ADVERTISEMENT

‘ಸಂಘ ಶರಣ’ನಿಗೆ ಬಿಬಿಎಂಪಿ ಚುಕ್ಕಾಣಿ, ಗೌತಮ್‌ ನೂತನ ಮೇಯರ್‌

ಐದನೇ ಅವಧಿಗೆ ಅಧಿಕಾರಕ್ಕೆ ಬಂದ ಬಿಜೆಪಿ *ರಾಮಮೋಹನ ರಾಜು ಉಪಮೇಯರ್‌

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 20:21 IST
Last Updated 1 ಅಕ್ಟೋಬರ್ 2019, 20:21 IST
ನೂತನ ಮೇಯರ್‌ ಎಂ. ಗೌತಮ್‌ ಕುಮಾರ್‌ ಹಾಗೂ ಉಪಮೇಯರ್‌ ಸಿ.ಕೆ.ರಾಮಮೋಹನರಾಜು ಗೆಲುವಿನ ಸಂಕೇತ ಪ್ರದರ್ಶಿಸಿದರು– ಪ್ರಜಾವಾಣಿ ಚಿತ್ರ
ನೂತನ ಮೇಯರ್‌ ಎಂ. ಗೌತಮ್‌ ಕುಮಾರ್‌ ಹಾಗೂ ಉಪಮೇಯರ್‌ ಸಿ.ಕೆ.ರಾಮಮೋಹನರಾಜು ಗೆಲುವಿನ ಸಂಕೇತ ಪ್ರದರ್ಶಿಸಿದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಿಬಿಎಂಪಿಯ ಈ ಅವಧಿಯಲ್ಲಿ ಮೊದಲ ನಾಲ್ಕು ವರ್ಷ ಅಧಿಕಾರದಿಂದ ವಂಚಿತವಾಗಿದ್ದ ಬಿಜೆಪಿ ಐದನೇ ವರ್ಷ ಪಾಲಿಕೆ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಸಂಘ ಪರಿವಾರದ ನಿಷ್ಠಾವಂತ ಸದಸ್ಯ, ಬಿಜೆಪಿಯ ಎಂ.ಗೌತಮ್ ಕುಮಾರ್‌ ನಗರದ 53ನೇ ಮೇಯರ್‌ ಆಗಿ ಮಂಗಳವಾರ ಆಯ್ಕೆಯಾದರು.

ಉಪಮೇಯರ್ ಆಗಿ ಬೊಮ್ಮನಹಳ್ಳಿ ವಾರ್ಡ್‌ ಸದಸ್ಯ, ಬಿಜೆಪಿಯ ರಾಮಮೋಹನ ರಾಜು ಆಯ್ಕೆಯಾದರು.

ಎಂಟು ಮತದಾರರು ಗೈರಾಗಿದ್ದರಿಂದ ಕೌನ್ಸಿಲ್‌ ಸಭೆಯ ಒಟ್ಟು ಸಂಖ್ಯಾಬಲ 257ರಿಂದ 249ಕ್ಕೆ ಕುಸಿದಿತ್ತು. ಹಾಗಾಗಿ, ಅಭ್ಯರ್ಥಿಯ ಗೆಲುವಿಗೆ 125 ಮತಗಳ ಅಗತ್ಯವಿತ್ತು.

ADVERTISEMENT

ಜೋಗುಪಾಳ್ಯ ವಾರ್ಡ್‌ನ ಸದಸ್ಯ ಗೌತಮ್‌ ಅವರು ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಆರ್‌.ಎಸ್‌.ಸತ್ಯನಾರಾಯಣ ಅವರನ್ನು 19 ಮತಗಳ ಅಂತರದಿಂದ ಸೋಲಿಸಿದರು. ಗೌತಮ್‌ ಪರ 129 ಹಾಗೂ ವಿರುದ್ಧವಾಗಿ 110 ಮತಗಳು ಚಲಾವಣೆಯಾದವು. ಸತ್ಯನಾರಾಯಣ ಪರ 112 ಮತ ಹಾಗೂ ವಿರುದ್ಧವಾಗಿ 129 ಮತಗಳು ಚಲಾವಣೆಯಾದವು.

