ಬೆಂಗಳೂರು: ‘ಬಿ.ಎಸ್. ಯಡಿಯೂರಪ್ಪ ಅವರಂತೆಯೇ ಶಾಸಕ ಕೆ.ಎಸ್. ಈಶ್ವರಪ್ಪ ಕೂಡ ರಾಜ್ಯದಲ್ಲಿ ಬಿಜೆಪಿಯನ್ನು ಬೇರುಮಟ್ಟದಿಂದ ಸಂಘಟಿಸಿದ್ದಾರೆ. ಮೂರು ದಶಕದಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರನ್ನು ಉಪಮುಖ್ಯಮಂತ್ರಿಯಾಗಿ ಮಾಡಬೇಕು’ ಎಂದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ವೀರೇಶ್ ಉಂಡೋಡಿ ಒತ್ತಾಯಿಸಿದ್ದಾರೆ.
‘2008ರಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಡಿಯೂರಪ್ಪನವರಷ್ಟೇ ಈಶ್ವರಪ್ಪ ಕೂಡ ಶ್ರಮಿಸಿದ್ದಾರೆ. ಪಕ್ಷದ ಸಂಘಟನೆಗೆ ಅವರು ಪಟ್ಟಿರುವ ಶ್ರಮವನ್ನು, ಯಡಿಯೂರಪ್ಪನವರೇ ತಮ್ಮ ವಿದಾಯ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಶೇ 55ರಷ್ಟಿರುವ ಹಿಂದುಳಿದ ವರ್ಗಗಳ ನಾಯಕರಾಗಿರುವ ಅವರಿಗೆ ಬಿಜೆಪಿಯು ಸೂಕ್ತ ಸ್ಥಾನ–ಮಾನ ನೀಡಬೇಕು’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.
‘ಕಳೆದ ಬಾರಿ ಯಡಿಯೂರಪ್ಪನವರ ನಂತರ ಸದಾನಂದಗೌಡ, ಜಗದೀಶ ಶೆಟ್ಟರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು. ಈಶ್ವರಪ್ಪನವರ ಅರ್ಹತೆಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನೇ ನೀಡಬೇಕಾಗಿತ್ತು. ಆದರೆ, ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಅವರಿಗೆ ಈ ಸ್ಥಾನ ನೀಡಲಾಗಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಕುರುಬ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಲು ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನಾದರೂ ನೀಡಬೇಕು’ ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.