ಬೆಂಗಳೂರು: ಹಾಲಿನ ವಾಹನ ಡಿಕ್ಕಿ ಹೊಡೆದು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಭಾವಚಿತ್ರವಿದ್ದ ನಾಮಫಲಕಕ್ಕೆ ಹಾನಿಯಾಗಿದೆ.
ಯಲಹಂಕದ ಫೆಡರಲ್ ಮೊಗಲ್ ಕಾರ್ಖಾನೆ ಬಳಿ ಇತ್ತೀಚೆಗೆ ಘಟನೆ ಸಂಭವಿಸಿದೆ.
ಬ್ರೇಕ್ ವೈಫಲ್ಯದಿಂದ ವಾಹನ ನಿಯಂತ್ರಣ ಕಳೆದುಕೊಂಡು ಫಲಕಕ್ಕೆ ಡಿಕ್ಕಿ ಹೊಡೆದಿದೆ.ಈ ಸಂದರ್ಭದಲ್ಲಿ ಬೆಂಗಳೂರು ಜಲಮಂಡಳಿ ಕಚೇರಿಯ ಸಿಬ್ಬಂದಿ ಹಾಗೂ ಸ್ಥಳದಲ್ಲಿದ್ದ ಸಾರ್ವಜನಿಕರು ಚಾಲಕನನ್ನು ಹಿಡಿದು ವಾಹನದ ಸಮೇತ ಬಿಬಿಎಂಪಿ ಅಧಿಕಾರಿಗಳಿಗೆ ಒಪ್ಪಿಸಿದರು.
ನಂತರ ಸ್ಥಳೀಯ ಮುಖಂಡರ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆಯಿತು. ಫಲಕವನ್ನು ಇನ್ನೂ ಚೆನ್ನಾಗಿ ಮರು ನಿರ್ಮಾಣ ಮಾಡಿಕೊಡುವುದಾಗಿ ವಾಹನದ ಮಾಲೀಕರು ಒಪ್ಪಿಕೊಂಡರು. ಅದರಂತೆ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಬಿಬಿಎಂಪಿ ಯಲಹಂಕ ಉಪನಗರ ವಾರ್ಡ್‌ನ ಸಹಾಯಕ ಎಂಜಿನಿಯರ್ ರಾಮ ಸಂಜೀವಯ್ಯ ತಿಳಿಸಿದರು.
ಈ ನಡುವೆ ಕೆಲವು ಕಿಡಿಗೇಡಿಗಳು, ನಾಮಫಲಕವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂಬ ಸುಳ್ಳು ವದಂತಿ ಹಬ್ಬಿಸಿದರು. ಘಟನೆ ಅಲ್ಲಲ್ಲಿ ತೀವ್ರ ಚರ್ಚೆಗೊಳಗಾಯಿತು. ‘ನಾಮಫಲಕವನ್ನು ಧ್ವಂಸಗೊಳಿಸಿರುವುದು ಖಂಡನೀಯ. ಕೂಡಲೇ ನಾಮಫಲಕವನ್ನು ಪುನರ್ ಸ್ಥಾಪಿಸಬೇಕು’ ಎಂದು ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ತಮ್ಮ ಟ್ವಿಟರ್‌ನಲ್ಲಿ ಒತ್ತಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.