ADVERTISEMENT

ಸಸ್ಯಕಾಶಿ ಮಡಿಲಲ್ಲಿ ‘ಸಂಕನ್‌ ಉದ್ಯಾನ’

₹ 54 ಲಕ್ಷ ವೆಚ್ಚದಲ್ಲಿ ಸುಮಾರು 6 ಲಕ್ಷ ಸಸಿಗಳನ್ನು ಖರೀದಿಸುವ ಯೋಜನೆ l 2 ಎಕರೆ ಪ್ರದೇಶದಲ್ಲಿ ನಿರ್ಮಾಣ

ಕಲಾವತಿ ಬೈಚಬಾಳ
Published 28 ಅಕ್ಟೋಬರ್ 2018, 19:57 IST
Last Updated 28 ಅಕ್ಟೋಬರ್ 2018, 19:57 IST
ಸಂಕನ್‌ ಉದ್ಯಾನ –ಸಾಂದರ್ಭಿಕ ಚಿತ್ರ
ಸಂಕನ್‌ ಉದ್ಯಾನ –ಸಾಂದರ್ಭಿಕ ಚಿತ್ರ   

ಬೆಂಗಳೂರು:ಹಸಿರ ಸಿರಿಯ ಮೈತುಂಬಿಕೊಂಡ ಸಸ್ಯಕಾಶಿ ಲಾಲ್‌ಬಾಗ್‌ನ ಸೌಂದರ್ಯವನ್ನು ಹೆಚ್ಚಿಸಲು ಮತ್ತೊಂದು ಉದ್ಯಾನ ಇಲ್ಲಿ ಮೈದಳೆಯುತ್ತಿದೆ. ಇಲ್ಲಿನ ಪಶ್ಚಿಮ ದ್ವಾರದ ಬಳಿಯ ಧನ್ವಂತರಿ ವನದ ಸಮೀಪ ಅಪರೂಪದ ಜಲ ಹಾಗೂ ಜೌಗು ಸಸ್ಯಗಳ ‘ಸಂಕನ್‌ ಉದ್ಯಾನ’ ರೂಪುಗೊಳ್ಳುತ್ತಿದೆ.

ಸುಮಾರು 2 ಎಕರೆ ಪ್ರದೇಶದಲ್ಲಿ ರೂಪುಗೊಳ್ಳುವ ಸಂಕನ್‌ ಉದ್ಯಾನ ಹಸಿರು ಹುಲ್ಲುಹಾಸು, ಕಲ್ಲಿನ ಆಸನ, ಕಣ್ಸೆಳೆವ ತಾವರೆ ಕೊಳ, ಪುಟ್ಟ ಕಲ್ಯಾಣಿಯಿಂದ ಕಂಗೊಳಿಸಲಿದೆ.

ನೆಲಮಟ್ಟದಿಂದ ಕೆಳಗೆ ಈ ಉದ್ಯಾನವನ್ನು ನಿರ್ಮಿಸುತ್ತಿರುವುದರಿಂದ ಇದನ್ನು ‘ಸಂಕನ್‌ ಉದ್ಯಾನ’ ಎಂದು ಕರೆಯಲಾಗುತ್ತದೆ. ಇದು ಸಂಪೂರ್ಣ ತೇವಾಂಶ ಭರಿತವಾಗಿದ್ದು, ಇಲ್ಲಿನ ವಾತಾವರಣವನ್ನು ಮತ್ತಷ್ಟು ತಂಪುಗೊಳಿಸಲಿದೆ. ಬೊಟಾನಿಕಲ್‌, ಬೋನ್ಸಾಯ್‌, ಟ್ರೋಪಿಕಲ್‌ ಉದ್ಯಾನಗಳ ಸಾಲಿಗೆ ಇದು ನಾಲ್ಕನೆಯ ಉದ್ಯಾನವಾಗಿ ಸಸ್ಯಕಾಶಿಯ ಒಡಲನ್ನು ಸೇರಲಿದೆ.

ADVERTISEMENT

‘2017 ರಲ್ಲಿ ಉದ್ಯಾನದ ಕಾಮಗಾರಿ ಶುರುವಾಗಿದ್ದು, 2018ರ ಜನವರಿಗೆ ಪೂರ್ಣಗೊಂಡಿದೆ’ ಎಂದು ಲಾಲ್‌ಬಾಗ್‌ನ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಂ‌.ಆರ್‌.ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಆರು ತಿಂಗಳ ಹಿಂದೆಯೇ ಸಸಿಗಳನ್ನು ಖರೀದಿಸಿದ್ದೇವೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಅವುಗಳನ್ನು ನರ್ಸರಿಗಳಲ್ಲಿ ಇಟ್ಟು ಪೋಷಿಸಲಾಗುತ್ತಿದೆ. ಸದ್ಯ ಚಳಿಗಾಲ ಆರಂಭವಾಗಿರುವುದರಿಂದ ಸಸಿಗಳನ್ನು ನೆಡಲು ಇದು ಪ್ರಶಸ್ತ ಕಾಲ’ ಎಂದರು.

