ಬೆಂಗಳೂರು:‘ಗ್ರಾಮೀಣ ಭಾಗದ ಮಹಿಳೆಯರ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ‘ಸಂಜೀವಿನಿ’ ಸಂಘಗಳು ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿವೆ’ ಎಂದು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್ಆರ್‌ಎಲ್‌ಎಂ) ನಿರ್ದೇಶಕಿ ಬಿ.ಆರ್.ಮಮತಾ ಹೇಳಿದರು.
ಕರ್ನಾಟಕ ಪತ್ರಕರ್ತೆಯರ ಸಂಘ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಪತ್ರಿಕಾ ದಿನಾಚರಣೆ’ ಹಾಗೂ ‘ಪತ್ರಕರ್ತೆಯರ ಸಮ್ಮಿಲನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗ್ರಾಮೀಣ ಭಾಗದ ಮಹಿಳೆಯರ ಅಭಿವೃದ್ಧಿಗಾಗಿ ಜನ್ಮತಾಳಿದ ಸಂಜೀವಿನಿ ಸಂಘ ಇಂದು ರಾಜ್ಯದ ಕುಗ್ರಾಮಗಳನ್ನು ತಲುಪಿದೆ.ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ‘ಸಂಜೀವಿನಿ ಸೀರೆ’ ಯೋಜನೆಗಳಿಗೆ ಸಿದ್ಧತೆ ನಡೆಸಲಾಗುತ್ತಿದೆ. ಈ ಸೀರೆಗಳಿಗೆ ಆಯಾ ಜಿಲ್ಲೆಗಳ ಹೆಸರಿಡಲಾಗುವುದು. ಸಂಘದ ವತಿಯಿಂದ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿ ಪ್ರೋತ್ಸಾಹಿಸಲಾಗುವುದು. ಆಸಕ್ತರು ತಮ್ಮ ಸ್ಥಳಿಯ ಮಟ್ಟದ ಸಂಜೀವಿನಿ ಸಂಘಕ್ಕೆ ಸೇರಬಹುದು’ ಎಂದರು.
ಹಿರಿಯ ಪತ್ರಕರ್ತ ಈಶ್ವರ ದೈತೋಟ ಮಾತನಾಡಿ, ‘ವಿದ್ಯುನ್ಮಾನ ಮಾಧ್ಯಮದಲ್ಲಿಪ್ರಸ್ತುತ ಶೇ 40ರಷ್ಟು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಮುದ್ರಣ ಮಾಧ್ಯಮದಲ್ಲಿ ಮಹಿಳೆಯರ ಪ್ರಮಾಣ ಈಗಲೂ ಕಡಿಮೆ ಇದೆ. ಈ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.
ರಾಜ್ಯದ ವಿವಿಧ ಮಹಿಳಾ ಸಂಘಗಳ ಸದಸ್ಯರು ತಯಾರಿಸಿದ್ದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವನ್ನು ಏರ್ಪಡಿಸಲಾಗಿತ್ತು.ಹಿರಿಯ ಪತ್ರಕರ್ತೆಯರಾದ ಕುಶಲಾ ಡಿಮೆಲ್ಲೊ,ಕೆ.ಎಚ್.ಸಾವಿತ್ರಿ,ಡಾ.ವಿಜಯಮ್ಮ,ನಾಗಮಣಿ ಎಸ್.ರಾವ್, ಪಿ.ಸುಶೀಲಾ, ಗಾಯತ್ರಿ ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.