ಬೆಂಗಳೂರು: ನಗರದ ಸಂಜಯಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಕೇಂದ್ರದಲ್ಲಿ ಎಂಆರ್‌ಐ ಹಾಗೂ ಹೈಟೆಕ್ ಮಾದರಿಯ ಶಸ್ತ್ರಚಿಕಿತ್ಸಾ ಕೇಂದ್ರವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ಉದ್ಘಾಟಿಸಿದರು.
ಭೀಮ ಲೈಫ್ ಸೈನ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಆಸ್ಪತ್ರೆಯಲ್ಲಿ ಈ ಕೇಂದ್ರ ಸ್ಥಾಪಿಸಲಾಗಿದೆ. ಈವರೆಗೆ ಎಂಆರ್‌ಐ ಸ್ಕ್ಯಾನ್‌ಗೆ ರೋಗಿಗಳು ಬೇರೆ ಕಡೆಗೆ ಹೋಗಬೇಕಿತ್ತು. ಖಾಸಗಿ ಡಯಾಗ್ನಾಸ್ಟಿಕ್ ಕೇಂದ್ರಗಳಿಗಿಂತ ಶೇ 40 ಕಡಿಮೆ ದರದಲ್ಲಿ ಎಂಆರ್‌ಐ ಸ್ಕ್ಯಾನ್ ಮಾಡಿಸಲಾಗುತ್ತದೆ. ಬೇರೆ ಸರ್ಕಾರಿ ಆಸ್ಪತ್ರೆಗಳಿಂದ ಶಿಫಾರಸು ಮಾಡುವ ರೋಗಿಗಳಿಗೂ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಎಚ್.ಎಸ್.ಚಂದ್ರಶೇಖರ್ ತಿಳಿಸಿದರು.
‘ವಿಜಯಪುರದಲ್ಲಿ ₹40 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯ ನೂತನ ಶಾಖೆಯನ್ನು ಆರಂಭಿಸಲಾಗುತ್ತದೆ. ಇದರಲ್ಲಿ ಕ್ರೀಡಾ ರೋಗಿಗಳ ವಿಭಾಗ ಹಾಗೂ ರೊಬೋಟಿಕ್ ಶಸ್ತ್ರಚಿಕಿತ್ಸಾ ಸೌಲಭ್ಯ ಇರಲಿದೆ’ ಎಂದರು.
ಕುಮಾರಸ್ವಾಮಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಯದೇವ, ಇಂದಿರಾಗಾಂಧಿ, ಸಂಜಯಗಾಂಧಿ ಆಸ್ಪತ್ರೆಗಳು ರೋಗಿಗಳಿಗೆ ಉಚಿತ ಹಾಗೂ ಉನ್ನತ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿವೆ’ ಎಂದರು.
‘ಬಡವರಿಗೆ ಉತ್ತಮ ಚಿಕಿತ್ಸೆ ನೀಡುವುದು ನಮ್ಮ ಸರ್ಕಾರದ ಧ್ಯೇಯ. ಇದಕ್ಕಾಗಿನಗರದಲ್ಲಿ ಇನ್ನೂ ನಾಲ್ಕು ಸಾರ್ವಜನಿಕ ಆಸ್ಪತ್ರೆಗಳನ್ನು ತೆರೆಯಲಾಗುವುದು. ಅಂದಾಜು ₹150ಕೋಟಿ ವೆಚ್ಚದಲ್ಲಿ ಪ್ರತಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗುವುದು. ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ’ ಎಂದರು.
**
ಅಂಕಿ ಅಂಶಗಳು
70,000 - ಆಸ್ಪತ್ರೆಗೆ ವರ್ಷಕ್ಕೆ ಬರುವ ಹೊರರೋಗಿಗಳು
7,000 - ಒಳರೋಗಿಗಳು
6000 - ಆಸ್ಪತ್ರೆಯಲ್ಲಿ ವರ್ಷಕ್ಕೆ ನಡೆಸುವ ಶಸ್ತ್ರಚಿಕಿತ್ಸೆಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.