ಬೆಂಗಳೂರು: ಥಣಿಸಂದ್ರ ಸಮೀಪದ ಹೆಗಡೆ ನಗರದ ರಾಯಲ್ ಬ್ಲಿಸ್ ಅಪಾರ್ಟ್‌ಮೆಂಟ್‌ನ ಒಳಚರಂಡಿ ಕೊಳವೆಯನ್ನು ಕಾವೇರಿ 5 ನೇ ಹಂತದ ಪೈಪ್‌ಲೈನ್‌ಗೆ ಸಂಪರ್ಕ ನೀಡಿದ್ದ ಕಟ್ಟಡ ಮಾಲೀಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಜಲಮಂಡಳಿ ನಿರ್ಧರಿಸಿದೆ.
ಒಳಚರಂಡಿ ಸಂಪರ್ಕವನ್ನು ಕಾವೇರಿ ನೀರು ಪೂರೈಕೆಯ ಕೊಳವೆಗೆ ಸಂಪರ್ಕ ಕಲ್ಪಿಸಿದ್ದರಿಂದ, ನೀರು ಸರಬರಾಜು ಕೊಳವೆಗೆ ಹಾನಿಯಾಗಿ ಅಕ್ಕಪಕ್ಕದ ಮನೆಯವರಿಗೆ ನಷ್ಟ ಉಂಟಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್ ಮನೋಹರ್ ಅವರು ಕಟ್ಟಡ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ, ಜಲಮಂಡಳಿ ಹಾಗೂ ಅಕ್ಕಪಕ್ಕದ ಜನರಿಗೆ ಆಗಿರುವ ಆರ್ಥಿಕ ನಷ್ಟವನ್ನು ಕಟ್ಟಡ ಮಾಲೀಕರಿಂದ ತುಂಬಿಸಿಕೊಳ್ಳುವಂತೆಯೂ ಆದೇಶಿಸಿದ್ದಾರೆ.
ಘಟನೆ: ಹೆಗಡೆ ನಗರದಲ್ಲಿ ಕಾವೇರಿ ನೀರು ಪೂರೈಸುವ ಕೊಳವೆಯಿಂದ ರಭಸವಾಗಿ ನೀರು ಹೊರ ಹರಿದು, ಅಕ್ಕಪಕ್ಕದ ಮನೆಗಳಿಗೆ ಹಾನಿಯುಂಟಾಗುತ್ತಿದೆ ಎಂದು ಜಲಮಂಡಳಿಗೆ ದೂರು ಬಂದಿತ್ತು. ಜಲಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು. ಆಗ, ರಾಯಲ್ ಬ್ಲಿಸ್ ಅಪಾರ್ಟ್‌ಮೆಂಟ್‌ನ ಕಟ್ಟಡದ ಮಾಲೀಕರು, ತಮ್ಮ ಕಟ್ಟಡದ ಒಳಚರಂಡಿ ಸಂಪರ್ಕವನ್ನು ಕಾವೇರಿ ನೀರು ಪೂರೈಸುವ ಕೊಳವೆಗೆ ನೀಡಿ, ಅದರ ಮೇಲೆ ಕಾಂಕ್ರೀಟ್ ಹಾಕಿದ್ದರು.
ಹೊಸದಾಗಿ ಅಳವಡಿಸಿದ್ದ ಕಾವೇರಿ ನೀರು ಸರಬರಾಜು ಕೊಳವೆ ಮಾರ್ಗದಲ್ಲಿ ಇನ್ನೂ ಕಾವೇರಿ ನೀರನ್ನು ಹರಿಸಿರಲಿಲ್ಲ. ಮಂಗಳವಾರ ರಾತ್ರಿ ಕೊಳವೆಯಲ್ಲಿ ಪರೀಕ್ಷಾರ್ಥ ನೀರು ಹರಿಸಿದಾಗ, ನೀರಿನ ಒತ್ತಡ ತಡೆಯದೇ ರಭಸವಾಗಿ ನೀರು ಹೊರಚೆಲ್ಲಿತು. ಇದರಿಂದ ನೀರು ಸರಬರಾಜು ಕೊಳವೆಯ ಜೊತೆಗೆ ಅಕ್ಕಪಕ್ಕದ ಮನೆಗಳ ಸಂಪರ್ಕಕ್ಕೂ ಹಾನಿಯಾಗಿತ್ತು.
ಜಲಮಂಡಳಿ ಸಿಬ್ಬಂದಿ, ಕೊಳವೆ ಮಾರ್ಗವನ್ನು ಶುದ್ಧೀಕರಿಸಿ, ಸೋಂಕು ರಹಿತಗೊಳಿಸಿದರು.
ಪತ್ತೆ ಕಾರ್ಯ ಚುರುಕು
ನಗರದಲ್ಲಿ ಅನಧಿಕೃತವಾಗಿ ಒಳಚರಂಡಿ ಸಂಪರ್ಕಗಳನ್ನು ಪತ್ತೆ ಮಾಡುವ ಕಾರ್ಯವನ್ನು ಚುರುಕುಗೊಳಿಸಲು ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್ ಮನೋಹರ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ‘ಇಂಥ ಪ್ರಕರಣಗಳು ಪತ್ತೆಯಾದಲ್ಲಿ ಅನಧಿಕೃತ ಸಂಪರ್ಕ ಪಡೆದಿರುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.