ಬೆಂಗಳೂರು: ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಸಂಸ್ಥೆಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆ ಮತ್ತು ಕ್ರೀಡಾ ವಿಭಾಗಕ್ಕೆ ಅತ್ಯಾಧುನಿಕ ಕಟ್ಟಡ ಮುಂದಿನ 15 ತಿಂಗಳಲ್ಲಿ ನಿರ್ಮಾಣವಾಗಲಿದೆ.
ಸಂಸ್ಥೆಯು ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಅ. ದೇವೇಗೌಡ ಅವರು ಈ ಕಟ್ಟಡದ ಶಿಲಾನ್ಯಾಸವನ್ನು ನೆರವೇರಿಸಿದರು.
‘ಈಗಾಗಲೇ ರೋಬೋಟಿಕ್ ತಂತ್ರಜ್ಞಾನವನ್ನು ಬಳಸಿ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ರೋಬೋಟಿಕ್ ತಂತ್ರಜ್ಞಾನ ಬಳಕೆಗೆ ಕ್ರಮವಹಿಸಿದ ಮೊದಲ ಸರ್ಕಾರಿ ಸ್ವಾಯತ್ತ ಸಂಸ್ಥೆ ಇದಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಚಿಕಿತ್ಸೆ ಒದಗಿಸುವಲ್ಲಿ ಸಂಸ್ಥೆ ಮುಂಚೂಣಿಯಲ್ಲಿದೆ. ಅದೇ ರೀತಿ, ಕ್ರೀಡಾ ಗಾಯಗಳ ಚಿಕಿತ್ಸೆಗೆ ಕೂಡ ಆದ್ಯತೆ ನೀಡಲಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಎಚ್.ಎಸ್. ಚಂದ್ರಶೇಖರ್ ತಿಳಿಸಿದರು.
‘ಇತ್ತೀಚಿನ ದಿನಗಳಲ್ಲಿ ಅಸ್ಥಿಸಂಧಿವಾತದ ಸಮಸ್ಯೆ ಸಾಮಾನ್ಯವಾಗಿದೆ. ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮೊಣಕಾಲು ಮಂಡಿ ಶಸ್ತ್ರಚಿಕಿತ್ಸೆಯ ಮೂಲಕ ಈ ಸಮಸ್ಯೆಗೆ ಪರಿಹಾರ ಒದಗಿಸಬಹುದು. ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಿಂತ ರೋಬೋಟಿಕ್ ಶಸ್ತ್ರಚಿಕಿತ್ಸೆ ಹೆಚ್ಚು ನಿಖರ ಹಾಗೂ ಪರಿಣಾಮಕಾರಿ. ವ್ಯಕ್ತಿ ಕೂಡ ಬೇಗ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ವಿವರಿಸಿದರು.
ಕ್ರೀಡಾ ಗಾಯಗಳಿಗೆ ಚಿಕಿತ್ಸೆ: ‘ಕ್ರೀಡಾಪಟುಗಳಿಗೆ ಗಾಯಗಳು ಕಾಡುತ್ತವೆ. ತಕ್ಷಣ ಮತ್ತು ಸೂಕ್ತ ಚಿಕಿತ್ಸೆ ನೀಡಿದಲ್ಲಿ ಕ್ರೀಡಾಪಟು ಮೊದಲಿನಂತೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ಗಾಯದ ಸಮಸ್ಯೆಯಿಂದ ಕೆಲವರು ಕ್ರೀಡೆಯಿಂದ ವಿಮುಖರಾಗುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ದುಬಾರಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಮನೋರಂಜನಾ ಕ್ರೀಡಾ ಚಟುವಟಿಕೆಗಳಿಂದ ಉಂಟಾಗುವ ಗಾಯಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ’ ಎಂದು ಡಾ.ಎಚ್.ಎಸ್. ಚಂದ್ರಶೇಖರ್ ತಿಳಿಸಿದರು.
‘ಕ್ರೀಡಾ ಕೇಂದ್ರವು ಪ್ರಯೋಗಾಲಯ ಒಳಗೊಂಡಿದೆ. ಕ್ರೀಡಾಪಟುವನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಮೊದಲು ಮತ್ತು ನಂತರ ಫಿಸಿಯೋಥೆರಪಿಸ್ಟ್ ತಂಡದೊಂದಿಗೆ ಮೌಲ್ಯಮಾಪನ ಮಾಡಲಾಗುತ್ತದೆ’ ಎಂದು ಹೇಳಿದರು.
₹ 29.30 ಕೋಟಿ ವೆಚ್ಚದಲ್ಲಿ ನಿರ್ಮಾಣ
ಸಂಸ್ಥೆಯ ಆವರಣದಲ್ಲಿ 1.15 ಎಕರೆಯಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಎರಡು ಮಹಡಿಯ ಈ ಕಟ್ಟಡಕ್ಕೆ ₹ 29.30 ಕೋಟಿ ವೆಚ್ಚವಾಗಲಿದೆ. ಕಟ್ಟಡದ ತಳಮಹಡಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಇರಲಿದ್ದು, ಆಮ್ಲಜನಕ ಶೇಖರಣಾ ಘಟಕ ಕೂಡ ಇರಲಿದೆ. ನೆಲ ಮಹಡಿಯಲ್ಲಿ ಹೊರ ರೋಗಿಗಳ ವಿಭಾಗ, ಔಷಧ ವಿತರಣಾ ವಿಭಾಗ, ಮುಖ್ಯ ಆರೋಗ್ಯಾಧಿಕಾರಿ ಕೊಠಡಿ, ರೋಗಿಗಳ ಅವಲೋಕನೆಗಾಗಿ 10 ಹಾಸಿಗೆಗಳ ವ್ಯವಸ್ಥೆ, ಲಘು ಶಸ್ತ್ರಚಿಕಿತ್ಸಾ ಕೊಠಡಿ ಹಾಗೂ ಶೌಚಾಲಯಗಳಿರುತ್ತದೆ.
ಮೊದಲ ಮಹಡಿಯಲ್ಲಿ ಕ್ರೀಡಾ ಪ್ರಯೋಗಾಲಯ, ಓಟದ ಟ್ರ್ಯಾಕ್, ಕ್ರಯೋ ಥೆರಪಿ ಕೊಠಡಿ, ಉಗ್ರಾಣ ಸೇರಿದಂತೆ ವಿವಿಧ ಸೌಲಭ್ಯಗಳು ಇರಲಿವೆ. ಎರಡನೇ ಮಹಡಿಯಲ್ಲಿ ಕ್ರೀಡಾ ಪ್ರಯೋಗಾಲಯ, ವ್ಯಾಯಾಮ ಸ್ಥಳ, ವೈದ್ಯರ ವಿಶ್ರಾಂತಿ ಕೊಠಡಿ, ಆಡಳಿತ ಕಚೇರಿ ಸೇರಿದಂತೆ ವಿವಿಧ ಘಟಕಗಳು ಇರಲಿವೆ ಎಂದು ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.