ಲಾಲ್‌ಬಾಗ್‌ ಕೆರೆ ಹೊರತುಪಡಿಸಿ, ಉದ್ಯಾನದಲ್ಲಿ ಎಲ್ಲಿಯೂ ನೀರು ನಿಲ್ಲಿಸಲು ಅವಕಾಶವಿಲ್ಲ. ಹಾಗಾಗಿ, ತೇವಾಂಶಭರಿತ ವಾತಾವರಣ ರೂಪಿಸಲು ಈ ಉದ್ಯಾನ ನಿರ್ಮಿಸಲಾಗುತ್ತಿದೆ. ಸುಮಾರು 600 ಬಗೆಯ ಸಸ್ಯಗಳನ್ನು ಈ ಉದ್ಯಾನದಲ್ಲಿ ಬೆಳೆಸಲಾಗುತ್ತದೆ.

‘ಊಟಿ, ಹೈದರಾಬಾದ್‌, ಪುಣೆ ಮತ್ತಿತರ ಕಡೆಗಳಿಂದ ಈಗಾಗಲೇ ಶೇಕಡ 70ರಷ್ಟು ಸಸಿಗಳನ್ನು ತರಿಸಲಾಗಿದೆ. ₹54 ಲಕ್ಷ ವೆಚ್ಚದಲ್ಲಿ ಸುಮಾರು 6 ಲಕ್ಷ ಸಸಿಗಳನ್ನು ಖರೀದಿಸುವ ಯೋಜನೆ ಇದೆ’ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ.ಜಗದೀಶ್‌ ತಿಳಿಸಿದರು.

‘ಈಗಾಗಲೇ ಇಲ್ಲಿ ನೈಸರ್ಗಿಕವಾಗಿ ಹಲವು ಸಸಿಗಳು, ಕಳೆ ಗಿಡಗಳು ಬೆಳೆದುಕೊಂಡಿವೆ. ಎಲ್ಲವನ್ನೂ ತೆರವುಗೊಳಿಸದೆ, ಉದ್ಯಾನಕ್ಕೆ ಸೂಕ್ತವಾಗುವಂತಹ ಶೇಕಡ25 ರಷ್ಟು ಸಸಿಗಳನ್ನು ಉಳಿಸಿಕೊಳ್ಳಲಿದ್ದೇವೆ’ ಎಂದರು.

‘ಇಲ್ಲಿನ ಸಸ್ಯತಜ್ಞರ ತಂಡ ಪ್ರತಿವರ್ಷವೂ ಮಳೆಗಾಲದಲ್ಲಿ ಪಶ್ಚಿಮ ಘಟ್ಟಕ್ಕೆ ಭೇಟಿ ನೀಡುತ್ತದೆ. ಅಲ್ಲಿನ ಅಪರೂಪದ ಸಸ್ಯಗಳನ್ನು ತಂದು ಲಾಲ್‌ಬಾಗ್‌ನಲ್ಲಿ ಬೆಳೆಸುವುದು ಈ ಪ್ರವಾಸದ ಉದ್ದೇಶ. ಪಶ್ಚಿಮಘಟ್ಟ, ಲಾಲ್‌ಬಾಗ್‌ ಸಸ್ಯತೋಟದ ಪ್ರಮುಖ ಆಕರ’ ಎಂದರು.

ನೀರಿನ ನಿರ್ವಹಣೆ:ಲಾಲ್‌ಬಾಗ್ 240 ಎಕರೆ ಪ್ರದೇಶವನ್ನು ಹೊಂದಿರುವ ಉದ್ಯಾನವಾಗಿದ್ದು, ಇದಕ್ಕೆ ಸಮರ್ಪಕವಾಗಿ ನೀರಿನ ನಿರ್ವಹಣೆ ಮಾಡುವುದು ದೊಡ್ಡ ಸವಾಲು. ಇಲ್ಲಿರುವ ಕೆರೆ, ಒಂಬತ್ತು ಕೊಳವೆ ಬಾವಿಗಳು ಹಾಗೂ ಶುದ್ಧೀಕರಿಸಿದ ನೀರನ್ನು ಉದ್ಯಾನಕ್ಕೆ ಉಣಿಸಲಾಗುತ್ತಿದೆ.