ಉಪಮೇಯರ್‌ ಚುನಾವಣೆಯುಲ್ಲಿ ರಾಮಮೊಹನ್‌ ರಾಜು ಪರ 129 ಹಾಗೂ ವಿರುದ್ಧವಾಗಿ 108 ಮತಗಳು ಚಲಾವಣೆಯಾದವು. ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ಶಕ್ತಿ ಗಣಪತಿನಗರವಾರ್ಡ್‌ ಸದಸ್ಯೆ, ಜೆಡಿಎಸ್‌ನ ಗಂಗಮ್ಮ ಪರವಾಗಿ 116 ಹಾಗೂ ವಿರುದ್ಧವಾಗಿ 129 ಮತಗಳು ಚಲಾವಣೆಯಾದವು.

ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಗೌತಮ್‌ ಕುಮಾರ್‌ ಅವರ ಜೊತೆ ಪದ್ಮನಾಭ ರೆಡ್ಡಿ ಅವರೂ ನಾಮಪತ್ರ ಸಲ್ಲಿಸಿದ್ದರು. ಅವರು ನಾಮಪತ್ರವನ್ನು ಹಿಂದಕ್ಕೆ ಪಡೆಯುವವರೆಗೂ ರೆಡ್ಡಿ ಹಾಗೂ ಗೌತಮ್‌ ಅವರಲ್ಲಿ ಮೇಯರ್‌ ಯಾರಾಗುತ್ತಾರೆ ಎಂಬ ಕುತೂಹಲ ಮನೆ ಮಾಡಿತ್ತು.

ಉಪ ಮೇಯರ್‌ ಸ್ಥಾನಕ್ಕೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಹೊಸಹಳ್ಳಿ ವಾರ್ಡ್‌ ಸದಸ್ಯೆ ಮಹಾಲಕ್ಷ್ಮೀ ಎಚ್‌.ರವೀಂದ್ರ ಹಾಗೂ ಎಚ್‌.ಎಸ್‌.ಆರ್‌ ಬಡಾವಣೆ ವಾರ್ಡ್‌ನ ಗುರುಮೂರ್ತಿ ರೆಡ್ಡಿ ಅವರು ಕೊನೆ ಕ್ಷಣದಲ್ಲಿ ಉಮೇದುವಾರಿಕೆ ಹಿಂದಕ್ಕೆ ಪಡೆದರು.

ಎಂಟು ಮಂದಿ ಗೈರು

ಮತದಾನದ ಹಕ್ಕು ಹೊಂದಿದ್ದ ಎಂಟು ಮಂದಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಕೌನ್ಸಿಲ್‌ ಸಭಾಂಗಣದಲ್ಲಿ ಕಾಣಿಸಿಕೊಂಡ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ (ಜೆಡಿಎಸ್‌) ಅವರು ಮತದಾನ ಪ್ರಕ್ರಿಯೆ ಆರಂಭವಾಗುವುದಕ್ಕೆ ಮೊದಲು ನಿರ್ಗಮಿಸಿದರು.

ಗೈರಾದವರು: ನಿರ್ಮಲಾ ಸೀತಾರಾಮನ್‌ (ರಾಜ್ಯಸಭಾ ಸದಸ್ಯೆ– ಬಿಜೆಪಿ), ಡಿ.ಕೆ.ಸುರೇಶ್‌ (ಲೋಕಸಭಾ ಸದಸ್ಯ– ಕಾಂಗ್ರೆಸ್‌), ಜೈರಾಂ ರಮೇಶ್‌ (ರಾಜ್ಯಸಭಾ ಸದಸ್ಯ– ಕಾಂಗ್ರೆಸ್), ಕೆ.ಸಿ.ರಾಮಮೂರ್ತಿ– (ರಾಜ್ಯಸಭಾ ಸದಸ್ಯ– ಕಾಂಗ್ರೆಸ್‌), ರಘು ಆಚಾರ್‌ (ವಿಧಾನ ಪರಿಷತ್ ಸದಸ್ಯ– ಕಾಂಗ್ರೆಸ್‌), ಕೆ.ವಿ.ನಾರಾಯಣಸ್ವಾಮಿ (ವಿಧಾನ ಪರಿಷತ್‌ ಸದಸ್ಯ– ಜೆಡಿಎಸ್‌), ಪುಟ್ಟಣ್ಣ (ವಿಧಾನ ಪರಿಷತ್‌ ಸದಸ್ಯ– ಜೆಡಿಎಸ್‌), ಆರ್‌.ಮಂಜುನಾಥ (ಶಾಸಕ– ಜೆಡಿಎಸ್‌).

