿನ ಚಿತ್ರಗಳಿಂದ ಮೂಕವಿಸ್ಮಿತನಾಗಿದ್ದೇನೆ. ಪ್ರದರ್ಶನವನ್ನು ಹೆಚ್ಚಿನ ಜನ ವೀಕ್ಷಿಸುವ ಮೂಲಕ ಚಿತ್ರಗಳನ್ನು ಆನಂದಿಸಲಿ’ ಎಂದು ಶುಭಹಾರೈಸಿದರು.

ADVERTISEMENT

‘ಬಹುಶಃ ಮರಳು ಕಲಾಕೃತಿಗಳು ಪ್ರದರ್ಶನದ ಗ್ಯಾಲರಿಗೆ ಬಂದಿರುವುದು ಇದೇ ಮೊದಲು. ಇವುಗಳನ್ನು ರಚಿಸಲು ಲಾಕ್‌ಡೌನ್‌ ವರವಾಯಿತು. ಇಲ್ಲಿ ಪ್ರದರ್ಶನಗೊಂಡಿರುವ ಎಲ್ಲ ಕಲಾಕೃತಿಗಳನ್ನು ಕೇವಲ ಒಂದು ಹಿಡಿ ಮರಳಿನಿಂದ ರಚಿಸಲಾಗಿದೆ. ಪ್ರತಿ ಚಿತ್ರವನ್ನು ಸೆರೆ ಹಿಡಿದು, ಅದಕ್ಕೆ ಛಾಯಾಚಿತ್ರದ ರೂಪ ನೀಡಿ ಪ್ರದರ್ಶಿಸಿದ್ದೇನೆ’ ಎಂದು ಚಿತ್ರ ಕಲಾವಿದ ರಾಘವೇಂದ್ರ ಹೆಗಡೆ ವಿವರಿಸಿದರು.

‘ಸುಮಾರು 120 ಮರಳಿನ ಚಿತ್ರಗಳನ್ನು ಗ್ಯಾಲರಿಯಲ್ಲಿ ಪ್ರದರ್ಶಿಸಲಾಗಿದೆ.ಮಹಾತ್ಮ ಗಾಂಧೀಜಿ, ಪ್ರಧಾನಿ ನರೇಂದ್ರ ಮೋದಿ, ರವೀಂದ್ರನಾಥ ಠ್ಯಾಗೋರ್, ಕಲಾವಿದರಾದ ಪಿಕಾಸೊ, ಲಿಯೊನಾರ್ಡೊ ಡಾವಿಂಚಿ, ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವಲ್ಲಭಭಾಯಿ ಪಟೇಲ್, ಕ್ರಿಕೆಟಿಗ ವಿರಾಟ್‌ ಕೊಹ್ಲಿ, ಗೂಗಲ್ ಸಿಇಒಸುಂದರ್ ಪಿಚೈ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳ ಭಾವಚಿತ್ರಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ಮೂರ್ತ ಮತ್ತು ಅಮೂತ್ರ ಚಿತ್ರಗಳೆರಡೂ ಇದ್ದು, ಕೆಲವು ಚಿತ್ರಗಳಿಗೆ ಶೀರ್ಷಿಕೆ ನೀಡುವುದು ಅಸಾಧ್ಯ’ ಎಂದರು.

ನೀವೂ ರಚಿಸಿ ಮರಳು ಚಿತ್ರ
‘ಡಿ.27ರವರೆಗೆ ಬೆಳಿಗ್ಗೆ 10ರಿಂದ ಸಂಜೆ 7.30ರವರೆಗೆ ಪ್ರದರ್ಶನ ಇರಲಿದೆ. ಮರಳು ಕಲೆಯ ಮಾಹಿತಿಯನ್ನು ಜನರಿಗೆ ತಿಳಿಸಲು ಮರಳು ಚಿತ್ರಕಲೆಯ ತಾಂತ್ರಿಕತೆ ಹಾಗೂ ಅಗತ್ಯ ಪರಿಕರಗಳನ್ನೂಪ್ರದರ್ಶನದಲ್ಲಿ ಇರಿಸಿದ್ದೇವೆ. ಪ್ರದರ್ಶನ ವೀಕ್ಷಿಸಲು ಬರುವವರು ಮರಳಿನಲ್ಲಿ ತಮ್ಮಿಷ್ಟದಂತೆ ಚಿತ್ರಗಳನ್ನು ರಚಿಸಬಹುದು. ಮರಳಿನಲ್ಲಿ ಮೂಡುವ ಚಿತ್ರಗಳು ಡಿಜಿಟಲ್ ಪರದೆಯ ಮೇಲೆ ಪ್ರದರ್ಶನಗೊಳ್ಳಲಿದೆ’ ಎಂದು ರಾಘವೇಂದ್ರ ತಿಳಿಸಿದರು.

ಪ್ರದರ್ಶನದಲ್ಲಿರುವ ಮರಳಿನ ಕಲಾಕೃತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.