ಮಾಹಿತಿ ಫಲಕಗಳ ಅಳವಡಿಕೆ: ಉದ್ಯಾನದಲ್ಲಿನ ಸಸ್ಯಗಳ ಬಳಿ ಅವುಗಳ ವೈಜ್ಞಾನಿಕ ಹೆಸರಿರುವ ಮಾಹಿತಿ ಫಲಕಗಳನ್ನು ಅಳವಡಿಸಲಿದ್ದೇವೆ. ಪ್ರವಾಸಿಗರು ಎಲ್ಲಾ ಸಸ್ಯಗಳ ಬಳಿ ಹೋಗಿ ಅವುಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಪಾದಚಾರಿ ಮಾರ್ಗವನ್ನೂ ನಿರ್ಮಿಸಲಾಗಿದೆ.

‘ಉದ್ಯಾನ ನಿರ್ಮಿಸಿ, ಮನೆಯ ಅಂದ ಹೆಚ್ಚಿಸಿ’

‘ಉದ್ಯಾನಪ್ರಿಯರು ತಮ್ಮ ಮನೆಗಳಲ್ಲಿ ಜೌಗು ಪ್ರದೇಶ ನಿರ್ಮಾಣ ಮಾಡಿ ಹಾಗೂ ಜಲಚರ ಸಸ್ಯಗಳನ್ನು ಬೆಳೆಸುವವರಿಗೆ ಸಂಕನ್‌ ಉದ್ಯಾನ ಉತ್ತೇಜನ ನೀಡಲಿದೆ. ಸುಲಭ ನಿರ್ವಹಣೆಯಿಂದ ಇಂತಹ ಉದ್ಯಾನ ನಿರ್ಮಾಣ ಮಾಡಬಹುದು. ಇದರಿಂದ ಮನೆಯ ಸೌಂದರ್ಯ ಹೆಚ್ಚಿಸಬಹುದು’ ಎಂದು ಜಗದೀಶ್‌ ತಿಳಿಸಿದರು.

ಯಾವ ಸಸ್ಯಗಳು ಇರಲಿವೆ?

ಜೌಗು ಪ್ರದೇಶದಲ್ಲಿ ಬೆಳೆಯುವ ಬಜೆ, ಅಲೋಶಿಯ, ಜಲ ಸಸ್ಯಗಳಾದ ನಿಂಫಿಯಾ ಆಲ್ಬಾ (ನೀರಿನಲ್ಲಿ ಬೆಳೆಯುವ ಲಿಲ್ಲಿ ಹೂವಿನ ಒಂದು ಜಾತಿ), ಫ್ಲೋಟಿಂಗ್ ಹಾರ್ಟ್, ತಾವರೆ, ಯೆಲ್ಲೋ ಪಾಂಡ್ ಲಿಲ್ಲಿ (ನೀರ ಮೇಲೆ ತೇಲುವ ಹಳದಿ ಹೂ), ಸೈಪ್ರಸ್‌ ಜಾತಿಯ ಸಸ್ಯಗಳು, ಪಾಪಿ ಓರಸ್‌ ಎಲಿಕೋ ನಿಯಾ ಹಾಗೂ ಟೈಫಾ ಹುಲ್ಲನ್ನು ಸಂಕನ್‌ ಉದ್ಯಾನದಲ್ಲಿ ಬೆಳೆಸಲಾಗುತ್ತದೆ.

***

ಬೇಸಿಗೆಯಲ್ಲೂ ಸಸ್ಯ, ಪಕ್ಷಿಗಳಿಗೆ ಯಾವುದೇ ರೀತಿಯ ನೀರಿನ ಅಭಾವ ಉಂಟಾಗಿಲ್ಲ. ಉದ್ಯಾನಕ್ಕೆ ಬೇಕಾದಷ್ಟು ನೀರು ಲಭ್ಯವಿದೆ

-ಎಂ.ಜಗದೀಶ್‌, ಜಂಟಿ ನಿರ್ದೇಶಕ, ರಾಜ್ಯ ತೋಟಗಾರಿಕೆ ಇಲಾಖೆ

ಬಹು ಮಹತ್ತರವಾದ ಸಂಕನ್‌ ಉದ್ಯಾನದಲ್ಲಿ ಶೀಘ್ರವೇ ಸಸಿಗಳನ್ನು ನೆಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ

-ವೈ.ಎಸ್‌.ಪಾಟೀಲ, ರಾಜ್ಯ ತೋಟಗಾರಿಕೆ ಇಲಾಖೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.