ಪಕ್ಷಗಳ ಬಲಾಬಲ (ಸದನದಲ್ಲಿ ಹಾಜರಿದ್ದವರು)

ಬಿಜೆಪಿ; 124

ಕಾಂಗ್ರೆಸ್‌; 100

ಜೆಡಿಎಸ್‌; 18

ಎಸ್‌ಡಿಪಿಐ; 1

ಪಕ್ಷೇತರರು; 6

ಅನರ್ಹ ಶಾಸಕ ಮುನಿರತ್ನ ಬೆಂಬಲಿಗರಾಗಿರುವ ಪಾಲಿಕೆ ಸದಸ್ಯ ಜಿ.ಕೆ.ವೆಂಕಟೇಶ್‌ ಅವರು ಮತ ಚಲಾಯಿಸುತ್ತಿರುವುದನ್ನು ಪಾಲಿಕೆಯ ಕಾಂಗ್ರೆಸ್‌ ಸದಸ್ಯ ಅಬ್ದುಲ್‌ ವಾಜಿದ್‌ ಮೊಬೈಲ್‌ನಲ್ಲಿ ಸೆರೆ ಹಿಡಿದರು– ಪ್ರಜಾವಾಣಿ ಚಿತ್ರ

ಕೈ ಕೊಟ್ಟ ಆರು ಮಂದಿ ಯಾರು?

ಆರು ಪಕ್ಷೇತರರ ಪೈಕಿ ಐವರು (ಎನ್‌.ರಮೇಶ್‌, ಎಂ.ಚಂದ್ರಪ್ಪ ರೆಡ್ಡಿ, ಎಂ.ಗಾಯತ್ರಿ, ಸಿ.ಆರ್‌.ಲಕ್ಷ್ಮೀನಾರಾಯಣ, ಮಮತಾ ಸರವಣ) ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದ್ದರೆ, ಎಸ್‌.ಆನಂದಕುಮಾರ್ ಅವರು ಮೈತ್ರಿಕೂಟದ ಪರ ನಿಂತರು. ಎಸ್‌ಡಿಪಿಐ ಸದಸ್ಯ ಮುಜಾಹಿದ್‌ ಪಾಷಾ ಅವರೂ ಮೈತ್ರಿಕೂಟವನ್ನು ಬೆಂಬಲಿಸಿದರು. ಹಾಜರಾತಿ ಪಡೆಯುವ ವೇಳೆ ಉಪಸ್ಥಿತರಿದ್ದ ಜೆಡಿಎಸ್‌ ಸದಸ್ಯರಾದ ಮಂಜುಳಾ ನಾರಾಯಣಸ್ವಾಮಿ ಹಾಗೂ ಕೆ.ದೇವದಾಸ ಅವರು ಮತದಾನದ ವೇಳೆ ಹೊರ ನಡೆದರು.

ಅನರ್ಹ ಶಾಸಕರ ಬೆಂಬಲಿಗ ಕಾರ್ಪೊರೇಟರ್‌ಗಳು ಹಾಜರಾಗಿ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿಯೇ ಕೈ ಎತ್ತಿ ಮತ ಚಲಾಯಿಸಿದರು.

ಈ ಲೆಕ್ಕಾಚಾರದ ಪ್ರಕಾರ ಮೇಯರ್‌ ಸ್ಥಾನಕ್ಕೆ ಮೈತ್ರಿಕೂಟದ ಅಭ್ಯರ್ಥಿ ಸತ್ಯನಾರಾಯಣ ಅವರಿಗೆ 118 ಮತಗಳು ಸಿಗಬೇಕಿತ್ತು. ಆದರೆ, ಮೈತ್ರಿಕೂಟದ ಅಭ್ಯರ್ಥಿಗೆ ದಕ್ಕಿದ್ದು 112 ಮತಗಳು ಮಾತ್ರ. ಮತದಾನದ ವೇಲೆ ಕೈ ಎತ್ತಿ ನಿಗದಿತ ನಮೂನೆಯಲ್ಲಿ ಸಹಿ ಹಾಕಿದವರ ಮತವನ್ನು ಮಾತ್ರ ಎಣಿಕೆಗೆ ಪರಿಗಣಿಸಲಾಗುತ್ತದೆ. ಮತದಾನದ ವೇಳೆ ಕೈ ಎತ್ತಿ ಸಹಿ ಹಾಕದೇ ಮೈತ್ರಿಕೂಟದ ಅಭ್ಯರ್ಥಿಗೆ ಕೈಕೊಟ್ಟ ಆರು ಮಂದಿ ಯಾರು ಎಂಬುದು ನಿಗೂಢವಾಗಿಯೇ ಉಳಿದಿದೆ.

ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ

ಪಾಲಿಕೆಯ 12 ಸ್ಥಾಯಿ ಸಮಿತಿಗಳ ಚುನಾವಣೆಯನ್ನು ಅ.1ರಂದು ನಡೆಸಲು ಚುನಾವಣಾಧಿಕಾರಿ ತೀರ್ಮಾನಿಸಿದ್ದರು. ಆದರೆ, ಈ ಸಮಿತಿಗಳಿಗೆ ಡಿ. 4ರವರೆಗೆ ಅಧಿಕಾರದ ಅವಧಿ ಇತ್ತು. ಅವಧಿಗೆ ಮುನ್ನ ಚುನಾವಣೆ ನಡೆಸುತ್ತಿರುವುದನ್ನು ಪ್ರಶ್ನಿಸಿ ಎಂಟು ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಸಮಿತಿಗಳಿಗೆ ಅ.1ರಂದು ಚುನಾವಣೆ ನಡೆಸದಂತೆ ಹೈ ಕೋರ್ಟ್‌ ಆದೇಶ ಮಾಡಿದ್ದತು. ಹಾಗಾಗಿ, ಹೈಕೋರ್ಟ್‌ ಮೊರೆ ಹೋಗದ ನಾಲ್ಕು ಸ್ಥಾಯಿ ಸಮಿತಿಗಳಿಗೆ ಅ.1ರಂದು ಚುನಾವಣೆ ನಡೆಸಲು ಚುನಾವಣಾಧಿಕಾರಿ ತೀರ್ಮಾನಿಸಿದ್ದರು. ಆದರೆ, ಯಾವುದೇ ನಾಮಪತ್ರ ಸಲ್ಲಿಕೆ ಆಗದ ಕಾರಣ 4 ಸ್ಥಾಯಿ ಸಮಿತಿ ಚುನಾವಣೆಯನ್ನು ಚುನಾವಣಾಧಿಕಾರಿ ಹರ್ಷಗುಪ್ತ ಮುಂದೂಡಿದರು.

ನಾಲ್ಕು ಸ್ಥಾಯಿ ಸಮಿತಿಗಳಿಗೆ ಇಂದು ಚುನಾವಣೆ ನಡೆಸಲು ಮುಂದಾಗಿದ್ದಕ್ಕೆ ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷ ವೇಲು ನಾಯ್ಕರ್‌ ಆಕ್ಷೇಪ ವ್ಯಕ್ತಪಡಿಸಿದರು.

ಚುನಾವಣೆ ಮುಂದೂಡಲು ಒಪ್ಪದ ಹರ್ಷಗುಪ್ತ

‘ಕೆ.ಎಂ.ಸಿ ಕಾಯ್ದೆ ಪ್ರಕಾರ ಮತದಾನ ಸೆಪ್ಟೆಂಬರ್ ತಿಂಗಳಲ್ಲೇ ನಡೆಸಬೇಕಿತ್ತು. ಅಕ್ಟೋಬರ್‌ನಲ್ಲಿ ಚುನಾವಣೆ ನಡೆಸುತ್ತಿರುವುದು ಸರಿಯಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಕಾಂಗ್ರೆಸ್‌ನ ಪಿ.ಆರ್‌.ರಮೇಶ್‌ ಕ್ರಿಯಾಲೋಪ ಎತ್ತಿದರು.

ಇನ್ನೊಂದೆಡೆ, ಜೆಡಿಎಸ್‌ನ ವಿಧಾನ ಪರಿಷತ್‌ ಸದಸ್ಯರಾದ ರಮೇಶ್‌ ಗೌಡ ಹಾಗೂ ಟಿ.ಎ.ಶರವಣ ಅವರೂ ಚುನಾವಣೆ ಮುಂದೂಡಬೇಕು ಎಮದು ಒತ್ತಾಯಿಸಿದರು. ಇದಕ್ಕೆ ಸೊಪ್ಪು ಹಾಕದ ಚುನಾವಣಾಧಿಕಾರಿ ಹರ್ಷ ಗುಪ್ತ, ‘ಈ ಸಭೆ ಚುನಾವಣೆಗೆ ಸೀಮಿತ. ಅನ್ಯ ವಿಚಾರ ಪ್ರಸ್ತಾಪಿಸಲು ಅವಕಾಶ ಇಲ್ಲ’ ಎಂದು ಸ್ಪಷ್ಟಪಡಿಸಿ ಮತದಾನದ ಪ್ರಕ್ರಿಯೆ ಮುಂದುವರಿಸಿದರು.

ಬಿ.ಕಾಂ ಪದವೀಧರ
ಗೌತಮ್‌ ಕುಮಾರ್‌ ಮೇಯರ್‌ ಆಗುವ ಮೂಲಕ ಬೆಂಗಳೂರು ಕೇಂದ್ರ ಭಾಗಕ್ಕೆ ಬಿಜೆಪಿಯಿಂದ ಇದೇ ಮೊದಲ ಬಾರಿಗೆ ನಗರದ ಪ್ರಥಮ ಪ್ರಜೆಯ ಸ್ಥಾನ ದೊರಕಿದಂತಾಗಿದೆ.

ಜೋಗುಪಾಳ್ಯ ವಾರ್ಡ್ ಸಂಖ್ಯೆ 89ರ ಸದಸ್ಯರಾದ ಅವರು ಬಿ.ಕಾಂ ಪದವೀಧರ. ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಯಾಗಿ ಅವರು ಕಾರ್ಯನಿರ್ವಹಿಸಿದ್ದಾರೆ.

ಶಾಂತಿನಗರದ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯದರ್ಶಿಯಾಗಿ ನಾಲ್ಕು ವರ್ಷ ಕೆಲಸ ಮಾಡಿರುವ ಅವರು, ರಾಜ್ಯ ಯುವ ಮೋರ್ಚಾದ ಖಜಾಂಚಿಯಾಗಿ ಮೂರು ವರ್ಷ ಕಾರ್ಯನಿರ್ವಹಿಸಿದ್ದಾರೆ.

ಬಿಜೆಪಿ ಬೆಂಗಳೂರು ಘಟಕದ ಕಾರ್ಯದರ್ಶಿಯಾಗಿದ್ದ ಗೌತಮ್, 2013-14ರಲ್ಲಿ ಬಿಬಿಎಂಪಿ ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದರು.

ಗೌತಮ್‌ ಜನಿಸಿದ್ದು 1976ರ ಅಕ್ಟೋಬರ್ 10ರಂದು. ತಂದೆಯ ಹೆಸರು ಮದನ್‌ ಲಾಲ್‌. ಪತ್ನಿ ಹೆಸರು ರೇಖಾ. ದಂಪತಿಗೆ ತನಿಷಾ ಮತ್ತು ಹರ್ಷ ಹೆಸರಿನ ಇಬ್ಬರು ಮಕ್ಕಳು.

ಬೊಮ್ಮನಹಳ್ಳಿ ವಾರ್ಡ್‌ಗೆ ಉಪಮೇಯರ್‌ ಪಟ್ಟ

ಬೊಮ್ಮನಹಳ್ಳಿ ವಾರ್ಡ್‌ ಸಂಖ್ಯೆ 175ರ ಸದಸ್ಯರಾಗಿರುವ ರಾಮ್‌ಮೋಹನ್‌ ರಾಜು ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿದ್ದಾರೆ.

1972ರ ನವೆಂಬರ್‌ 1ರಂದು ಜನಿಸಿರುವ ರಾಮ್‌ಮೋಹನ್‌, ಲಕ್ಷ್ಮಮ್ಮ–ಚೆಂಗಮ ರಾಜು ದಂಪತಿಯ ಪುತ್ರ. ಜೆ.ಪಿ ನಗರದ ಕೆ.ಆರ್. ಲೇಔಟ್‌ನಲ್ಲಿ ವಾಸವಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.